Medicine for Obesity and Diabetes: ಬೊಜ್ಜು (Obesity) ಮತ್ತು ಟೈಪ್ 2 ಮಧುಮೇಹದಿಂದ (Type 2 diabetes) ಬಳಲುತ್ತಿರುವವರಿಗೆ ಗುಡ್ನ್ಯೂಸ್ ಲಭಿಸಿದೆ. ಭಾರತದಲ್ಲಿ ಮೊದಲ ಬಾರಿಗೆ ಔಷಧ ಲಭ್ಯವಾಗುವಂತೆ ಮಾಡುತ್ತಿದೆ. ಇದನ್ನು ಮೌಂಜಾರೋ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಎಲಿ ಲಿಲ್ಲಿ ಕಂಪನಿಯು ತಿಳಿಸಿದೆ.
ಈ ಔಷಧಕ್ಕೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಅನುಮೋದನೆ ನೀಡಿದೆ. ಮೌಂಜಾರೊ ಒಂದೇ ಡೋಸ್ ಬಾಟಲಿಯಲ್ಲಿ ಲಭ್ಯವಿದೆ. 2.5 ಮಿಲಿ ಗ್ರಾಂ ₹3,500, 5 ಮಿ.ಗ್ರಾಂ ₹4375 ದರ ನಿಗದಿಪಡಿಸಲಾಗಿದೆ. ಮಧುಮೇಹ ಮತ್ತು ತೂಕ ನಷ್ಟಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಈ ಮೌಂಜಾರೊ ಔಷಧವು ಈಗಾಗಲೇ ಬ್ರಿಟನ್ ಮತ್ತು ಯುರೋಪ್‌ನಲ್ಲಿ ಟಿರ್ಜೆಪಟೈಡ್ ಹೆಸರಿನಲ್ಲಿ ಲಭ್ಯವಿದೆ.
ಅಮೆರಿಕದಲ್ಲಿ ಇದನ್ನು ಜೆಫ್‌ಬೌಂಡ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಔಷಧವು ಭಾರತದಲ್ಲಿ ಮೊದಲು. ಮೌನಾರೋ GIP (ಗ್ಲೂಕೋಸ್-ಅವಲಂಬಿತ ಇನ್ಸುಲಿನೋಟ್ರೋಪಿಕ್ ಪಾಲಿಪೆಪ್ಟೈಡ್) ಮತ್ತು GLP-1 (ಗ್ಲುಕಗನ್ ತರಹದ ಪೆಪ್ಟೈಡ್) ಹಾರ್ಮೋನ್ಗಳನ್ನು ಉತ್ತೇಜಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ.
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಬೊಜ್ಜು, ಅಧಿಕ ತೂಕ ಮತ್ತು ಟೈಪ್ -2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ತೀವ್ರವಾಗಿ ಹೆಚ್ಚುತ್ತಿವೆ. ದೇಶದಲ್ಲಿ ಮಧುಮೇಹ ಹಾಗೂ ಬೊಜ್ಜುತನದಿಂದ ಬಳಲುತ್ತಿರುವವರ ಸಂಖ್ಯೆ ಸುಮಾರು 100 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಅಧಿಕ ತೂಕವು ಮಧುಮೇಹದ ಅಪಾಯವನ್ನುಂಟುಮಾಡುತ್ತದೆ. ಜೊತೆಗೆ ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ನಿದ್ರಾಹೀನತೆ ಸೇರಿದಂತೆ ಸುಮಾರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯಕೀಯ ತಜ್ಞರು ವಿವರಿಸುತ್ತಾರೆ.
