International Day of Happiness 2025: ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಯಾವುದು ಎಂಬುದನ್ನು ನೀವು ತಿಳಿದುಕೊಳ್ಳಬೇಕಾ? ವಿಶ್ವಸಂಸ್ಥೆಯು ಇದೀಗ ಸಂತೋಷ ಸೂಚ್ಯಂಕದ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ, ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಹೊರಹೊಮ್ಮಿದೆ.
ಫಿನ್ಲ್ಯಾಂಡ್ ದೇಶವು ಸತತ ಎಂಟನೇ ವರ್ಷವೂ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಸಂತೋಷ ದಿನವನ್ನು ಆಚರಿಸಲಾಗುತ್ತದೆ. ಕಳೆದ 10 ವರ್ಷಗಳಿಂದ ವಿಶ್ವಸಂಸ್ಥೆಯು ಇದೇ ದಿನದಂದು ವರದಿಯನ್ನು ಪ್ರಕಟಿಸುತ್ತಿದೆ. ಯಾವ ದೇಶಗಳಲ್ಲಿ ಜನರು ಎಷ್ಟು ಸಂತೋಷವಾಗಿದ್ದಾರೆ ಎಂಬುದನ್ನು ಸಂತೋಷ ಸೂಚ್ಯಂಕದ ವರದಿಯು ಬಹಿರಂಗಪಡಿಸುತ್ತದೆ.
ಭಾರತದ ಸ್ಥಾನ ಎಷ್ಟಿದೆ?: 147 ದೇಶಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ ಈ ಸಂತೋಷ ಸೂಚ್ಯಂಕದ ವರದಿಯನ್ನು ಸಿದ್ಧಪಡಿಸಲಾಗಿದೆ. 2025ರ ಸಂತೋಷ ಸೂಚ್ಯಂಕದ ವರದಿಯಲ್ಲಿ, 147 ದೇಶಗಳ ಪೈಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತವು 118ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಕೊಂಚ ಸುಧಾರಿಸಿದೆ. 2024ರ ಹ್ಯಾಪಿನೆಸ್ ರಿಪೋರ್ಟ್‌ನಲ್ಲಿ ಭಾರತವು 126ನೇ ಸ್ಥಾನದಲ್ಲಿತ್ತು. 2025ರಲ್ಲಿ ಭಾರತವು 8 ಸ್ಥಾನ ಮೇಲಕ್ಕೇರಿದೆ. ವಿಶ್ವ ಸಂತೋಷ ವರದಿ ಎಂಬ ವಾರ್ಷಿಕ ವರದಿಯನ್ನು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ವಿಭಾಗವು ಪ್ರಕಟಿಸಿದೆ.

ಟಾಪ್ 10 ಶ್ರೇಯಾಂಕದಲ್ಲಿ ಇಸ್ರೇಲ್: ಫಿನ್ಲ್ಯಾಂಡ್ ಮೊದಲ ಸ್ಥಾನ ಪಡೆದುಕೊಂಡಿದೆ. ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ನಂತರದ ಸ್ಥಾನಗಳಲ್ಲಿವೆ. ಮತ್ತೊಂದೆಡೆ, ಭೀಕರ ಅಂತರ್ಯುದ್ಧದಲ್ಲಿ ಸಿಲುಕಿರುವ ಅಫ್ಘಾನಿಸ್ತಾನ ಮತ್ತೊಮ್ಮೆ ಸಂತೋಷದ ರಾಷ್ಟ್ರಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದ್ದು, 147ನೇ ಸ್ಥಾನದಲ್ಲಿದ್ದು, ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ (146) ಮತ್ತು ಲೆಬನಾನ್ (145) ಹಿಂದಿನ ಸ್ಥಾನದಲ್ಲಿವೆ. ಹಮಾಸ್ ಜೊತೆ ಯುದ್ಧ ನಡೆಸಿದ್ದರೂ ಕೂಡ ಇಸ್ರೇಲ್ ದೇಶವು ಎಂಟನೇ ಸ್ಥಾನದಲ್ಲಿದೆ. ಕೋಸ್ಟಾ ರಿಕಾ ಮತ್ತು ಮೆಕ್ಸಿಕೊ ಕೂಡ ಮೊದಲ ಬಾರಿಗೆ ಅಗ್ರ ಹತ್ತು ಸ್ಥಾನಗಳಲ್ಲಿದ್ದು, ಈ ದೇಶಗಳು ಕ್ರಮವಾಗಿ 6 ಮತ್ತು 10ನೇ ಶ್ರೇಯಾಂಕದಲ್ಲಿವೆ.
