- ಹುಚ್ಚೇಶ್ವರ ಅಣ್ಣಿಗೇರಿ
Black Rice Amazing Health benefits: ದೇಶದಲ್ಲಿ ಬಿಳಿ ಅಕ್ಕಿ, ಕೆಂಪು ಅಕ್ಕಿ, ಕಂದು ಅಕ್ಕಿ, ಕಪ್ಪು ಅಕ್ಕಿ ಸೇರಿದಂತೆ ವಿವಿಧ ಪ್ರಕಾರದ ಅಕ್ಕಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಯಾವ ಅಕ್ಕಿಯನ್ನು ಉಪಯೋಗಿಸಿದರೆ ಉತ್ತಮ ಎಂಬ ಪ್ರಶ್ನೆ ಹಲವರಿಗೆ ಕಾಡುತ್ತದೆ. ಪ್ರತಿಯೊಂದು ಅಕ್ಕಿಯೂ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದ್ರೆ ಕಪ್ಪು ಅಕ್ಕಿಯಲ್ಲಿ ದೇಹದ ಆರೋಗ್ಯಕ್ಕೆ ಅನೇಕ ಲಾಭಗಳು ದೊರೆಯುತ್ತವೆ.
ಕಪ್ಪು ಅಕ್ಕಿಯಲ್ಲಿ ಪ್ರೋಟೀನ್, ಕಬ್ಬಿಣಾಂಶ, ಕಾರ್ಬೋಹೈಡ್ರೇಟ್ಸ್, ಫೈಬರ್ ಸಮೃದ್ಧವಾಗಿವೆ. ಕಪ್ಪು ಅಕ್ಕಿಯನ್ನು ಅನ್ನ ತಯಾರಿಸಿ ಸೇವಿಸಿದರೆ ಪರಿಪೂರ್ಣ ಊಟಕ್ಕೆ ಸಮಾನವಾಗಿದೆ. ಕಪ್ಪು ಅಕ್ಕಿಯನ್ನು ಮೊದಲು ಚೀನಾದಲ್ಲಿ ಬೆಳೆಯಲಾಯಿತು. ಪ್ರಸ್ತುತ ಭಾರತದಲ್ಲಿ ಕೂಡ ಕಪ್ಪು ಅಕ್ಕಿಯನ್ನು ಬೆಳೆಯಲಾಗುತ್ತದೆ. ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಹಾಗೂ ಮಣಿಪುರದಲ್ಲಿ ಹೆಚ್ಚು ಕಪ್ಪು ಅಕ್ಕಿಯನ್ನು ಬೆಳೆಯಲಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯದಾದ ಬ್ಲ್ಯಾಕ್ ರೈಸ್ ಆಂಥೋಸಯಾನಿನ್ ಎಂಬ ವರ್ಣದ್ರವ್ಯದಿಂದ ಕಪ್ಪು ಬಣ್ಣವನ್ನು ಪಡೆಯುತ್ತದೆ.
ಕಪ್ಪು ಅಕ್ಕಿಯು ಹೆಚ್ಚು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಹೆಚ್ಚಿನ ಜನರು ಸಾಮಾನ್ಯವಾಗಿ ಬಿಳಿ ಅನ್ನವನ್ನು ತಿನ್ನುತ್ತಾರೆ. ಕೆಲವರು ಬಿಳಿ ಅಕ್ಕಿಯ ಬದಲು ಕಂದು ಅಕ್ಕಿ ಮತ್ತು ಕೆಂಪು ಅಕ್ಕಿಯನ್ನು ಸೇವಿಸುತ್ತಾರೆ. ಬಿಳಿ ಅಕ್ಕಿಗಿಂತಲೂ ಕಪ್ಪು ಅಕ್ಕಿ ಅನೇಕ ಅದ್ಭುತ ಗುಣಗಳನ್ನು ಹೊಂದಿದೆ. ಕಪ್ಪು ಅಕ್ಕಿಯು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಜೊತೆಗೆ ನಿಮ್ಮ ದೇಹದ ಶಕ್ತಿಯನ್ನು ವೃದ್ಧಿಸುತ್ತದೆ. ಈ ಅಕ್ಕಿಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಅಧಿಕವಾಗಿದ್ದು, ದೇಹದಿಂದ ವಿಷವನ್ನು ತೆಗೆದುಹಾಕುತ್ತವೆ. ಕಪ್ಪು ಅಕ್ಕಿ ಸೇವಿಸುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ..