ಏನಿದು ಟೈಪ್-2 ಮಧುಮೇಹ? ಮಧುಮೇಹವು ಎಲ್ಲಾ ವಯಸ್ಸಿನವರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕಾಯಿಲೆ. ಮಧುಮೇಹದಲ್ಲಿ ಕೆಲವು ವಿಧಗಳಿವೆ. ಟೈಪ್-2 ಮಧುಮೇಹ ಅತ್ಯಂತ ಸಾಮಾನ್ಯವಾಗಿದೆ. ಮಧುಮೇಹದ ಕುಟುಂಬದ ಇತಿಹಾಸ (ಅನುವಂಶಿಕ) ಹೊಂದಿರುವವರು ಹಾಗೂ ಅಧಿಕ ತೂಕ ಹೊಂದಿರುವವರು, ವಿಶೇಷವಾಗಿ ಕೇಂದ್ರ ಸ್ಥೂಲಕಾಯತೆಯಿಂದ ಬಳಲುತ್ತಿರುವವರು ವಿಶೇಷವಾಗಿ ಜಾಗರೂಕರಾಗಿರಬೇಕು. ಪ್ರಿಡಯಾಬಿಟಿಸ್ ಕೇವಲ ಮಧುಮೇಹಕ್ಕೆ ಪೂರ್ವಸೂಚಕವಲ್ಲ. ಇದು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಸ್ಥೂಲಕಾಯತೆಯ ಅಪಾಯ ಹೆಚ್ಚಿಸುತ್ತದೆ. ಜೊತೆಗೆ ಹೃದಯ ಕಾಯಿಲೆಗಳ ಅಪಾಯಕ್ಕೂ ಕಾರಣವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಕೆಲವು ಜನರಲ್ಲಿ ಅಧಿಕ ತೂಕ ಅಥವಾ ಬೊಜ್ಜು ಇಲ್ಲದವರಲ್ಲಿ ಟೈಪ್-2 ಡಯಾಬಿಟಿಸ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ವಯಸ್ಸಾದವರಲ್ಲಿ ಮತ್ತು ಯುವಜನರಲ್ಲಿ ಇದು ಸಾಮಾನ್ಯವಾಗಿದೆ. ಕೌಟುಂಬಿಕ ಇತಿಹಾಸ ಮತ್ತು ಜೀನ್‌ಗಳ ಪಾತ್ರವು ಟೈಪ್- 2 ಮಧುಮೇಹದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಕಡಿಮೆ ಕ್ರಿಯಾಶೀಲತೆ, ಕಳಪೆ ಆಹಾರ ಹಾಗೂ ಸೊಂಟದ ಸುತ್ತ ಹೆಚ್ಚಿನ ದೇಹದ ತೂಕವು ಈ ರೋಗ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ.
ಬೊಜ್ಜು ಸಮಸ್ಯೆ: ಬೊಜ್ಜು ಆಧುನಿಕ ಯುಗದಲ್ಲಿ ಹಲವು ಜನರಲ್ಲಿ ಕಾಡುವ ಸಮಸ್ಯೆಯಾಗಿದೆ. ಬೊಜ್ಜಿನ ಸಮಸ್ಯೆ ಕಾಣಿಸಿಕೊಂಡರೆ, ಇದರಿಂದಾಗಿ ಸಕ್ಕರೆ ಕಾಯಿಲೆ, ಹೃದ್ರೋಗ, ರಕ್ತದೊತ್ತಡ, ಆರ್ಥರೈಟೀಸ್‌ನಂತಹ ಕೀಲು ನೋವು, ಸಂತಾನಹೀನತೆ ಹಾಗೂ ಮಹಿಳೆಯರಲ್ಲಿ ಪಿಸಿಓಡಿ ರೀತಿಯ ಮುಟ್ಟಿನ ಸಮಸ್ಯೆಗಳು ಕಾಡುತ್ತವೆ.
