ಉಪ್ಪಿಗಿಂತ ರುಚಿ ಇಲ್ಲ, ಹೆಚ್ಚಾದರೆ ಅಪಾಯ ತಪ್ಪಿದ್ದಲ್ಲ!
ಆಹಾರಗಳ ಮೇಲೆ ಹೆಚ್ಚು ಉಪ್ಪು ಹಾಕಿಕೊಂಡು ತಿನ್ನುತ್ತೀರಾ? ಈ ಅಭ್ಯಾಸವನ್ನು ನಿಲ್ಲಿಸಿ. ಇಲ್ಲದಿದ್ದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.


Published : September 2, 2025 at 6:42 PM IST
ಯಾವುದೇ ತರಕಾರಿಯಲ್ಲಿ ಉಪ್ಪಿನ ಪ್ರಮಾಣ ಸ್ವಲ್ಪ ಕಡಿಮೆಯಾದರೆ, ರುಚಿ ಚೆನ್ನಾಗಿರದು. ಅಂತಹ ಪರಿಸ್ಥಿತಿಯಲ್ಲಿ ಕೆಲವರು ಇನ್ನಷ್ಟು ಉಪ್ಪು ಸೇರಿಸಿಕೊಂಡು ರುಚಿ ಹೆಚ್ಚಿಸುತ್ತಾರೆ. ಇದನ್ನು ಮಾಡುವುದು ಎಷ್ಟು ಅಪಾಯಕಾರಿ ಎಂಬುದು ಅವರಿಗೆ ತಿಳಿದಿಲ್ಲ.
ಆಹಾರದಲ್ಲಿ ಉಪ್ಪಿನ ಅತಿಯಾದ ಸೇವನೆ ಮಾರಕ ಎಂದು ಅನೇಕ ಅಧ್ಯಯನಗಳು ದೃಢಪಡಿಸಿವೆ. ಅತಿಯಾಗಿ ಉಪ್ಪನ್ನು ಸೇವಿಸುವುದು ಸೈಲೆಂಟ್ ಕಿಲ್ಲರ್ ಅಂತೆ.
ಅತಿಯಾದ ಉಪ್ಪು ಸೇವನೆ ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು ಮತ್ತು ಹೃದಯಾಘಾತದಂತಹ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು, ಉಪ್ಪನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂದು ಡಾ.ರಾಜಾ ರವಿಚಂದ್ರನ್ ತಿಳಿಸುತ್ತಾರೆ.
ಒಂದು ದಿನಕ್ಕೆ ಎಷ್ಟು ಉಪ್ಪು ಸೇವಿಸಬೇಕು?: ವಿಶ್ವ ಆರೋಗ್ಯ ಸಂಸ್ಥೆ (WHO)ಯ ಪ್ರಕಾರ, ವಯಸ್ಕರು ಪ್ರತಿದಿನ 5 ಗ್ರಾಂ (ಸುಮಾರು 1 ಟೀಸ್ಪೂನ್)ಗಿಂತ ಕಡಿಮೆ ಉಪ್ಪು ಸೇವಿಸಬೇಕು. ಈ ಪ್ರಮಾಣ ಸುಮಾರು 2,000 ಮಿಲಿಗ್ರಾಂ ಸೋಡಿಯಂಗೆ ಸಮ. ಇದು ದೇಹದ ಆರೋಗ್ಯಕ್ಕೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನದು. ಹೆಚ್ಚು ಉಪ್ಪು ತಿನ್ನುವುದರಿಂದ ಮೂತ್ರಪಿಂಡದ ಸಮಸ್ಯೆಗಳೂ ಉಂಟಾಗಬಹುದು ಎಂದು ಡಾ.ರಾಜಾ ರವಿಚಂದ್ರನ್ ಎಚ್ಚರಿಕೆ ನೀಡುತ್ತಾರೆ.
ವಾರ್ಷಿಕವಾಗಿ 8 ಮಿಲಿಯನ್ ಜನರು ಸಾವು: ವಿಶ್ವಾದ್ಯಂತ 8 ಮಿಲಿಯನ್ ಸಾವುಗಳು ಕಳಪೆ ಆಹಾರ ಪದ್ಧತಿಯಿಂದಾಗಿಯೇ ಸಂಭವಿಸುತ್ತವೆ. ಇವುಗಳಲ್ಲಿ 19 ಲಕ್ಷ ಸಾವುಗಳು ಅತಿಯಾದ ಉಪ್ಪು (ಸೋಡಿಯಂ) ಸೇವನೆಯಿಂದಾಗಿ ಸಂಭವಿಸುತ್ತವೆ. ಆದ್ದರಿಂದ, ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಪರಿಣಾಮವಾಗಿ, ಹೃದಯ ಕಾಯಿಲೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ. ಅತಿಯಾದ ಸೋಡಿಯಂ ಸೇವನೆಗೆ ಸಂಬಂಧಿಸಿದ ಇತರ ಕಾಯಿಲೆಗಳಾದ ಜಠರಗರುಳಿನ ಕ್ಯಾನ್ಸರ್ ಅಪಾಯವಿದೆ ಎಂದು ಡಾ.ರಾಜಾ ರವಿಚಂದ್ರನ್ ಹೇಳುತ್ತಾರೆ.
