'ಕಾಂತಾರ'ವನ್ನೇ ಮೀರಿಸಿದ 'ಕಾಂತಾರ ಚಾಪ್ಟರ್ 1': ಕನ್ನಡ ಚಿತ್ರರಂಗದಲ್ಲೇ ಕೆಜಿಎಫ್ 2 ನಂತರದ ಸ್ಥಾನ ಪಡೆದುಕೊಂಡ ಶೆಟ್ರ ಸಿನಿಮಾ
ಮೂಲ ಕಾಂತಾರ ಚಿತ್ರದ ಒಟ್ಟು ಕಲೆಕ್ಷನ್ ಅನ್ನು 'ಕಾಂತಾರ ಚಾಪ್ಟರ್ 1' ಕೇವಲ 6 ದಿನಗಳಲ್ಲಿ ಮೀರಿಸಿದೆ. ಒಟ್ಟು 7 ದಿನಗಳ ಪ್ರದರ್ಶನ ಕಂಡಿದ್ದು, 8ನೇ ದಿನವೂ ಯಶಸ್ವಿ ಪ್ರದರ್ಶನ ಮುಂದುವರಿಸಿದೆ.

By ETV Bharat Entertainment Team
Published : October 9, 2025 at 10:25 AM IST
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿದ 'ಕಾಂತಾರ ಚಾಪ್ಟರ್ 1' ಕಳೆದ ಗುರುವಾರ, ಅಕ್ಟೋಬರ್ 2ರಂದು ಬಹಳ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಪೀರಿಯಾಡಿಕಲ್ ಜಾನಪದ ಸಾಹಸ ಥ್ರಿಲ್ಲರ್ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಕೇವಲ 6 ದಿನಗಳಲ್ಲಿ ಮೂಲ ಕಾಂತಾರ ಚಿತ್ರದ ಜೀವಮಾನದ ಗಳಿಕೆಯನ್ನು ಮೀರಿಸಿದೆ. ಅಲ್ಲದೇ, ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರವಾಗಿ ಹೊರಹೊಮ್ಮುವ ಮೂಲಕ 'ಕಾಂತಾರ ಚಾಪ್ಟರ್ 1' ಅದ್ಭುತ ಮೈಲಿಗಲ್ಲನ್ನು ಸಾಧಿಸಿದೆ. ಈವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾವಾಗಿ ಮೊದಲನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ 'ಕೆಜಿಎಫ್ ಚಾಪ್ಟರ್ 2' ಚಿತ್ರವಿದೆ.
'ಕಾಂತಾರ'ವನ್ನೇ ಮೀರಿಸಿದ 'ಕಾಂತಾರ ಚಾಪ್ಟರ್ 1': ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಡಿವೈನ್ ಸ್ಟಾರ್ ರಚನೆಯ ಕಾಂತಾರ ಅಧ್ಯಾಯ 1 ತೆರೆಕಂಡ 6 ದಿನಗಳಲ್ಲಿ ವಿಶ್ವದಾದ್ಯಂತ 410 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. 2022ರಲ್ಲಿ ತೆರೆಕಂಡು ಅಭೂತಪೂರ್ವ ಯಶಸ್ಸು ಕಂಡಿದ್ದ ಮೂಲ ಕಾಂತಾರ ಚಿತ್ರ 408 ಕೋಟಿ ರೂಪಾಯಿ ಗಳಿಸಿತ್ತು. ಈ ದಾಖಲೆಯನ್ನು ಸದ್ಯ ಕಾಂತಾರ ಪ್ರೀಕ್ವೆಲ್ 1 ವಾರದೊಳಗೆ ಪುಡಿಗಟ್ಟಿದೆ. ಚಿತ್ರತಂಡವೊಂದಕ್ಕೆ, ತಮ್ಮದೇ ದಾಖಲೆ ಮೀರಿಸುವ ಸಾಧನೆ ಕೊಡುವ ಖುಷಿ ಬಹುಶಃ ಮತ್ತೊಂದಿಲ್ಲ. ಈ ಸಾಧನೆಯನ್ನು ಭಾರತದ ಕೆಲವೇ ಕೆಲ ಚಿತ್ರಗಳು ಹೊಂದಿವೆ.
ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡದ 2ನೇ ಚಿತ್ರ: ಈವರೆಗೆ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾವಾಗಿ ನಂಬರ್ ಒನ್ ಸ್ಥಾನದಲ್ಲಿ ಕೆಜಿಎಫ್ ಸ್ಟಾರ್ ಯಶ್ ಮುಖ್ಯಭೂಮಿಕೆಯ 'ಕೆಜಿಎಫ್ ಚಾಪ್ಟರ್ 2' ಚಿತ್ರವಿದೆ. ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದ ಬ್ಲಾಕ್ಬಸ್ಟರ್ ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ 1,215 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಕನ್ನಡದ ನಂಬರ್ 1 ಸಿನಿಮಾವಾಗಿ ಸ್ಥಾನ ಪಡೆದುಕೊಂಡಿದೆ. ಕೆಜಿಎಫ್ 2 ಬಳಿಕ ಕಾಂತಾರ ಚಾಪ್ಟರ್ 1 ಸ್ಥಾನ ಪಡೆದುಕೊಂಡಿದೆ. ಅದು ಕೂಡಾ ಕೇವಲ ಆರೇ ದಿನಗಳಲ್ಲಿ. ಸಿನಿಮಾದ ಯಶಸ್ವಿ ಪ್ರದರ್ಶನ ಮುಂದುವರಿದಿದ್ದು, ಜೀವಮಾನದ ಗಳಿಕೆ ಮೇಲೆ ಬಹುತೇಕರ ಕಣ್ಣಿದೆ. ಇನ್ನೂ ಯಶ್ ಅವರದ್ದೇ ಆದ ಕೆಜಿಎಫ್ 1 (2018) ಜಗತ್ತಿನಾದ್ಯಂತ 238 ಕೋಟಿ ರೂ. ಗಳಿಕೆ ಮಾಡಿ ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.
