'ಕೆಜಿಎಫ್' ಎಂಬ ಕನ್ನಡ ಚಿತ್ರರಂಗದ ಬ್ಲಾಕ್ಬಸ್ಟರ್ ಸಿನಿಮಾದಲ್ಲಿನ ಅಮೋಘ ಅಭಿನಯದಿಂದ ವಿಶ್ವವಿಖ್ಯಾತರಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ 'ಟಾಕ್ಸಿಕ್'. ಯಶ್ ತಮ್ಮ ಈ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಗಡಿ ಮೀರಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದ್ದಾರೆ. ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾದ ಶೂಟಿಂಗ್ ಸೆಟ್ ಫೋಟೋವೀಗ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದೆ.
ಚಿತ್ರತಂಡದ ಭಾಗವಾದ ಬಹುಭಾಷಾ ಪ್ರತಿಭೆ: ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ವೆರಿ ಬಿಗ್ ಪ್ರಾಜೆಕ್ಟ್ 'ಟಾಕ್ಸಿಕ್' ಚಿತ್ರೀಕರಣ ಶರವೇಗದಲ್ಲಿ ಸಾಗಿದೆ. ಈ ತಿಂಗಳಲ್ಲೇ ಚಿತ್ರಮಂದಿರಗಳಲ್ಲಿ ಅಬ್ಬರಿಸಬೇಕಿದ್ದ ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವರ್ಷ ಸಮಯ ತೆಗೆದುಕೊಂಡಿದೆ. ಅಲ್ಲಿಗೆ ಊಹಿಸಿ ಸಿನಿಮಾ ಎಷ್ಟರ ಮಟ್ಟಿಗೆ ಮೂಡಿಬರಬಹುದೆಂಬುದನ್ನು. ಚಿತ್ರೀಕರಣ ಸಾಗಿದ್ದು, ಬಹುಭಾಷಾ ಪ್ರತಿಭೆ ಸುದೇವ್ ನಾಯರ್ ಚಿತ್ರತಂಡದ ಭಾಗವಾಗಿದ್ದಾರೆ. ಇವರು ಸಿನಿಮಾದಲ್ಲಿ ಭಾಗಿಯಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕ 'ಟಾಕ್ಸಿಕ್' ಸಿನಿಮಾ ಫ್ಯಾನ್ಸ್ಗೆ ಅಧಿಕೃತ ಮಾಹಿತಿ ಪೂರೈಸಿದ್ದಾರೆ.
ಸುದೇವ್ ನಾಯರ್ ಇನ್ಸ್ಟಾಗ್ರಾಮ್ ಪೋಸ್ಟ್: ''ದಿನದ ಅತ್ಯಂತ ಸ್ವೀಟೆಸ್ಟ್ ಸ್ಟಂಟ್ ಅನ್ನು ಸಂಯೋಜನೆ ಮಾಡಿದ್ದಕ್ಕಾಗಿ ನಾನು ಯಶ್ ಮತ್ತು ನಮ್ಮ ಟಾಕ್ಸಿಕ್ ಚಿತ್ರತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಡಯಟ್ ಅನ್ನು ಬ್ರೇಕ್ ಮಾಡಲು ನನ್ನ ಕೈಲಾದಷ್ಟು ಪ್ರಯತ್ನಿಸಿದರೂ ವಿಫಲವಾಯಿತು. ಅದಾಗ್ಯೂ, ನನ್ನ ಬರ್ತ್ಡೇ ವೀಕ್ನಲ್ಲಿ ನಾನು ಅಂತಹ ಯಾವುದೇ ಡಯಟ್ ಪಾಲಿಸುತ್ತಿಲ್ಲ'' ಎಂದು ಬರೆದುಕೊಂಡಿದ್ದಾರೆ.