ಪೊಟ್ಯಾಸಿಯಂ ಕ್ಲೋರೈಡ್ ಇರುವ ಉಪ್ಪು ಬಳಸಿ: ಸೋಡಿಯಂ ಕ್ಲೋರೈಡ್ ಉಪ್ಪಿನ ಬದಲಿಗೆ ಪೊಟ್ಯಾಸಿಯಮ್ ಕ್ಲೋರೈಡ್ ಹೊಂದಿರುವ ಉಪ್ಪು ಬಳಸುವುದರಿಂದ ರಕ್ತದಲ್ಲಿನ ಸೋಡಿಯಂ ಮಟ್ಟ ಕಡಿಮೆಯಾಗುತ್ತದೆ. ಮತ್ತೊಂದೆಡೆ, ರಕ್ತದೊತ್ತಡವನ್ನು ಕಡಿಮೆ ಮಾಡುವ ಪೊಟ್ಯಾಸಿಯಂ ಪ್ರಮಾಣ ಹೆಚ್ಚಾಗುತ್ತದೆ.
ಸರಿಯಾದ ಪ್ರಮಾಣದಲ್ಲಿ ಪೊಟ್ಯಾಸಿಯಂ ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಏಕೆಂದರೆ, ಪೊಟ್ಯಾಸಿಯಂ ರಕ್ತನಾಳಗಳನ್ನು ಸಡಿಲಗೊಳಿಸಲು ಹಾಗೂ ದೇಹದಿಂದ ಹೆಚ್ಚುವರಿ ಸೋಡಿಯಂ ತೆಗೆದುಹಾಕಲು ಸಹಾಯ ಮಾಡುತ್ತದೆ ಹಾಗೂ ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಅತಿಯಾದ ಉಪ್ಪು ಸೇವನೆಯ ಅಡ್ಡಪರಿಣಾಮಗಳೇನು?:
ಅಧಿಕ ರಕ್ತದೊತ್ತಡದ ಸಮಸ್ಯೆ: ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ಅದು ರಕ್ತದೊತ್ತಡದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಹೆಚ್ಚು ಉಪ್ಪು ತಿನ್ನುವುದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ (National Institute of Health) ವರದಿಯ ಪ್ರಕಾರ, ತಲೆನೋವು, ತಲೆತಿರುಗುವಿಕೆ, ವೇಗದ ಹೃದಯ ಬಡಿತದಂತಹ ಸಮಸ್ಯೆಗಳು ಅತಿಯಾದ ಉಪ್ಪು ಸೇವನೆಯಿಂದ ಉಂಟಾಗಬಹುದು.
ಆಗಾಗ್ಗೆ ಮೂತ್ರ ವಿಸರ್ಜನೆ: ತಜ್ಞರ ಪ್ರಕಾರ, ಅತಿಯಾದ ಉಪ್ಪು ಸೇವನೆಯು ಆಗಾಗ್ಗೆ ಮೂತ್ರ ವಿಸರ್ಜನೆಯ ಸಮಸ್ಯೆಗೆ ಕಾರಣವಾಗಬಹುದು. ಜೊತೆಗೆ ಮೂತ್ರದ ಬಣ್ಣವು ಗಾಢವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಮೂತ್ರದ ಪ್ರಮಾಣವೂ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಮೂತ್ರಪಿಂಡದ ಮೇಲಿನ ಒತ್ತಡ ಹೆಚ್ಚಾಗುತ್ತದೆ, ಇದರಿಂದಾಗಿ ಮೂತ್ರಪಿಂಡವು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
ಆಯಾಸ ಮತ್ತು ದೌರ್ಬಲ್ಯ: ಅತಿಯಾದ ಉಪ್ಪು ಸೇವನೆಯು ದೇಹದಲ್ಲಿ ದೌರ್ಬಲ್ಯ ಮತ್ತು ಆಯಾಸಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ.
ದೇಹದಲ್ಲಿ ಊತ ಹೆಚ್ಚಾಗುತ್ತದೆ: ಉಪ್ಪಿನ ಅತಿಯಾದ ಸೇವನೆಯು ದೇಹದಲ್ಲಿ ನೀರು ಸಂಗ್ರಹವಾಗಲು ಕಾರಣವಾಗುತ್ತದೆ. ಇದರ ಪರಿಣಾಮವಾಗಿ, ಕೈಗಳು, ಕಾಲುಗಳು, ಮುಖ, ಪಾದಗಳು ಊದಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ದಿನಕ್ಕೆ ಹೆಚ್ಚು ಸಲ ಬಾಯಾರಿಕೆ: ಹೆಚ್ಚು ಉಪ್ಪು ತಿನ್ನುವುದರಿಂದ ಆಗಾಗ್ಗೆ ಬಾಯಾರಿಕೆ ಉಂಟಾಗುತ್ತದೆ. ಹೆಚ್ಚು ನೀರು ಕುಡಿಯಬೇಕು ಎನಿಸುತ್ತದೆ.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್ಸೈಟ್ ವೀಕ್ಷಿಸಬಹುದು (ಸಂಶೋಧನಾ ವರದಿ):
ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: ಎಷ್ಟೇ ಪ್ರಯತ್ನಿಸಿದ್ರೂ ಹೊಟ್ಟೆ ಕ್ಲೀನ್ ಆಗುತ್ತಿಲ್ಲವೇ? ಈ ಆಹಾರ ಕ್ರಮದಿಂದ ಮಲಬದ್ಧತೆ ದೂರ-ತಜ್ಞರ ಸಲಹೆ
ದೇಹದ ತೂಕ ಇಳಿಸಿಕೊಳ್ಳಲು ಉಪವಾಸ ಮಾಡಬೇಕಿಲ್ಲ: ತಜ್ಞರ ಸರಳ ಟಿಪ್ಸ್ ಇಲ್ಲಿದೆ ನೋಡಿ

