ಎಷ್ಟೇ ಪ್ರಯತ್ನಿಸಿದ್ರೂ ಹೊಟ್ಟೆ ಕ್ಲೀನ್ ಆಗುತ್ತಿಲ್ಲವೇ? ಈ ಆಹಾರ ಕ್ರಮದಿಂದ ಮಲಬದ್ಧತೆ ದೂರ-ತಜ್ಞರ ಸಲಹೆ
ಅನೇಕರು ಮಲಬದ್ಧತೆಯ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿರುತ್ತಾರೆ. ಇದನ್ನು ಪರಿಹರಿಸಲು ಸರಿಯಾದ ಆಹಾರ ಕ್ರಮವನ್ನು ಪಾಲಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.


Published : September 1, 2025 at 6:37 PM IST
|Updated : September 1, 2025 at 6:53 PM IST
Avoid Constipation Through Diet: ಬೆಳಿಗ್ಗೆದ್ದಾಗ ಹೊಟ್ಟೆ ಖಾಲಿಯಾಗಿದ್ದರೆ ದಿನದ ಎಲ್ಲಾ ಕೆಲಸಗಳನ್ನು ಶಾಂತವಾಗಿ ಮಾಡಬಹುದು. ಆದರೆ, ಕೆಲವರಿಗೆ ಈ ಕಾರ್ಯ ಸರಿಯಾಗಿ ನಡೆಯುವುದಿಲ್ಲ. ಗಂಟೆಗಟ್ಟಲೆ ಶೌಚಾಲಯದೊಳಗೆ ಕುಳಿತುಕೊಳ್ಳುವುದು ಸರಿಯಲ್ಲ. ಮಲಬದ್ಧತೆಯಿಂದ ಉಬ್ಬುವುದು, ನೋವು ಹಾಗೂ ಸೆಳೆತದಂತಹ ಸಮಸ್ಯೆಗಳು ಉಂಟಾಗುತ್ತವೆ.
ಈ ಆರೋಗ್ಯ ಸಮಸ್ಯೆಯನ್ನು ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ವಿವಿಧ ಔಷಧಿಗಳು ಮತ್ತು ಸಿರಪ್‌ಗಳು ದೊರೆಯುತ್ತವೆ. ಇವುಗಳನ್ನು ತೆಗೆದುಕೊಂಡಾಗ ಸ್ವಲ್ಪ ಪರಿಹಾರ ಲಭಿಸುತ್ತದೆ. ಅದರ ಹೊರತಾಗಿ ನೀವು ಸಮಸ್ಯೆಯನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಬಯಸಿದರೆ ಕೆಲವು ಆಹಾರಗಳನ್ನು ಡಯಟ್‌ನಲ್ಲಿ ಸೇರಿಸಬೇಕು ಎಂದು ತಜ್ಞರು ತಿಳಿಸುತ್ತಾರೆ.

