ಶ್ರೀಕಾಳಹಸ್ತಿ(ಆಂಧ್ರ ಪ್ರದೇಶ): ಜನಪ್ರಿಯ ನಟಿ ಪೂಜಾ ಹೆಗ್ಡೆ ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಕುಟುಂಬಸ್ಥರೊಂದಿಗೆ ಆಗಮಿಸಿದ ನಟಿ, ವಿಶೇಷ ಪೂಜೆಗಳಲ್ಲಿ ಭಾಗಿಯಾಗಿದ್ದರು. ದೇವಸ್ಥಾನ ಭೇಟಿಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ದೋಷಪರಿಹಾರ ವಿಧಿವಿಧಾನಗಳಲ್ಲಿ ಭಾಗಿ: ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ಭೇಟಿ ಕೊಟ್ಟ ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿರೋ ನಟಿ, ರಾಹುಕೇತು ದೋಷ ಪರಿಹಾರ ಮತ್ತು ಸರ್ಪದೋಷ ವಿಧಿಗಳಲ್ಲಿ ಭಾಗಿಯಾಗಿದ್ದರು. ನಂತರ, ವಿಶೇಷ ಪೂಜೆ ಮತ್ತು ಅಭಿಷೇಕ ನಡೆಸಲಾಯಿತು.
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನರು: ದರ್ಶನದ ನಂತರ, ದೇವಾಲಯದ ವೇದ ವಿದ್ವಾಂಸರು ಮಂತ್ರಗಳನ್ನು ಪಠಿಸಿ, ಆಶೀರ್ವಚನ ನೀಡಿದರು. ನಟಿ ಪೂಜಾ ಹೆಗ್ಡೆ ಆಗಮನದಿಂದ ದೇವಾಲಯವು ಗದ್ದಲದಿಂದ ಕೂಡಿತ್ತು. ಬಹುಭಾಷಾ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದಿದ್ದರು.
ಮುಂಬರುವ ಚಿತ್ರಗಳು: ಪೂಜಾ ಹೆಗ್ಡೆ ನಟನೆಯ ಮುಂದಿನ ಸಿನಿಮಾಗಳನ್ನು ಗಮನಿಸೋದಾದ್ರೆ, ಭಾರತೀಯ ಚಿತ್ರರಂಗದ ಅತ್ಯಂತ ಬಹುಬೇಡಿಕೆ ನಟ ರಜನಿಕಾಂತ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ 'ಕೂಲಿ' ಚಿತ್ರದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ. ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಹಾಡೊಂದಕ್ಕೆ ಮೈ ಬಳುಕಿಸುವ ಮೂಲಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: ಬೆಚ್ಚಿಬೀಳಿಸುವಂತಿದೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದೃಶ್ಯ: ನೋಡಿ 'ಕೇಸರಿ 2' ಟ್ರೇಲರ್
ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರದಲ್ಲಿಯೂ ಪೂಜಾ ಹೆಗ್ಡೆ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ 'ಕೆವಿಎನ್ ಪ್ರೊಡಕ್ಷನ್ಸ್' ಕಳೆದ ಅಕ್ಟೋಬರ್ನಲ್ಲಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟ್ ಶೇರ್ ಮಾಡಿ ಅಧಿಕೃತ ಮಾಹಿತಿ ಒದಗಿಸಿತ್ತು. ವಿಜಯ್ ಹಾಗೂ ಪೂಜಾ 2022ರಲ್ಲಿ ಮೂಡಿಬಂದ ಬೀಸ್ಟ್ ಸಿನಿಮಾದಲ್ಲಿ ಮೊದಲ ಬಾರಿ ತೆರೆ ಹಂಚಿಕೊಂಡಿದ್ದರು. ಜನ ನಾಯಗನ್ ಚಿತ್ರದ ಮೂಲಕ ಮತ್ತೊಮ್ಮೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ವದಂತಿ ವದಂತಿಯಷ್ಟೇ: ಮದುವೆ ಸಮಾರಂಭದಲ್ಲಿ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್, ಟ್ರೋಲಿಗರೇ ಟ್ರೋಲ್
ಹೆಚ್ ವಿನೋತ್ ನಿರ್ದೆಶನದ ಆ್ಯಕ್ಷನ್-ಪ್ಯಾಕ್ಡ್ ಸಿನಿಮಾಗೆ ದಕ್ಷಿಣದ ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಸಂಗೀತವಿರಲಿದೆ. ವೆಂಕಟ್ ಕೆ.ನಾರಾಯನ್ ತಮ್ಮ ಕೆವಿಎನ್ ಪ್ರೊಡಕ್ಷನ್ ಅಡಿ ನಿರ್ಮಾಣ ಮಾಡುತ್ತಿದ್ದು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಲಾಗಿದೆ. 2024ರ ಅಕ್ಟೋಬರ್ 4ರಂದು ಚೆನ್ನೈನಲ್ಲಿ ಅದ್ಧೂರಿ ಪೂಜಾ ಸಮಾರಂಭದೊಂದಿಗೆ ಚಿತ್ರೀಕರಣ ಶುರುವಾಗಿತ್ತು. 09.01.2026ರಂದು ಚಿತ್ರ ತೆರೆಗಪ್ಪಳಿಸಲಿದೆ. ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಪ್ರಕಾಶ್ ರಾಜ್ ಮತ್ತು ಮಮಿತಾ ಬೈಜು ಕೂಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.