ಭಾರತೀಯ ಚಿತ್ರರಂಗದ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಅವರು ಇತ್ತೀಚೆಗೆ ಮೆಲ್ಬೋರ್ನ್‌ನಲ್ಲಿ ನಡೆದ ತಮ್ಮ ಮ್ಯೂಸಿಕ್ ಈವೆಂಟ್ನಲ್ಲಿ ಅಭಿಮಾನಿಗಳ ಆಕ್ರೋಶವನ್ನು ಎದುರಿಸಬೇಕಾಯಿತು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಗಾಯಕಿ ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟಿರೋದನ್ನು ಕಾಣಬಹುದು. ವಿಡಿಯೋ ವೈರಲ್ ಆಗಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ಬಳಿಕ, ನೇಹಾ ಕಕ್ಕರ್ ಅವರ ಸಹೋದರ ಮತ್ತು ಗಾಯಕ ಟೋನಿ ಕಕ್ಕರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಮಂಗಳವಾರ, ಮಾರ್ಚ್ 25ರಂದು, ಟೋನಿ ಕಕ್ಕರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ನೇಹಾ ಕಕ್ಕರ್ ಘಟನೆಯನ್ನು ಉಲ್ಲೇಖಿಸದೇ, ಸಾರ್ವಜನಿಕರ ಸಭ್ಯತೆಯನ್ನು ಪ್ರಶ್ನಿಸಿದ್ದಾರೆ. 'ಆರ್ಟಿಸ್ಟ್ ಮರ್ಯಾದಾ ಮೆ ರಹೆ, ಔರ್ ಜನತಾ?' ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಶೇರ್ ಮಾಡಲಾಗಿರೋ ಪೋಸ್ಟ್ನಲ್ಲಿ, 'ಕಾರ್ಯಕ್ರಮದಲ್ಲಿ ಭಾಗಿಯಾಗಲು ನನ್ನೂರಿಗೆ ನಾನು ನಿಮ್ಮನ್ನು ಆಹ್ವಾನಿಸುತ್ತೇನೆ ಮತ್ತು ನಿಮ್ಮ ಹೋಟೆಲ್ ಬುಕಿಂಗ್, ಕಾರು, ಏರ್ಪೋರ್ಟ್ ಪಿಕಪ್ ಮತ್ತು ಟಿಕೆಟ್‌ಗಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಭಾವಿಸೋಣ. ಈಗ ನೀವಲ್ಲಿಗೆ ತಲುಪಿದಾಗ ಏನೂ ಬುಕ್ ಆಗಿಲ್ಲ ಎಂದು ಊಹಿಸಿ. ಏರ್ಪೋರ್ಟ್ನಲ್ಲಿ ಕಾರಿಲ್ಲ, ಹೋಟೆಲ್ ಬುಕಿಂಗ್ ಇಲ್ಲ, ಟಿಕೆಟ್‌ಗಳಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯಾರನ್ನು ಬ್ಲೇಮ್ ಮಾಡೋದು?' ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ಗೆ, 'ನನ್ನಲ್ಲೊಂದು ಪ್ರಶ್ನೆ ಇದೆ. ಅದು ಯಾರಿಗೂ ಅಲ್ಲ, ಕೇವಲ ಪ್ರಶ್ನೆ ಅಷ್ಟೇ, ಕಾಲ್ಪನಿಕವಾಗಿ' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಈವೆಂಟ್ಗೆ 3 ಗಂಟೆ ಲೇಟ್, ರೊಚ್ಚಿಗೆದ್ದ ಪ್ರೇಕ್ಷಕರು: ಕಣ್ಣೀರಿಟ್ಟು ಕ್ಷಮೆಯಾಚಿಸಿದ ಗಾಯಕಿ ನೇಹಾ ಕಕ್ಕರ್
ಟೋನಿ, ನೇಹಾ ಕಕ್ಕರ್ ಅವರ ಮೆಲ್ಬೋರ್ನ್ ಈವೆಂಟ್ನ ಮುದ್ದಾದ ವಿಡಿಯೋವನ್ನೂ ಪೋಸ್ಟ್ ಮಾಡಿದ್ದಾರೆ. ನೇಹಾ ಕಕ್ಕರ್ ಮತ್ತು ಅಭಿಮಾನಿಯ ನಡುವಿನ ವಿಶಿಷ್ಟ ಕ್ಷಣವನ್ನು ಕಾಣಬಹುದಾಗಿದೆ. "ದಯವಿಟ್ಟು ಅಳಬೇಡಿ, ಇಲ್ಲದಿದ್ದರೆ ನಾನೂ ಅಳುತ್ತೇನೆ. ನಾನೂ ಅತ್ತರೆ ಸಮಯ ತೆಗೆದುಕೊಳ್ಳುತ್ತದೆ, ಅಭಿಮಾನಿಗಳು ಕಾಯಬೇಕಾಗುತ್ತದೆ" ಎಂದು ಅಭಿಮಾನಿ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಸಿಎಂ ಶಿಂಧೆ ವಿರುದ್ಧ ಹೇಳಿಕೆ: ವಿಚಾರಣೆಗೆ ಸಮಯ ಕೇಳಿದ್ದ ಕುನಾಲ್ ಕಮ್ರಾ ಮನವಿ ತಿರಸ್ಕಾರ
ಫ್ಯಾನ್-ಆರ್ಟಿಸ್ಟ್ ವಿಡಿಯೋಗೆ, ಅಭಿಮಾನಿಗಳೂ ಅಳುತ್ತಾರೆ. ಅವರ ಕಣ್ಣೀರು ಫೇಕ್ ಅಲ್ಲ ಅಂದಮೇಲೆ ಆರ್ಟಿಸ್ಟ್ ಗಳ ಕಣ್ಣೀರು ಹೇಗೆ ನಕಲಿ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಘಟನೆ: ಮೆಲ್ಬೋರ್ನ್‌ನಲ್ಲಿ ಆಯೋಜನೆಗೊಂಡಿದ್ದ ತಮ್ಮ ಲೈವ್ ಮ್ಯೂಸಿಕ್ ಈವೆಂಟ್ಗೆ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ 3 ಗಂಟೆ ತಡವಾಗಿ ತಲುಪಿದರು. ಗಾಯಕಿಗಾಗಿ ಕಾದ ಪ್ರೇಕ್ಷಕರು ಆಕ್ರೋಶಗೊಂಡರು. 3 ಗಂಟೆ ಲೇಟ್ ಆಗಿ ಆಗಮಿಸಿದ ನೇಹಾ, ಈವೆಂಟ್ನಲ್ಲಿ ಹಾಜರಿದ್ದ ತಮ್ಮ ಅಭಿಮಾನಿಗಳಲ್ಲಿ ಅಳುತ್ತಾ ಕ್ಷಮೆಯಾಚಿಸಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದ್ದು, ಬಹುತೇಕ ನೆಗೆಟಿವ್ ರಿಯಾಕ್ಷನ್ ಸ್ವೀಕರಿಸಿದೆ