ಕೆಜಿಎಫ್2ಗೆ 3 ವರ್ಷಗಳ ಸಂಭ್ರಮ: ಇದೇ ಏಪ್ರಿಲ್ 14ಕ್ಕೆ ಸೂಪರ್ ಹಿಟ್ 'ಕೆಜಿಎಫ್: ಚಾಪ್ಟರ್ 2' ತೆರೆಗಪ್ಪಳಿಸಿ 3 ವರ್ಷಗಳನ್ನು ಪೂರೈಸಿದೆ. ಬ್ಲಾಕ್ಬಸ್ಟರ್ ಚಿತ್ರದ 3ನೇ ವಾರ್ಷಿಕೋತ್ಸವದ ಸಂದರ್ಭ ವಿಶೇಷ ವಿಡಿಯೋ ಒಂದನ್ನು ನಿರ್ಮಾಪಕರು ಅನಾವರಣಗೊಳಿಸಿದ್ದರು. ಜೊತೆಗೆ, ಬಹು ನಿರೀಕ್ಷಿತ 'ಕೆಜಿಎಫ್ ಅಧ್ಯಾಯ 3'ರ ಸುಳಿವನ್ನೂ ನೀಡಿದ್ದಾರೆ. ಅಭಿಮಾನಿಗಳು ರಾಕಿ ಭಾಯ್ ಪಾತ್ರವನ್ನು ಸೆಲೆಬ್ರೇಶನ್ ಮಾಡೋದನ್ನು ಮುಂದುವರಿಸಿದ್ದು, ಈ ಅನೌನ್ಸ್ಮೆಂಟ್ ಹೊಸ ಭರವಸೆ ಮತ್ತು ಉತ್ಸಾಹ ನೀಡಿದೆ.
ಯಶ್ ಹೇಳಿದ್ದಿಷ್ಟು... ಈ ಹಿಂದೆ ಸಂದರ್ಶನವೊಂದರಲ್ಲಿ, ಕೆಜಿಎಫ್ 3 ನಮ್ಮ ಮುಂದಿನ ಪ್ರಾಜೆಕ್ಟ್ಸ್ ಲಿಸ್ಟ್ನಲ್ಲಿದೆ ಎಂದು ಸ್ವತಃ ಯಶ್ ದೃಢಪಡಿಸಿದ್ದರು. ರಾಕಿ ಭಾಯ್ ಪಾತ್ರ ನಿರ್ವಹಿಸಿ ಸಾಕಷ್ಟು ಹೆಸರು ಸಂಪಾದಿಸಿರುವ ನಟ, "ಕೆಜಿಎಫ್ 3 ಖಂಡಿತವಾಗಿಯೂ ಬರಲಿದೆ ಎಂಬ ಭರವಸೆ ನೀಡುತ್ತೇನೆ. ಆದ್ರೆ ನಾನೀಗ ಎರಡು ಸಿನಿಮಾ ಮೇಲೆ (ಟಾಕ್ಸಿಕ್ ಮತ್ತು ರಾಮಾಯಣ) ಗಮನ ಹರಿಸುತ್ತಿದ್ದೇನೆ. ನಾವು ಆ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ನಮ್ಮಲ್ಲಿ ಐಡಿಯಾ ಇದೆ. ಸೂಕ್ತ ಸಮಯ ಬಂದಾಗ... ಅದು ದೊಡ್ಡ ಪ್ರಾಜೆಕ್ಟ್, ಹಾಗಾಗಿ ಅದಕ್ಕೂ ನಮ್ಮೆಲ್ಲರ ಗಮನ ಬೇಕು" ಎಂದು ಹೇಳಿದ್ದರು.
ಇದನ್ನೂ ಓದಿ: ಜೂ.ಎನ್ಟಿಆರ್ ತೂಕ ಇಳಿಕೆ, ಅನಾರೋಗ್ಯ ವದಂತಿ; ಅಸಲಿಯತ್ತೇನು?
ಮುಂದಿನ ಮಾರ್ಚ್ಗೆ ಟಾಕ್ಸಿಕ್: ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಟಾಕ್ಸಿಕ್ ಚಿತ್ರವನ್ನು ವೆಂಕಟ್ ಕೆ ನಾರಾಯಣ್ ಹಾಗೂ ಯಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇದ್ದು, 2026ರ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ. ಈ ಮೊದಲು 2025ರ ಏಪ್ರಿಲ್ 10ರಂದು ಬಿಡುಗಡೆ ಮಾಡುವುದಾಗಿ ತಂಡ ಘೋಷಿಸಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ವಿಳಂಬ ಎದುರಿಸಿದೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಮಿಸ್ ವರ್ಲ್ಡ್ 2025: ಚಾರ್ಮಿನಾರ್ನಲ್ಲಿ ಭಾರತದ ಸುಂದರಿ ನಂದಿನಿ ಗುಪ್ತಾ ಶಾಪಿಂಗ್