ಮಧುಮೇಹ ನಿಯಂತ್ರಣ: ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಟೈಪ್- 2 ಮಧುಮೇಹ ತೊಂದರೆ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳು ದೃಢಪಡಿಸಿವೆ. ಜೊತೆಗೆ ಇಲಿಗಳ ಮೇಲಿನ ಅಧ್ಯಯನಯೊಂದು, ಈ ಗುಣಲಕ್ಷಣಗಳು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಯಕೃತ್ತಿನ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ ಎಂದು ಬಹಿರಂಗಪಡಿಸಿದೆ.
2017ರಲ್ಲಿ ಬಯೋಲಜಿ ಮತ್ತು ಫಾರ್ಮಾಸ್ಯುಟಿಕಲ್ ಬುಲೆಟಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬ್ಲ್ಯಾಕ್ ರೈಸ್ನಲ್ಲಿ ಮಧುಮೇಹ ವಿರೋಧಿ ಗುಣಗಳಿವೆ. ಆಂಥೋಸಿಯಾನಿನ್ ಇರುವಂತಹ ಕಪ್ಪು ಅಕ್ಕಿ ಉರಿಯೂತ ನಿವಾರಕವಾಗಿ ಕೆಲಸ ಮಾಡುತ್ತದೆ. ದೀರ್ಘಕಾಲಿಕ ಉರಿಯೂತದ ತೊಂದರೆಯಿಂದ ಮಧುಮೇಹ ಬರಬಹುದು. ಕಪ್ಪು ಅಕ್ಕಿಯು ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತೆ ಎಂದು ತಜ್ಞರು ತಿಳಿಸುತ್ತಾರೆ.

ಸಕ್ಕರೆ ಮಟ್ಟದಲ್ಲಿ ಸಮತೋಲನ: ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರಿನ ಎಸ್‌ಡಿಎಂ ಆಯುರ್ವೇದ ಸಂಸ್ಥೆಯ ಸ್ವಸ್ಥವೃತ್ತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಾ ಎಸ್ ಅವರು, ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಕಪ್ಪು ಅಕ್ಕಿ ನಿಧಾನವಾಗಿ ಜೀರ್ಣವಾಗುತ್ತದೆ. ಇದು ಶುಗರ್ ಏರಿಕೆ ಮಾಡುವುದಿಲ್ಲ. ಹೆಚ್ಚಿನ ನಾರಿನ ಅಂಶ ಹೊಂದಿರುವುದರಿಂದ ನಾರು ಜೀರ್ಣಕ್ರಿಯೆ ಪ್ರಕ್ರಿಯೆ ಮತ್ತು ಸಕ್ಕರೆ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಆಂಥೋಸಯಾನಿನ್‌ಗಳು (ಶಕ್ತಿಯುತ ಉತ್ಕರ್ಷಣ ನಿರೋಧಕಗಳು) ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಕಾರಣವಾಗುತ್ತವೆ. ಟೈಪ್ 2 ಮಧುಮೇಹವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ವಿವರಿಸಿದರು.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ: ಆಂಥೋಸಯಾನಿನ್‌ಗಳು ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಅನ್ನು ಕಡಿಮೆ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ನಿವಾರಿಸುವ ಮೂಲಕ ರಕ್ತನಾಳಗಳಲ್ಲಿ ಎಚ್‌ಡಿಎಲ್ (ಉತ್ತಮ ಕೊಲೆಸ್ಟ್ರಾಲ್) ಮಟ್ಟವನ್ನು ಹೆಚ್ಚಿಸಬಹುದು. ಕೆಲವು ಕಾರ್ಬೋಹೈಡ್ರೇಟ್ ಆಹಾರಗಳು ಅನಿವಾರ್ಯವಾಗಿ ಹೃದಯಕ್ಕೆ ಆರೋಗ್ಯಕರವಾಗಿವೆ. ಸಸ್ಯ ಸ್ಟೆರಾಲ್‌ಗಳು ಮತ್ತು ಲೋಳೆಪೊರೆಗಳಿಂದ ಸಮೃದ್ಧವಾಗಿದೆ. ಅವು ಕರುಳಿನೊಳಗೆ ಕೊಲೆಸ್ಟ್ರಾಲ್ ದೇಹದಿಂದ ಹೊರಹಾಕಲು ಸಹಾಯ ಮಾಡುತ್ತವೆ. ಈ ಧಾನ್ಯದ ಇನ್ನೊಂದು ಪ್ರಮುಖ ಗುಣವೆಂದರೆ, ಇದು ನೈಸರ್ಗಿಕವಾಗಿ ಗ್ಲುಟನ್ ಮುಕ್ತವಾಗಿದ್ದು, ಇದು ಯಾವಾಗಲೂ ಕರುಳಿನ ಆರೋಗ್ಯಕ್ಕೆ ಸ್ನೇಹಪರವಾಗಿದೆ. ಮತ್ತು ಚಯಾಪಚಯ ಸಮತೋಲನಕ್ಕೆ ಮತ್ತೊಂದು ದೊಡ್ಡ ಪ್ರಯೋಜನವಾಗಿದೆ.