ಬೊಜ್ಜು ಕೆಲವರಿಗೆ ಅನುವಂಶಿಕವಾಗಿ ಬಂದರೆ, ಮತ್ತೆ ಕೆಲವರಿಗೆ ತಾವು ಸೇವಿಸುವ ಆಹಾರಗಳಿಂದಲೂ ಬೊಜ್ಜು ಬರುತ್ತದೆ. ಮಾನಸಿಕ ಒತ್ತಡ, ಜಂಕ್‌ಫುಡ್ ಸೇವನೆ, ವ್ಯಾಯಾಮ ಮಾಡದೇ ಇರುವುದು. ಉತ್ತಮ ನಿದ್ರೆ ಮಾಡದೇ ಇರುವುದು, ಥೈರಾಯ್ಡ ಸಮಸ್ಯೆ ಹಾಗೂ ಮಹಿಳೆಯರಲ್ಲಿ ಹಾರ್ಮೋನ್‌ಗಳ ಅಸಮತೋಲನ ಸೇರಿದಂತೆ ವಿವಿಧ ಕಾರಣಗಳಿಂದ ಬೊಜ್ಜು ಬರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ದೇಹದ ಶಕ್ತಿಯಲ್ಲಿರುವ ಅಸಮತೋಲನವು ಬೊಜ್ಜಿಗೆ ಕಾರಣವಾಗುತ್ತದೆ. ನಿತ್ಯ ಸೇವಿಸುವ ಆಹಾರದಿಂದ ದೇಹದ ದೈನಂದಿನ ಚಟುವಟಿಕೆಗಳಿಗೆ ಶಕ್ತಿ ಪಡೆಯುತ್ತದೆ. ಅಗತ್ಯಕ್ಕಿಂತ ಅಧಿಕ ಪ್ರಮಾಣದ ಆಹಾರ ಸೇವಿಸಿದಾಗ ಹಾಗೆ ಉಳಿಯುವಂತಹ ಕ್ಯಾಲೊರಿಯು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಚರ್ಮದ ಅಡಿಯಲ್ಲಿ ಮತ್ತು ಅಂಗಾಂಗಗಳ ಸುತ್ತ ಸಂಗ್ರಹವಾಗುತ್ತದೆ. ಸ್ಥೂಲತೆಗೆ ಮುಖ್ಯ ಕಾರಣ ಅಧಿಕ ಆಹಾರ ಸೇವನೆ ಮಾಡುವುದು, ಕಡಿಮೆ ಶ್ರಮ ಹಾಗೂ ದೈಹಿಕ ಚಟುವಟಿಕೆಗಳಿಲ್ಲದ ಜೀವನ ನಡೆಸುವುದು. ಜೊತೆಗೆ ಥೈರಾಯ್ಡ ಸಮಸ್ಯೆ ಹಾಗೂ ಹಾರ್ಮೋನ್‌ಗಳ ಅಸಮತೋಲನದಿಂದ ಮತ್ತು ಸ್ಟಿರಾಯ್ಡ್ ಮಾತ್ರೆಗಳ ಸೇವನೆಯಿಂದಲೂ ಬೊಬ್ಬಿನ ಸಮಸ್ಯೆ ಕಾಡುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.
ಓದುಗರಿಗೆ ಸೂಚನೆ : ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: ಬೇಸಿಗೆಯಲ್ಲಿ ಗ್ಲೂಕೋಸ್ ಮಟ್ಟ ಏಕೆ ಏರಿಕೆಯಾಗುತ್ತದೆ? ಶುಗರ್ ನಿಯಂತ್ರಿಸಲು ತಜ್ಞರು ಸೂಚಿಸಿದ ಆಹಾರಗಳ ಲಿಸ್ಟ್ ಇಲ್ಲಿದೆ
ಮಧುಮೇಹಿಗಳು ಈ ಹುಣ್ಣುಗಳನ್ನು ನಿರ್ಲಕ್ಷಿಸಿದರೆ ಕಾಲಿನ ಬೆರಳು ಕಳೆದುಕೊಳ್ಳುತ್ತೀರಿ: ವೈದ್ಯರ ವಾರ್ನಿಂಗ್