ದಕ್ಷಿಣ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ಬಹುನಿರೀಕ್ಷಿತ ಚಿತ್ರ ಥಗ್ ಲೈಫ್ ಇಂದು ಕರ್ನಾಟಕ ಹೊರತುಪಡಿಸಿ ದೇಶಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ತಮ್ಮ ಹೇಳಿಕೆಯಿಂದಾಗಿ ಭಾಷಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿವಾದದ ನಡುವೆ, ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಮತ್ತೆ ಗಮನ ಸೆಳೆದಿದ್ದಾರೆ.
ಥಗ್ ಲೈಫ್ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶವಿಲ್ಲ: ಇತ್ತೀಚೆಗೆ ತಮ್ಮ 'ಥಗ್ ಲೈಫ್' ಸಿನಿಮಾ ಪ್ರಚಾರ ಸಂದರ್ಭ ಕನ್ನಡದ ಖ್ಯಾತ ನಟ ಶಿವರಾಜ್ಕುಮಾರ್ ಅವರ ಎದುರೇ 'ಕನ್ನಡ ತಮಿಳಿನಿಂದ ಹುಟ್ಟಿದೆ' ಎಂದು ನಾಯಕ ನಟ ಕಮಲ್ ಹಾಸನ್ ಹೇಳಿಕೆ ಕೊಟ್ಟರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ಹಿರಿಯ, ಜನಪ್ರಿಯ ನಟ ಭಾಷಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಕ್ಷಮೆಯಾಚನೆಗೆ ತೀವ್ರ ಒತ್ತಾಯ ಕೇಳಿಬಂತು. ಆದ್ರೆ, ನಟ ಕ್ಷಮೆಯಾಚಿಸದೇ ಕನ್ನಡದ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಬರುವವರೆಗೂ ಥಗ್ ಲೈಫ್ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶವಿಲ್ಲ.

ನಟನ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ: ಈ ವಿವಾದದ ನಡುವೆ ನಟ ಕಮಲ್ ಹಾಸನ್ ಸಾಮಾಜಿಕ ಮಾಧ್ಯಮದಲ್ಲಿ ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ನಟನ ಪೋಸ್ಟ್ ಮಿಶ್ರ ಪ್ರತಿಕ್ರಿಯೆಗೆ ಆಹ್ವಾನವಿಟ್ಟಿದೆ. ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಈಗ ಬೆಂಗಳೂರು ದುರ್ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎಂಬರ್ಥದಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕಮಲ್ ಹಾಸನ್ ಟ್ವೀಟ್: ಎಕ್ಸ್ (ಟ್ವಿಟರ್) ಪೋಸ್ಟ್ನಲ್ಲಿ, "ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ದುರಂತ. ತೀವ್ರ ದುಃಖಿತನಾಗಿದ್ದೇನೆ ಮತ್ತು ಈ ದುಃಖದ ಕ್ಷಣದಲ್ಲಿ ನನ್ನ ಹೃದಯವು ಸಂತ್ರಸ್ತ ಕುಟುಂಬಗಳೊಂದಿಗಿವೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ" ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ನನಗೂ ಉಸಿರುಕಟ್ಟಿತ್ತು': ಕಾಲ್ತುಳಿತದ ಕರಾಳ ಅನುಭವ ಬಿಚ್ಚಿಟ್ಟ ಗಾಯಕ ಚಂದನ್ ಶೆಟ್ಟಿ
ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ಗಳ ಬಳಿ ಉಂಟಾದ ಕಾಲ್ತುಳಿತ, ಸಾವಿಗೆ ಕಾರಣಗಳು, ಘಟನಾವಳಿಗಳ ಮಾಹಿತಿ, ಉಂಟಾಗಿರಬಹುದಾದ ಲೋಪಗಳು, ಲೋಪಕ್ಕೆ ಕಾರಣರಾದವರು, ನಿರ್ಲಕ್ಷ್ಯತೆಯಿಂದ ಉಂಟಾಗಿದೆಯೇ - ಹೀಗೆ ಎಲ್ಲಾ ಅಂಶಗಳ ಸಮಗ್ರ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಬೆಂಗಳೂರು ನಗರ ಜಿಲ್ಲೆ ಡಿಸಿ ಜಗದೀಶ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. 15 ದಿನಗಳೊಳಗಾಗಿ ಸರ್ಕಾರಕ್ಕೆ ರಿಪೋರ್ಟ್ ಸಲ್ಲಿಸುವಂತೆಯೂ ಸೂಚಿಸಲಾಗಿದೆ.
ಇದನ್ನೂ ಓದಿ: 'ಅಭಿಮಾನ, ಪ್ರೀತಿ ನಮ್ಮ ಕುಟುಂಬದ ನೋವಿಗೆ ಕಾರಣವಾಗಬಾರದು': ಕಾಲ್ತುಳಿತದ ಬಗ್ಗೆ ಶಿವಣ್ಣ ಸೇರಿ ಸಿನಿಗಣ್ಯರ ಕಂಬನಿ
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ''ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಸಂಭವಿಸಿದ ಸಾವು - ನೋವಿಗೆ ಕಾರಣಗಳು ಹಾಗೂ ಲೋಪ ಉಂಟಾಗಿದ್ದಲ್ಲಿ ಆ ಬಗ್ಗೆ ಸಮಗ್ರ ವಿಚಾರಣೆಯನ್ನು ನಡೆಸಲು ಬೆಂಗಳೂರು ನಗರದ ಜಿಲ್ಲಾಧಿಕಾರಿಗಳನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿದೆ. ಇವರು 15 ದಿನಗಳ ಒಳಗಾಗಿ ಮ್ಯಾಜಿಸ್ಟೀರಿಯಲ್ ವಿಚಾರಣೆಯನ್ನು ಪೂರ್ಣಗೊಳಿಸಿ ವರದಿ ನೀಡಲಿದ್ದು, ವರದಿಯನ್ನು ಆಧರಿಸಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ'' ಎಂದು ಬರೆದುಕೊಂಡಿದ್ದಾರೆ.