ನೆನೆಸಿಟ್ಟ ಒಣದ್ರಾಕ್ಷಿಯ ನೀರು: ಕಪ್ಪು ಒಣದ್ರಾಕ್ಷಿ ಮಲಬದ್ಧತೆ ನಿವಾರಣೆಗೆ ಉತ್ತಮ ಮೂಲಗಳಲ್ಲಿ ಒಂದು. ಒಂದು ಗ್ಲಾಸ್ ನೀರಿನಲ್ಲಿ ರಾತ್ರಿಯಿಡೀ ನಾಲ್ಕರಿಂದ ಐದು ಕಪ್ಪು ಒಣದ್ರಾಕ್ಷಿಗಳನ್ನು ನೆನೆಸಿಡಿ. ಬೆಳಿಗ್ಗೆ ನೀರನ್ನು ಕುಡಿಯಿರಿ. ಒಣದ್ರಾಕ್ಷಿಗಳಲ್ಲಿ ಫೈಬರ್ ಸಮೃದ್ಧ. ಅವುಗಳನ್ನು ನೀರಿನಲ್ಲಿ ನೆನೆಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕರುಳಿನ ಚಲನಶೀಲತೆ ಸುಧಾರಿಸುತ್ತದೆ. ಒಣದ್ರಾಕ್ಷಿಯಲ್ಲಿ ಸೋರ್ಬಿಟೋಲ್ ಎಂಬ ನೈಸರ್ಗಿಕ ಸಂಯುಕ್ತವಿದೆ. ಇದು ಮಲವನ್ನು ಮೃದುಗೊಳಿಸುತ್ತದೆ ಹಾಗೂ ಮಲವಿಸರ್ಜನೆಗೆ ಸಹಾಯವಾಗುತ್ತದೆ. ದೇಹ ಕಬ್ಬಿಣವನ್ನೂ ಪಡೆಯುತ್ತದೆ.
ಬಿಸಿನೀರಿನಲ್ಲಿ ತುಪ್ಪ ಸೇರಿಸಿ: ಬೆಚ್ಚಗಿನ ನೀರು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನೀವು ಬೆಳಿಗ್ಗೆದ್ದ ತಕ್ಷಣ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಲು ಹೇಳಲಾಗುತ್ತದೆ. ಒಂದು ಟೀಸ್ಪೂನ್ ದೇಸಿ ತುಪ್ಪವನ್ನು ಸೇರಿಸಿ ಕುಡಿಯಿರಿ. ಕರುಳಿನ ಚಲನಶೀಲತೆಯನ್ನು ಸುಧಾರಿಸುತ್ತದೆ. ಹೊಟ್ಟೆ ಶುದ್ಧವಾಗುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಈ ನೀರನ್ನು ಕುಡಿಯುತ್ತಿದ್ದರೆ ಮಲಬದ್ಧತೆ ತೊಂದರೆ ಕಡಿಮೆಯಾಗುತ್ತದೆ.
ಕಿವಿ ಹಣ್ಣು: ಕಿವಿ ಹಣ್ಣು ಮಲಬದ್ಧತೆಯನ್ನು ತಡೆಯುತ್ತದೆ. ಮಲಬದ್ಧತೆಯ ಸಂದರ್ಭದಲ್ಲಿ ಈ ಹಣ್ಣು ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಕಿವಿ ಹಣ್ಣನ್ನು ತಿಂಡಿಯಾಗಿ ಅಥವಾ ಮಧ್ಯಾಹ್ನದ ತಿಂಡಿಯಾಗಿ ಕೆಲವು ದಿನಗಳವರೆಗೆ ದಿನಕ್ಕೆ 1 ಅಥವಾ 2 ಸೇವಿಸಬೇಕು. ಕಿವಿ ಹಣ್ಣಿನಲ್ಲಿರುವ ಕರಗುವ ಹಾಗೂ ಕರಗದ ನಾರುಗಳು ಮಲವನ್ನು ಮೃದುಗೊಳಿಸುತ್ತವೆ. ಹೊಟ್ಟೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ ಎನ್ನುತ್ತಾರೆ ತಜ್ಞರು.

ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುವುದು ಹೇಗೆ?: ಮಲಬದ್ಧತೆ ಹೆಚ್ಚಾದರೆ, ಅದು ಮೂಲವ್ಯಾಧಿ ಮತ್ತು ಬಿರುಕುಗಳಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಜೀರ್ಣಕ್ರಿಯೆಗೂ ಸಮಸ್ಯೆಯಾಗುತ್ತದೆ.
ನಾವು ಸೇವಿಸುವ ಆಹಾರವನ್ನು ಕಾಲಕಾಲಕ್ಕೆ ಜೀರ್ಣಿಸಿಕೊಳ್ಳಬೇಕು. ಉಳಿದ ತ್ಯಾಜ್ಯ ಹೊರಬರಬೇಕು. ಇದಕ್ಕಾಗಿ ಪ್ರತಿದಿನ ಪೌಷ್ಟಿಕಾಂಶವನ್ನು ತೆಗೆದುಕೊಳ್ಳಬೇಕು. ಹೆಚ್ಚು ಫೈಬರ್ ಆಹಾರ ಸೇವಿಸಬೇಕು. ಸಾಕಷ್ಟು ನೀರು ಕುಡಿಯಬೇಕು. ಸ್ವಲ್ಪ ವ್ಯಾಯಾಮ ಮಾಡುವುದು ತುಂಬಾ ಮುಖ್ಯ.
ಮಲಬದ್ಧತೆ ಸಮಸ್ಯೆಗೆ ಹಲವು ಔಷಧಗಳಿವೆ. ಇವುಗಳನ್ನು ಬಳಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಔಷಧಗಳು ಹಲವು ಸಮಸ್ಯೆಯನ್ನು ತಕ್ಷಣವೇ ಕಡಿಮೆ ಮಾಡುತ್ತವೆ. ತುಪ್ಪದೊಂದಿಗೆ ಬೆರೆಸಿದ ನೀರು ಕುಡಿಯುವುದರಿಂದ ಸಮಸ್ಯೆ ತಡೆಗಟ್ಟಲು ಸಹಾಯವಾಗುತ್ತದೆ. ನೈಸರ್ಗಿಕ ಪರಿಹಾರ ಕ್ರಮಗಳನ್ನು ಅನುಸರಿಸಿದರೆ, ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ ಎಂದು ತಜ್ಞರು ತಿಳಿಸುತ್ತಾರೆ.
ಓದುಗರಿಗೆ ಮುಖ್ಯ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