ಸಂತೋಷ ಸೂಚ್ಯಂಕ ಅಳೆಯೋದು ಹೇಗೆ?: ಪ್ರತಿ ದೇಶದಿಂದ ಒಂದರಿಂದ ಮೂರು ಸಾವಿರ ಜನರ ಮಾದರಿ ಗಾತ್ರವನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಕೇಳಲಾದ ಪ್ರಶ್ನೆಗಳ ಆಧಾರದ ಮೇಲೆ ಡೇಟಾವನ್ನು ರಚಿಸಲಾಗುತ್ತದೆ. ಈ ಪ್ರಶ್ನೆಗಳಿಗೆ 0 ರಿಂದ 10 ರವರೆಗಿನ ರೇಟಿಂಗ್ನಲ್ಲಿ ಉತ್ತರಿಸಬೇಕು. 0 ಎಂದರೆ ಕೆಟ್ಟದು, 10 ಎಂದರೆ ಅತ್ಯುತ್ತಮ ಅನುಭವ. ಸಂಪತ್ತು ಮತ್ತು ಅಭಿವೃದ್ಧಿ ಮಾತ್ರವಲ್ಲ, ಸಂಬಂಧಗಳು, ಜನರ ನಡುವಿನ ನಂಬಿಕೆ, ಆತ್ಮತೃಪ್ತಿ, ಸಾಮಾಜಿಕ ಬೆಂಬಲ, ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರ ಇವೆಲ್ಲವೂ ಅವುಗಳ ಮೇಲೆ ಆಧಾರಿತವಾದ ಅಂಶಗಳು ಸೇರಿರುತ್ತವೆ.
ಉದಾಹರಣೆ ತಿಳಿಸುವುದಾದರೆ, ನೀವು ಕಷ್ಟದಲ್ಲಿದ್ದಾಗ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ನಿಮಗೆ ಸಹಾಯ ಮಾಡುತ್ತಾರೆಯೇ? ಕಳೆದ ತಿಂಗಳು ನೀವು ಯಾವುದಾದರೂ ದತ್ತಿ ಸಂಸ್ಥೆಗೆ ಹಣ ನೀಡಿದ್ದೀರಾ? ನಿಮ್ಮ ದೇಶದಲ್ಲಿ ಎಷ್ಟು ಭ್ರಷ್ಟಾಚಾರ ಇದೆ? ಈ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಸಂತೃಪ್ತ ಮತ್ತು ಸಂತೋಷವಾಗಿದ್ದರೆ, ಅವರು ಇತರರಿಗೆ ದಾನ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವರದಿ ತಿಳಿಸುತ್ತದೆ.

ಟಾಪ್ ಟೆನ್ ಅತ್ಯಂತ ಸಂತೋಷದಾಯಕ ದೇಶಗಳ ಪಟ್ಟಿ ಇಲ್ಲವೆ ನೋಡಿ:
- ಫಿನ್ಲ್ಯಾಂಡ್
- ಡೆನ್ಮಾರ್ಕ್
- ಐಸ್ಲ್ಯಾಂಡ್
- ಸ್ವೀಡನ್
- ನೆದರ್ಲ್ಯಾಂಡ್ಸ್
- ಕೋಸ್ಟಾ ರಿಕಾ
- ನಾರ್ವೆ
- ಇಸ್ರೇಲ್
- ಲಕ್ಸೆಂಬರ್ಗ್
- ಮೆಕ್ಸಿಕೋ
ಅಮೆರಿಕದ ಶ್ರೇಯಾಂಕ ಕುಸಿತ: ಸಂತೋಷ ಸೂಚ್ಯಂಕ ವರದಿಯಲ್ಲಿ ಅಮೆರಿಕ, ಯುಕೆ ಮತ್ತು ಫ್ರಾನ್ಸ್ ಕ್ರಮವಾಗಿ 24, 23 ಮತ್ತು 33ನೇ ಸ್ಥಾನಗಳಲ್ಲಿವೆ. ಕಳೆದ ವರ್ಷ 23ನೇ ಸ್ಥಾನದಲ್ಲಿದ್ದ ಅಮೆರಿಕ ಈ ಬಾರಿ ಒಂದು ಸ್ಥಾನ ಕೆಳಗೆ ಕುಸಿದಿದೆ. 2012ರಲ್ಲಿ 11ನೇ ಸ್ಥಾನದಲ್ಲಿದ್ದ ಅಮೆರಿಕ ಈಗ 24ನೇ ಸ್ಥಾನಕ್ಕೆ ಕುಸಿದಿರುವುದು ಗಮನಾರ್ಹ. ಕಳೆದ ಎರಡು ದಶಕಗಳಲ್ಲಿ ಅಮೆರಿಕದಲ್ಲಿ ಒಂಟಿಯಾಗಿ ಊಟ ಮಾಡುವವರ ಸಂಖ್ಯೆ ಶೇ.53ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ: https://happiness-report.s3.us-east-1.amazonaws.com/2025/WHR+25.pdf
ಇದನ್ನೂ ಓದಿ: ಸುನೀತಾ ವಿಲಿಯಮ್ಸ್ ಶೌರ್ಯಕ್ಕೆ ಅಭೂತಪೂರ್ವ ಮೆಚ್ಚುಗೆ: ಛಲದಿಂದ ಮುನ್ನಡೆದ ಮಹಿಳಾ ಗಗನಯಾತ್ರಿ ಬದುಕು ಎಲ್ಲರಿಗೂ ಮಾದರಿ