ಕನ್ನಡ ಚಿತ್ರರಂಗದಲ್ಲಿ ಹೊಸಬರ ಕಂಟೆಂಟ್ ಸಿನಿಮಾಗಳು ಬರುತ್ತಿವೆ. ಈ ಸಾಲಿನಲ್ಲೀಗ 'ಎಲ್ಟು ಮುತ್ತಾ' ಗಮನ ಸೆಳೆದಿದೆ. ರಾ.ಸೂರ್ಯ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ರಾ.ಸೂರ್ಯ - ಶೌರ್ಯ ಪ್ರತಾಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಇತ್ತೀಚೆಗೆ ಟೀಸರ್ ಅನಾವರಣಗೊಂಡಿದೆ.
ಈ ಹೊಸ ಪ್ರತಿಭೆಗಳ ಚಿತ್ರಕ್ಕೆ ಶೈಲಜಾ ವಿಜಯ್ ಕಿರಂಗದೂರ್ ತಮ್ಮ ಬೆಂಬಲ ಕೊಟ್ಟಿದ್ದಾರೆ. ಇವರ ಜೊತೆ ಅಕ್ಷಯ್ ಗಂಗಾಧರ್ ಹಾಗೂ ಎಲ್.ವೈ ರಾಜೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟೀಸರ್ ಕುತೂಹಲ ಮೂಡಿಸುವಂತಿದೆ.

'ಸಾವಿನ ಸಂದರ್ಭ ಡೋಲು ಹೊಡೆಯುವವರ ಸುತ್ತಲಿನ ಕಥೆ': ನಿರ್ದೇಶಕ - ನಟ ರಾ.ಸೂರ್ಯ ಮಾತನಾಡಿ, ಎಲ್ಟು ಮುತ್ತಾ ಸಾವಿನ ಸಂದರ್ಭ ಡೋಲು ಹೊಡೆಯುವವರ ಸುತ್ತಲಿನ ಕಥೆ. ಎಲ್ಟು ಮುತ್ತಾ ಅಂದರೆ 2 ಪಾತ್ರಗಳು. ಎಲ್ಟು ಪಾತ್ರದಲ್ಲಿ ನಾನೇ ಅಭಿನಯಿಸಿರುವುದರ ಜೊತೆಗೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದೇನೆ. ಮುತ್ತಾ ಪಾತ್ರದಲ್ಲಿ ಶೌರ್ಯ ಪ್ರತಾಪ್ ಅಭಿನಯಿಸಿದ್ದಾರೆ. ನವೀನ್ ಪಡೀಲ್, ಕಾಕ್ರೋಜ್ ಸುಧೀ, ಯಮುನ ಶ್ರೀನಿಧಿ ಅವರಂತಹ ಅನುಭವಿ ಕಲಾವಿದರ ಜೊತೆಗೆ ಬಹುತೇಕ ನೂತನ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ.

ನವಿಲು ಸರ್ಪದ ಸಂಘರ್ಷ! ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ನವಿಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆಯೂ ನಮ್ಮ ಚಿತ್ರದ ಕಥೆಗೆ ಸ್ಪೂರ್ತಿ. ತನ್ನ ಕುಣಿತದಿಂದ ಎಲ್ಲರ ಗಮನ ಸೆಳೆಯುವ ಮುಗ್ದ ಸ್ವಭಾವದ ನವಿಲು, ಕೆರಳಿದರೆ ಕಾಳಿಂಗ ಸರ್ಪವನ್ನು ಕೊಲ್ಲುತ್ತದೆ. ಇದನ್ನೇ ನಾವು ಪಾತ್ರಗಳ ಮೂಲಕ ಹೇಳಿದ್ದೇವೆ. ಇದು ಕೊಡಗು ಭಾಗದಲ್ಲಿ ನಡೆಯುವ ಕಥೆ. ಹೆಚ್ಚಿನ ಚಿತ್ರೀಕರಣ ಕೊಡಗಿನಲ್ಲೇ ನಡೆದಿದೆ. ಸಂಭಾಷಣೆ ಕೂಡಾ ಮಡಿಕೇರಿ ಕನ್ನಡ ಭಾಷೆಯಲ್ಲೇ ಇರುತ್ತದೆ ಎಂದು ತಿಳಿಸಿದರು.

'ಕಲಾವಿದನಾಗುವುದು ತಂದೆಗೆ ಇಷ್ಟವಿರಲಿಲ್ಲ': ಯುವನಟ ಶೌರ್ಯ ಪ್ರತಾಪ್ ಮಾತನಾಡಿ, ನಾನು ಕಲಾವಿದನಾಗುವುದು ನನ್ನ ತಂದೆಗೆ ಇಷ್ಟವಿರಲಿಲ್ಲ. ಹಾಗೇ ಆಯಿತು. ನಮ್ಮ ತಂದೆಯ ಇಚ್ಚೆಯಂತೆ ಓದಿ ಒಳ್ಳೆಯ ಸ್ಥಾನಕ್ಕೆ ಬಂದು ಈಗ ನಟ ಆಗಿದ್ದೇನೆ. ನನ್ನ ಹಾಗೂ ನನ್ನ ತಂದೆ ಇಬ್ಬರ ಆಸೆಯೂ ಈಡೇರಿದೆ. ಮುತ್ತಾ ನನ್ನ ಪಾತ್ರದ ಹೆಸರು. ನಟನಾಗಷ್ಟೇ ಅಲ್ಲದೇ ಸಹ ನಿರ್ದೇಶಕನಾಗಿ ಹಾಗೂ ಸಹ ಬರಹಗಾರನಾಗಿಯೂ ಕಾರ್ಯ ನಿರ್ವಹಿಸಿದ್ದೇನೆ ಎಂದರು.
ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ ಖುಷಿ ಇದೆ. ಅಲೆಕ್ಸ್ ಚಟ್ವಾ ನನ್ನ ಪಾತ್ರದ ಹೆಸರು ಎಂದು ಕಾಕ್ರೋಜ್ ಸುಧೀ ತಿಳಿಸಿದರು.