-ಡಾ.ರಶ್ಮಾ ಎಸ್, ಬೆಂಗಳೂರಿನ ಎಸ್‌ಡಿಎಂ ಆಯುರ್ವೇದ ಸಂಸ್ಥೆಯ ಸ್ವಸ್ಥವೃತ್ತ ವಿಭಾಗದ ಸಹಾಯಕ ಪ್ರಾಧ್ಯಾಪಕಿ
ಕ್ಯಾನ್ಸರ್ ವಿರೋಧಿ ಗುಣ: ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಇವುಗಳನ್ನು ಸೇವಿಸುವುದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಬರುವ ಅಪಾಯ ಕಡಿಮೆ. ಕಪ್ಪು ಅಕ್ಕಿಯಲ್ಲಿನ ಆಂಥೋಸಯಾನಿನ್‌ಗಳು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ಹರಡುವ ಸಾಮರ್ಥ್ಯ ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸಿವೆ.

ಹೃದಯದ ಆರೋಗ್ಯ: ಕಪ್ಪು ಅಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳಿವೆ. ಇವುಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಹೃದಯ ಸಮಸ್ಯೆಗಳಿಂದ ಉಂಟಾಗುವ ಸಾವಿನ ಅಪಾಯ ಕಡಿಮೆ ಮಾಡುತ್ತದೆ. ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಸುಧಾರಿಸುತ್ತದೆ. ಇವುಗಳನ್ನು ಸೇವಿಸುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಬ್ಲ್ಯಾಕ್ ರೈಸ್ ಸೇವಿಸಿದರೆ, ಹೃದಯದ ಸಮಸ್ಯೆಗಳು ಬರದಂತೆ ರಕ್ಷಿಸಿಕೊಳ್ಳಬಹುದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್, ನಾರಿನಾಂಶವು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹಾಗೂ ಹೃದಯರಕ್ತನಾಳದ ಆರೋಗ್ಯ ಕಾಪಾಡುತ್ತದೆ. ನಾರಿನಾಂಶವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆ ಹಾಗೂ ಆ್ಯಂಟಿಆಕ್ಸಿಡೆಂಟ್ ರಕ್ತನಾಳಗಳಿಗೆ ಆಗುವಂತಹ ಹಾನಿಯಿಂದ ಹೃದಯವನ್ನು ರಕ್ಷಿಸುತ್ತದೆ.
