ಸೌತ್ ಸಿನಿಮಾ ಇಂಡಸ್ಟ್ರಿಯ ಯಂಗ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯ ಆ್ಯಕ್ಷನ್ ಡ್ರಾಮಾ 'ಕಿಂಗ್‌ಡಮ್' ಮತ್ತೆ ಮತ್ತೆ ಮುಂದೂಡಿಕೆಯಾಗುತ್ತಿದೆ. ಗೌತಮ್ ತಿನ್ನನುರಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಜುಲೈ 4ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಇತ್ತೀಚೆಗಷ್ಟೇ ಘೋಷಿಸಿತ್ತು. ಆದರೆ, ಸಿನಿಮಾ ಮತ್ತೆ ಮುಂದೂಡಿಕೆಯಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ನಿತಿನ್ ಅವರ 'ತಮ್ಮುಡು' ಚಿತ್ರವೂ ಅದೇ ದಿನ ಬಿಡುಗಡೆಯಾಗಲಿದೆ. ತಮ್ಮುಡು ಚಿತ್ರ ತಂಡ ಇದನ್ನು ಅಧಿಕೃತವಾಗಿ ಘೋಷಿಸಿದೆ. ಹಾಗಾಗಿ, ಕಿಂಗ್‌ಡಮ್ ಚಿತ್ರ ಜುಲೈ 25ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳಿವೆ. ಅದಾಗ್ಯೂ, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಗೌತಮ್ ತಿನ್ನನುರಿ ನಿರ್ದೇಶನದ 'ಕಿಂಗ್‌ಡಮ್' ಚಿತ್ರ ಸ್ಪೈ ಆಕ್ಷನ್ ಥ್ರಿಲ್ಲರ್ ಆಗಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯ ಅವರು ಸಿತಾರಾ ಎಂಟರ್‌ಟೈನ್‌ಮೆಂಟ್ ಮತ್ತು ಫಾರ್ಚೂನ್ ಫೋರ್ ಬ್ಯಾನರ್‌ಗಳ ಅಡಿ ಜಂಟಿಯಾಗಿ ನಿರ್ಮಿಸಿದ್ದಾರೆ. ಬಹುನಿರೀಕ್ಷಿತ ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಿ ಭಾಗ್ಯಶ್ರೀ ಬೋರ್ಸ್ ಬಣ್ಣ ಹಚ್ಚಿದ್ದಾರೆ. ದಕ್ಷಿಣದ ಖ್ಯಾತ ಗಾಯಕ ಅನಿರುದ್ಧ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ: 'ನಿಮ್ಮ ಸುತ್ತಲಿರುವ ಮೂರ್ಖರ ಬಗ್ಗೆ ಎಚ್ಚರದಿಂದಿರಿ': ರಾಜಾ ರಘುವಂಶಿ ಹತ್ಯೆ ಪ್ರಕರಣದ ಬಗ್ಗೆ ಕಂಗನಾ ರಣಾವತ್ ಪ್ರತಿಕ್ರಿಯೆ
'ಕಿಂಗ್‌ಡಮ್' ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿದೆ. ಈ ಟೀಸರ್‌ನಲ್ಲಿ ಗ್ಲೋಬಲ್ ಸ್ಟಾರ್ ಎನ್‌ಟಿಆರ್ ಧ್ವನಿ ನೀಡಿದ್ದಾರೆ. ಎನ್‌ಟಿಆರ್ ಅವರ ಧ್ವನಿ ಮತ್ತು ದೃಶ್ಯಗಳಿಂದ ಟೀಸರ್ ಪ್ರೇಕ್ಷಕರನ್ನು ತಲುಪಿದೆ. ವಿಜಯ್ ಅವರದ್ದು ಪವರ್ ಫುಲ್ ಪಾತ್ರ ಅನ್ನೋ ಸುಳಿವನ್ನು ಟೀಸರ್ ಬಿಟ್ಟುಕೊಟ್ಟಿದೆ. ಕಂಪ್ಲೀಟ್ ಆ್ಯಕ್ಷನ್ ಮೋಡ್‌ನಲ್ಲಿರುವ ಟೀಸರ್ ಈಗಾಗಲೇ 18 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಅಲ್ಲದೇ ಚಿತ್ರದ ಮೊದಲ ಹಾಡೂ ಕೂಡಾ ಯುವಕರನ್ನು ಆಕರ್ಷಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ 'ಥಗ್ ಲೈಫ್' ಬಿಡುಗಡೆಗೆ ಅನುಮತಿ ಸಿಗುತ್ತಾ? 5 ದಿನಗಳಾದರೂ 50 ಕೋಟಿ ದಾಟದ ಕಮಲ್ ಹಾಸನ್ ಸಿನಿಮಾ
ಕಿಂಗ್‌ಡಮ್ ಮೇ 30ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರವನ್ನು ಜುಲೈ 4ಕ್ಕೆ ಮುಂದೂಡಲಾಯಿತು. ಪಾಕ್ - ಭಾರತ ಉದ್ವಿಗ್ನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿತ್ತು. ''ದೇಶದ ಪರಿಸ್ಥಿತಿಯನ್ನು ಪರಿಗಣನೆಯಲ್ಲಿಟ್ಟುಕೊಂಡು, ನಮ್ಮ ಚಿತ್ರವನ್ನು ಮುಂದೂಡಿದ್ದೇವೆ. ಸಿನಿಮಾವನ್ನು ಮತ್ತಷ್ಟು ಉತ್ತಮವಾಗಿ ಪ್ರಸ್ತುತಪಡಿಸಲು ಈ ನಿರ್ಧಾರ ನಮಗೆ ಸಹಾಯ ಮಾಡುತ್ತೇವೆ ಎಂದು ನಂಬುತ್ತೇವೆ. ನಿಮ್ಮ ಬೆಂಬಲಕ್ಕೆ ಅಪಾರ ಧನ್ಯವಾದಗಳು. ಜುಲೈ 4ರಂದು ಸಿನಿಮಾ ಚಿತ್ರಮಂದಿರ ತಲುಪಲಿದೆ'' ಎಂದು ಚಿತ್ರತಂಡ ತಿಳಿಸಿತ್ತು. ಸದ್ಯ, ರಿಲೀಸ್ ಡೇಟ್ ಸುತ್ತ ಹಲವು ಊಹಾಪೋಹಗಳಿದ್ದು, ಚಿತ್ರತಂಡ ಸ್ಪಷ್ಟನೆ ಕೊಡಬೇಕಿದೆ.