ಸೌತ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ 'ಕಿಂಗ್‌ಡಮ್' ಚಿತ್ರವು ಇದೇ ಮೇ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ, ವಿಜಯ್ ದೇವರಕೊಂಡ ಮತ್ತು ಚಿತ್ರತಂಡ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಹೌದು, ದೇಶದ ಸ್ಥಿತಿಗತಿ ಗಮನಿಸಿ ತಮ್ಮ ಸಿನಿಮಾವನ್ನು ಮುಂದೂಡಿದ್ದಾರೆ. ನಿರ್ಮಾಪಕರಿಂದು ಅಧಿಕೃತ ಘೋಷಣೆ ಮಾಡಿದ್ದು, ಪ್ರೇಕ್ಷಕರಿಗೆ ಹೊಸ ದಿನಾಂಕವನ್ನು ಘೋಷಿಸಿದ್ದಾರೆ.
ನಾಯಕ ನಟ ವಿಜಯ್ ದೇವರಕೊಂಡ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಚಿತ್ರವನ್ನು ಮುಂದೂಡಲು ಪ್ರಮುಖ ಕಾರಣವೇನು? ಎಂಬುದನ್ನು ವಿವರಿಸಿದರು.
ಪೋಸ್ಟ್ನಲ್ಲಿ, ''ನಮ್ಮ ಪ್ರಿಯ ವೀಕ್ಷಕರಿಗೆ ನಾವು ಈ ವಿಷಯ ಹಂಚಿಕೊಳ್ಳಲು ಬಯಸುತ್ತೇವೆ. ಮೇ 30ಕ್ಕೆ ಬಿಡುಗಡೆಯಾಗಬೇಕಿದ್ದ ನಮ್ಮ 'ಕಿಂಗ್‌ಡಮ್' ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಚಿತ್ರ, ಜುಲೈ 4ರಂದು ರಿಲೀಸ್ ಆಗಲಿದೆ. ನಾವದನ್ನು ಮೂಲ ದಿನಾಂಕದಂದು ಬಿಡುಗಡೆ ಮಾಡಲು ಸಾಕಷ್ಟು ಯೋಚಿಸಿದೆವು. ಆದರೆ, ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣನೆಯಲ್ಲಿಟ್ಟುಕೊಂಡು, ನಾವದನ್ನು ಮುಂದೂಡಿದ್ದೇವೆ. ಈ ನಿರ್ಧಾರವು ಸಿನಿಮಾವನ್ನು ಮತ್ತಷ್ಟು ಉತ್ತಮವಾಗಿ ಪ್ರಸ್ತುತಪಡಿಸಲು ನಮಗೆ ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು. ಜುಲೈ 4ರಂದು ಚಿತ್ರ ಮಂದಿರಗಳಲ್ಲಿ ನಿಮ್ಮನ್ನು ಭೇಟಿಯಾದಾಗ ಅಪಾರ ಪ್ರೀತಿಯನ್ನು ನಾವು ಸ್ವೀಕರಿಸುತ್ತೇವೆ ಎಂದು ಭಾವಿಸುತ್ತೇವೆ. ಈ ಬದಲಾವಣೆಯನ್ನು ಸಾಧ್ಯವಾಗಿಸುವಲ್ಲಿ ಸಹಕರಿಸಿದ ದಿಲ್ ರಾಜು ಮತ್ತು ನಿತಿನ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ, ಜೈ ಹಿಂದ್'' ಎಂದು ಬರೆದುಕೊಂಡಿದ್ದಾರೆ.
#Kingdom
— Vijay Deverakonda (@TheDeverakonda) May 14, 2025
July 04, 2025.
Will see you in the cinemas :) pic.twitter.com/uQUjpngygD
ಇದನ್ನೂ ಓದಿ: 'ಆಪರೇಷನ್ ಸಿಂಧೂರ್' ವೇಳೆ ತುಟಿ ಬಿಚ್ಚದ ಅಮೀರ್ ಖಾನ್: 'ಸಿತಾರೆ ಜಮೀನ್ ಪರ್' ಬಹಿಷ್ಕರಿಸಲು ಒತ್ತಾಯ
ಈ ವರ್ಷದ ಫೆಬ್ರವರಿಯಲ್ಲಿ ಕಿಂಗ್‌ಡಮ್ ಚಿತ್ರದ ಟೀಸರ್ ಬಿಡುಗಡೆ ಆಯಿತು. ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಕಿಂಗ್‌ಡಮ್ ಯಶಸ್ವಿಯಾಗಿದೆ. ವಿಜಯ್ ಅವರ ಈ ಹೊಸ ಅವತಾರ ನೋಡಲು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಬಹಳ ಉತ್ಸುಕರಾಗಿದ್ದಾರೆ. ಗೌತಮ್ ತಿನ್ನನೂರಿ ನಿರ್ದೇಶನದ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: 'ಕಾಂತಾರ'ಗೆ ಹಲವು ವಿಘ್ನಗಳು: ಶೆಟ್ರ ಸಿನಿಮಾಗೆ ಏನಾಗ್ತಿದೆ? ಯಾರು, ಏನಂದ್ರು?
ಇನ್ನೂ 'ಕಿಂಗ್‌ಡಮ್' ಹೊರತುಪಡಿಸಿ, ವಿಜಯ್ ದೇವರಕೊಂಡ ಬಳಿ ಹಲವು ಯೋಜನೆಗಳಿವೆ. VD14 ಮತ್ತು SVC59ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಗಳ ಅಧಿಕೃತ ಶೀರ್ಷಿಕೆ ಇನ್ನಷ್ಟೇ ಹೊರಬೀಳಬೇಕಿದೆ. ವಿಡಿ14ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎಂಬ ವರದಿಗಳಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಫೀಶಿಯಲ್ ಅನೌನ್ಸ್ಮೆಂಟ್ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.