ತೂಕ ನಷ್ಟಕ್ಕೆ ಸಹಾಯ: ಕಪ್ಪು ಅಕ್ಕಿಯಲ್ಲಿ ಪ್ರೋಟೀನ್, ಫೈಬರ್ ಹೇರಳವಾಗಿದೆ. ಇದರ ಪರಿಣಾಮ ಹಸಿವು ಕಡಿಮೆಯಾಗುತ್ತದೆ. ಹೊಟ್ಟೆ ತುಂಬಿದ ಭಾವನೆ ನಿಮಗಾಗುತ್ತದೆ. ಕಪ್ಪು ಅಕ್ಕಿಯಿಂದ ಮಾಡಿದ ಅನ್ನ ಸೇವಿಸಿದರೆ ತೂಕ ನಷ್ಟಕ್ಕೆ ಸಹಾಯವಾಗುತ್ತದೆ. ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡುತ್ತದೆ ಹಾಗೂ ತೂಕ ಇಳಿಸಿಕೊಳ್ಳಲು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಸಂಶೋಧನೆ ತಿಳಿಸುವ ಪ್ರಕಾರ, ಬಿಳಿ ಅಕ್ಕಿಯ ಬದಲು ಕಪ್ಪು ಅಕ್ಕಿ ಸೇವಿಸಿದ ಜನರು ಹೆಚ್ಚು ತೂಕ ಇಳಿಸಿಕೊಂಡಿದ್ದಾರೆ. ಅವರ ದೇಹದ ಬೊಜ್ಜು ಕಡಿಮೆಯಾಗಿದೆ ಎಂಬುದು ತಿಳಿದಿದೆ. ಕಪ್ಪು ಅಕ್ಕಿ ಜೀರ್ಣಕ್ರಿಯೆಗೆ ಮತ್ತು ಕರುಳಿನ ಕ್ರಿಯೆಗಳನ್ನು ಸರಾಗವಾಗಿಸುತ್ತದೆ. ಮಲಬದ್ಧತೆ ತಡೆಯುತ್ತದೆ ಮತ್ತು ಹೊಟ್ಟೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
-ಡಾ. ಅರ್ಚನಾ ಕೊಠಾರಿ, ಹಿರಿಯ ವೈದ್ಯೆ
ಕಣ್ಣಿನ ಆರೋಗ್ಯ: ಕಪ್ಪು ಅಕ್ಕಿಯಲ್ಲಿ ಲುಟೀನ್, ಜಿಯಾಕ್ಸಾಂಥಿನ್ ಅಧಿಕ ಪ್ರಮಾಣದಲ್ಲಿ ಇವೆ. ಇವುಗಳು ಕಣ್ಣಿನ ಆರೋಗ್ಯವನ್ನು ರಕ್ಷಿಸುವ ಎರಡು ರೀತಿಯ ಕ್ಯಾರೊಟಿನಾಯ್ಡ್‌ಗಳು ಆಗಿವೆ. ಈ ಸಂಯುಕ್ತಗಳು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ನಿಮ್ಮ ಕಣ್ಣುಗಳನ್ನು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಇವು ಅಪಾಯಕಾರಿ ನೀಲಿ ಬೆಳಕಿನ ತರಂಗಗಳನ್ನು ಫಿಲ್ಟರ್ ಮಾಡುವ ಮೂಲಕ ರೆಟಿನಾವನ್ನು ಕಾಪಾಡುತ್ತದೆ. ಈ ಬ್ಲ್ಯಾಕ್ ರೈಸ್ ಸೇವಿಸುವುದರಿಂದ ಕಣ್ಣಿನ ಸಮಸ್ಯೆಗಳನ್ನು ತಡೆಗಟ್ಟುತ್ತದೆ, ಆರೋಗ್ಯ ಕಾಪಾಡುತ್ತವೆ ಎಂದು ತಜ್ಞರು ಹೇಳುತ್ತಾರೆ.

ಸ್ನಾಯುಗಳನ್ನು ಬಲಪಡಿಸುತ್ತೆ: ಕಪ್ಪು ಅಕ್ಕಿಯಲ್ಲಿ ಸಸ್ಯಜನ್ಯವಾದ ಪ್ರೋಟೀನ್ ಅಂಶವಿರುವುದರಿಂದ ಸ್ನಾಯುಗಳನ್ನು ಸರಿಪಡಿಸಲು, ಬೆಳವಣಿಗೆ ಹಾಗೂ ಸಂಪೂರ್ಣ ದೇಹದ ಕಾರ್ಯಕ್ಕೆ ಉತ್ತಮವಾಗಿದೆ. ಸಸ್ಯಾಹಾರಿಗಳಿಗೆ ಕಪ್ಪು ಅಕ್ಕಿ ಒಳ್ಳೆಯ ಆಯ್ಕೆಯಾಗಿದೆ. ಈ ಅಕ್ಕಿಯಲ್ಲಿ ಅಮೈನೋ ಆಮ್ಲವು ಉತ್ತಮ ಪ್ರಮಾಣದಲ್ಲಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಬ್ಲ್ಯಾಕ್ ರೈಸ್ನ್ನು ಸೇವಿಸಿದರೆ ತುಂಬಾ ಒಳ್ಳೆಯದು ಎಂದು ತಜ್ಞರು ವಿವರಿಸುತ್ತಾರೆ.