'ಚಿತ್ರೀಕರಣಕ್ಕೂ ಮುನ್ನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆವು': ನಿರ್ಮಾಪಕ ಸತ್ಯ ಶ್ರೀನಿವಾಸನ್ ಮಾತನಾಡಿ, ನಾನು ಮೂಲತಃ ಐಟಿ ಉದ್ಯೋಗಿ. ವೈಲ್ಡ್ ಫೊಟೊಗ್ರಾಫಿ ನನ್ನ ಹವ್ಯಾಸ. ನನ್ನ ತಂದೆ ಶ್ರೀನಿವಾಸನ್ ತಮಿಳು ಚಿತ್ರರಂಗದಲ್ಲಿ ವಿತರಕರಾಗಿದ್ದರು. ಸಿನಿಮಾ ನಿರ್ಮಾಣ ನನ್ನ ಆಸೆ. ಅದೀಗ ಈಡೇರಿದೆ. ಹೈ5 ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರೀಕರಣಕ್ಕೂ ಮುನ್ನ ನಾವು ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಚಿತ್ರತಂಡದ ಪ್ರತಿಯೊಬ್ಬರಿಗೂ ಆರೋಗ್ಯ ಹಾಗೂ ಜೀವವಿಮೆ ಮಾಡಿಸಿದ್ದೆವು. ನಮ್ಮಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಉದ್ದೇಶವಷ್ಟೇ. ದೇವರ ದಯೆಯಿಂದ ಸಣ್ಣ ಅಡಚಣೆಯೂ ಆಗದೇ ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತ ತಲುಪಿದೆ. ಅದಕ್ಕೂ ಮುನ್ನ ಹಾಡುಗಳು ಹುಬ್ಬಳ್ಳಿಯಲ್ಲಿ ಹಾಗೂ ಟ್ರೇಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. 'Ace 22' ಪ್ರೊಡಕ್ಷನ್ನ ಪವೀಂದ್ರ ಮುತ್ತಪ್ಪ ಈ ಚಿತ್ರದ ಬಿಡುಗಡೆಗಾಗಿ ನಮ್ಮ ಜೊತೆಯಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: 57ನೇ ಹರೆಯದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ಸಲ್ಲು ಸಹೋದರ: ತಾಯಿಯಾಗುತ್ತಿರುವ ಖುಷಿಯಲ್ಲಿ ಅರ್ಬಾಜ್ ಪತ್ನಿ
ನಾನು ಸಂಗೀತ ನಿರ್ದೇಶಕನಾಗಲೂ ಗುರುಗಳಾದ ಸಂಗೀತ ಕಟ್ಟಿ ಹಾಗೂ ರವಿ ಬಸ್ರೂರ್ ಅವರು ಕಾರಣ. ಈ ಚಿತ್ರದಲ್ಲಿ ಐದು ಹಾಡುಗಳಿವೆ ಎಂದು ಸಂಗೀತ ನಿರ್ದೇಶಕ ಪ್ರಸನ್ನ ಕೇಶವ ತಿಳಿಸಿದರು.
ಇದನ್ನೂ ಓದಿ: ಕರಾವಳಿ ಕಥೆಯಲ್ಲಿ ರಿತ್ವಿಕ್ ಮಠದ್, ಚೈತ್ರಾ ಆಚಾರ್: ಕತೂಹಲ ಕೆರಳಿಸುವ 'ಮಾರ್ನಮಿ' ಟೀಸರ್ ರಿಲೀಸ್
ನಾಯಕಿ ಪ್ರಿಯಾಂಕ ಮಲಾಲಿ, ಏಸ್ 22 ಪ್ರೊಡಕ್ಷನ್ನ ಪವೀಂದ್ರ ಮುತ್ತಪ್ಪ ಕೋಪದಿರ, ಕಾರ್ಯಕಾರಿ ನಿರ್ಮಾಪಕ ಹಾಗೂ ನಟ ರುಹಾನ್ ಆರ್ಯ ಹಾಗೂ ಧನು ದೇವಯ್ಯ ಮುಂತಾದವರು "ಎಲ್ಟು ಮುತ್ತಾ" ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಹೈ5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಶ್ರೀನಿವಾಸನ್ ನಿರ್ಮಿಸಿರುವ ಈ ಚಿತ್ರ ಜುಲೈ ಅಂತ್ಯದಲ್ಲಿ ತೆರೆಗೆ ಬರಲಿದೆ.