ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಕೈಗಾರಿಕೋದ್ಯಮಿ ದಿ.ಸಂಜಯ್ ಕಪೂರ್ ಅವರ ಪ್ರಾರ್ಥನಾ ಸಭೆಯನ್ನು ಭಾನುವಾರ ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ಈ ಪ್ರೇಯರ್ ಮೀಟ್ನಲ್ಲಿ ಕಪೂರ್ ಕುಟುಂಬ ಕಾಣಿಸಿಕೊಂಡಿದೆ.
ಎರಡನೇ ಪತ್ನಿ ಕರಿಷ್ಮಾ ತಮ್ಮ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಅವರೊಂದಿಗೆ ಈ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಕರಿಷ್ಮಾ ಸಹೋದರಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಕೂಡಾ ಹಾಜರಿದ್ದರು. ಸಂಜಯ್ ಮೂರನೇ ಪತ್ನಿ ಪ್ರಿಯಾ ಅವರೊಂದಿಗೆ ಕರಿಷ್ಮಾ ಕಾಣಿಸಿಕೊಂಡಿದ್ದಾರೆ.
ಸಂಜಯ್ ಕರಿಷ್ಮಾ 2003ರಲ್ಲಿ ವೈವಾಹಿಕ ಜೀವನ ಶುರುಮಾಡಿದ್ರು. ಈ ದಂಪತಿ 2005ರಲ್ಲಿ ಮಗಳು ಸಮೈರಾ ಮತ್ತು 2011ರಲ್ಲಿ ಮಗ ಕಿಯಾನ್ನನ್ನು ಬರಮಾಡಿಕೊಂಡರು. 2014ರಲ್ಲಿ, ಕರಿಷ್ಮಾ ಮತ್ತು ಸಂಜಯ್ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. 2016ರಲ್ಲಿ ವಿಚ್ಛೇದನ ಪಡೆದರು. ಡಿವೋರ್ಸ್ ನಂತರ, ಸಂಜಯ್, ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾದರು. ಉದ್ಯಮಿ ಒಟ್ಟು 3 ಮದುವೆಯಾಗಿದ್ದಾರೆ.
ಸಂಜಯ್ ಕಪೂರ್ ಪ್ರಾರ್ಥನಾ ಸಭೆಯ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ದಿವಂಗತ ಉದ್ಯಮಿಯ ದೊಡ್ಡ ಭಾವಚಿತ್ರವನ್ನು ಬಿಳಿ ಪುಷ್ಪಗಳಿಂದ ಅಲಂಕರಿಸಲಾಗಿದೆ. ಈ ಫೋಟೋದೆದುರು ಜನರು ನಮನ ಸಲ್ಲಿಸುತ್ತಿರೋದನ್ನು ಕಾಣಬಹುದು.
ಆಟೋಮೋಟಿವ್ ಕ್ಷೇತ್ರದ ಗಣ್ಯ, ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷ ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ ಕೊನೆಯುಸಿರೆಳೆದರು. ಪೋಲೋ ಪಂದ್ಯದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಜೇನು ನೊಣ ನುಂಗಿ ಹೃದಯಾಘಾತಕ್ಕೆ ಒಳಗಾದರು ಎಂದು ವರದಿಯಾಗಿದೆ.
ಜೂನ್ 19ರಂದು ಲೋಧಿ ರಸ್ತೆಯ ಸ್ಮಶಾನದಲ್ಲಿ (ದಯಾನಂದ ಮುಕ್ತಿಧಾಮ) ಅಂತ್ಯಕ್ರಿಯೆ ನಡೆದಿದ್ದು, ಕುಟುಂಬ ಮತ್ತು ಆಪ್ತರು ಭಾಗಿಯಾಗಿದ್ದರು. ನಂತರ, ಕಳೆದ ದಿನದಂದು ಪ್ರಾರ್ಥನಾ ಸಭೆ ನಡೆಸಲಾಯಿತು.
ಇದನ್ನೂ ಓದಿ: ಕರಿಷ್ಮಾ ಮಾಜಿ ಪತಿ ನಿಧನ: ಸಂಜಯ್ಗೆ 3 ಮದುವೆ; ಮೊದಲ ಪತ್ನಿಗೆ ವಿರಾಟ್ ಕೊಹ್ಲಿ ಜೊತೆ ವಿಶೇಷ ಬಾಂಧವ್ಯ
ತಮ್ಮ 53ನೇ ಹರೆಯದಲ್ಲಿ ಜೂನ್ 12ರಂದು ಸಂಜಯ್ ಕೊನೆಯುಸಿರೆಳೆದರು. ಅವರ ಅಮೆರಿಕ ಪೌರತ್ವಕ್ಕೆ ಸಂಬಂಧಿಸಿದ ಕಾನೂನು ಹಾಗೂ ಮರಣೋತ್ತರ ವಿಧಿವಿಧಾನಗಳ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ತಡವಾಯಿತು. ಯುಕೆಯಲ್ಲಿ ಕೆಲ ದಾಖಲೆಗಳ ಕೆಲಸ ಮುಗಿಸಿದ ಬಳಿಕ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಹಿಂತಿರುಗಿಸಲಾಯಿತು. ಜೂನ್ 19, ಕಳೆದ ಗುರುವಾರ ಸಂಜೆ 5ರ ಸುಮಾರಿಗೆ ನವದೆಹಲಿಯ ಲೋಧಿ ರಸ್ತೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.
ಸಂಜಯ್ ವೈವಾಹಿಕ ಜೀವನ:
- 1996ರಲ್ಲಿ ಮುಂಬೈನ ಫ್ಯಾಷನ್ ಡಿಸೈನರ್ ನಂದಿತಾ ಮಹತಾನಿಯವರನ್ನು ಪ್ರೀತಿಸಿ ವಿವಾಹವಾದರು. 2000ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆಯಾದರು.
- ನಂತರ ನಟಿ ಕರಿಷ್ಮಾ ಕಪೂರ್ ಅವರನ್ನು ಪ್ರೀತಿಸಿ 2003ರಲ್ಲಿ ಮದುವೆಯಾದರು. 2016ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದರು.
- 2017ರಲ್ಲಿ, ಮಾಡೆಲ್ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾದರು. ಪ್ರಿಯಾ ಮೊದಲು ಮಾಡೆಲ್ ಆಗಿದ್ದರು ಮತ್ತು ನಂತರ ಉದ್ಯಮಿಯಾದರು. 2018ರಲ್ಲಿ ಮಗ ಅಜಾರಿಯಸ್ನನ್ನು ಬರಮಾಡಿಕೊಂಡರು.
ಇದನ್ನೂ ಓದಿ: SC/ST ಕಾಯ್ದೆಯಡಿ ನಟ ವಿಜಯ್ ದೇವರಕೊಂಡ ವಿರುದ್ಧ ಪ್ರಕರಣ ದಾಖಲು