ನಿರ್ವಿಷಗೊಳಿಸುವ ಶಕ್ತಿಯಿದೆ: ಕಪ್ಪು ಅಕ್ಕಿ ದೇಹವನ್ನು ನಿರ್ವಿಷಗೊಳಿಸುವ ಶಕ್ತಿಯನ್ನು ಹೊಂದಿದೆ. ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿರುವುದರಿಂದ ಯಕೃತ್ನ ಆರೋಗ್ಯ ಕಾಪಾಡುವುದು, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಜೊತೆಗೆ ಮೆದುಳಿನ ಅಂಗಾಂಶಗಳನ್ನು ಉರಿಯೂತದಿಂದ ಹಾಗೂ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಒತ್ತಡ, ಉರಿಯೂತದಿಂದಾಗಿ ಅರಿವಿನ ಕೊರತೆ ಹಾಗೂ ನರರೋಗದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬ್ಲ್ಯಾಕ್ ರೈಸ್ ನಿಯಮಿತವಾಗಿ ಸೇವಿಸಿದರೆ ನೆನಪಿನ ಶಕ್ತಿಯು ಸುಧಾರಣೆಯಾಗುತ್ತದೆ.

ನೀವು ದಿನಕ್ಕೆ ಎಷ್ಟು ಪ್ರಮಾಣದ ಬ್ಲ್ಯಾಕ್ ರೈಸ್ ಸೇವಿಸಬೇಕು ಗೊತ್ತೇ?: ಈಟಿವಿ ಭಾರತ ಜೊತೆಗೆ ಮಾತನಾಡಿದ NIIMS ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಹಾರ ತಜ್ಞೆ ಪ್ರೀತಿ ನಗರ್ ಅವರು, ಉತ್ತಮ ಆಹಾರ ಪದ್ಧತಿಯ ಭಾಗವಾಗಿ ಒಂದು ದಿನಕ್ಕೆ ಅರ್ಧ ಅಥವಾ ಕಾಲು ಕಪ್ ಬೇಯಿಸಿದ ಕಪ್ಪು ಅಕ್ಕಿಯನ್ನು ಸೇವಿಸಬಹುದು. ಬೆಳಗಿನ ಉಪಹಾರದಲ್ಲಿ ಬ್ಲ್ಯಾಕ್ ರೈಸ್ ಸೇವಿಸಲು ಉತ್ತಮ. ಆದರೆ, ಅನೇಕ ಜನರು ಮಧ್ಯಾಹ್ನ ಅಥವಾ ರಾತ್ರಿಯ ಊಟದ ಸಮಯದಲ್ಲಿ ಸೇವಿಸಿದ ಅಂತಹ ಏನು ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದರು.
ಬ್ಲ್ಯಾಕ್ ರೈಸ್ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ: ಇದು ಮಧುಮೇಹ ಸ್ನೇಹಿ ಆಹಾರವಾಗಿದ್ದು, ಇದು ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ್ವನ್ನು ಹೊಂದಿರುತ್ತದೆ. ಮಧುಮೇಹ ನಿಯಂತ್ರಣಕ್ಕೆ ಉತ್ತೇಜಿಸುತ್ತದೆ. ಇದು ಫೈಬರ್ ಅನ್ನು ಹೊಂದಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಹಾಗೂ ಗ್ಲೂಕೋಸ್ ಮಟ್ಟಗಳು ಉತ್ತಮ ಹೃದಯ ಆರೋಗ್ಯಕ್ಕೂ ಸಹಾಯ ಮಾಡುತ್ತವೆ ಎಂದು ಆಹಾರ ತಜ್ಞೆ ಪ್ರೀತಿ ನಗರ್ ಮಾಹಿತಿ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
- https://pmc.ncbi.nlm.nih.gov/articles/PMC3999603/
- https://pubmed.ncbi.nlm.nih.gov/23871029/
- https://pmc.ncbi.nlm.nih.gov/articles/PMC3614697/
- https://pmc.ncbi.nlm.nih.gov/articles/PMC5816734/
- https://pubmed.ncbi.nlm.nih.gov/28873629/
- https://pubmed.ncbi.nlm.nih.gov/26011910/
ಓದುಗರಿಗೆ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳನ್ನು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.