ಭಾರತೀಯ ಬಾಕ್ಸ್ ಆಫೀಸ್ ಕಲೆಕ್ಷನ್: ಬಹುನಿರೀಕ್ಷಿತ ಚಿತ್ರಗಳಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಾಪ್ಟರ್ 1 ಅಕ್ಟೋಬರ್ 2ರಂದು ವಿಶ್ವದ ಸುಮಾರು 30 ದೇಶಗಳಲ್ಲಿ ಬಿಡುಗಡೆ ಆಗಿದೆ. ಚಿತ್ರ ಒಟ್ಟು 7 ದಿನಗಳ ಯಶಸ್ವಿ ಪ್ರದರ್ಶನ ಕಂಡಿದ್ದು, ಇಂದು 8ನೇ ದಿನದ ಪ್ರದರ್ಶನ ಕಾಣುತ್ತಿದೆ. ಕಳೆದ 7 ದಿನಗಳಲ್ಲಿ ಭಾರತವೊಂದರಲ್ಲೇ 316 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ.
ಮೊದಲ ಬುಧವಾರದ ಗಳಿಕೆ: ಸಿನಿಮಾ ಕಳೆದ ದಿನ, ತನ್ನ ಮೊದಲ ಬುಧವಾರ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಬಹುಭಾಷೆಗಳಲ್ಲಿ ತೆರೆಕಂಡಿರುವ ಚಿತ್ರ ಕನ್ನಡದಲ್ಲಿ 9 ಕೋಟಿ ರೂಪಾಯಿ, ತೆಲುಗಿನಲ್ಲಿ 3.5 ಕೋಟಿ ರೂಪಾಯಿ, ಹಿಂದಿಯಲ್ಲಿ 8.5 ಕೋಟಿ ರೂಪಾಯಿ, ತಮಿಳಿನಲ್ಲಿ 2.15 ಕೋಟಿ ರೂಪಾಯಿ ಮತ್ತು ಮಲಯಾಳಂನಲ್ಲಿ 1.85 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತವೊಂದರಲ್ಲೇ 316 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ.
ದಿನನಿತ್ಯದ ಕಲೆಕ್ಷನ್ ಮಾಹಿತಿ:
| ದಿನ | ಇಂಡಿಯಾ ನೆಟ್ ಕಲೆಕ್ಷನ್ |
| ಮೊದಲ ದಿನ (ಗುರುವಾರ) | 61.85 ಕೋಟಿ ರೂಪಾಯಿ. |
| ಎರಡನೇ ದಿನ (ಶುಕ್ರವಾರ) | 45.4 ಕೋಟಿ ರೂಪಾಯಿ. |
| ಮೂರನೇ ದಿನ (ಶನಿವಾರ) | 63 ಕೋಟಿ ರೂಪಾಯಿ. |
| ನಾಲ್ಕನೇ ದಿನ (ಭಾನುವಾರ) | 63 ಕೋಟಿ ರೂಪಾಯಿ. |
| ಐದನೇ ದಿನ (ಮೊದಲ ಸೋಮವಾರ) | 31.5 ಕೋಟಿ ರೂಪಾಯಿ. |
| ಆರನೇ ದಿನ (ಮೊದಲ ಮಂಗಳವಾರ) | 34.25 ಕೋಟಿ ರೂಪಾಯಿ. |
| ಏಳನೇ ದಿನ (ಮೊದಲ ಬುಧವಾರ) | 25 ಕೋಟಿ ರೂಪಾಯಿ. |
| ಒಟ್ಟು | 316 ಕೋಟಿ ರೂಪಾಯಿ. |
(ಅಂಕಿಅಂಶಗಳ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್).
ಗ್ಲೋಬಲ್ ಕಲೆಕ್ಷನ್ನ ವೇಗ ಗಮನಿಸಿದರೆ, ಚಿತ್ರ ಒಂದೆರಡು ದಿನಗಳಲ್ಲಿ 500 ಕೋಟಿ ರೂಪಾಯಿಯ ಕ್ಲಬ್ ಸೇರೋದು ಬಹುತೇಕ ಖಚಿತಗೊಂಡಿದೆ. ಇದು ನಿಜವಾದರೆ ಈ ಸಾಧನೆಗೈದ ಎರಡನೇ ಕನ್ನಡ ಸಿನಿಮಾ ಆಗಲಿದೆ.
ಇದನ್ನೂ ಓದಿ: ನವದೆಹಲಿಯಲ್ಲಿ ಪತ್ನಿ ಜೊತೆ 'ಕಾಂತಾರ ಚಾಪ್ಟರ್ 1' ಸಿನಿಮಾ ವೀಕ್ಷಿಸಿದ ಹೆಚ್.ಡಿ.ಕುಮಾರಸ್ವಾಮಿ
ಇದನ್ನೂ ಓದಿ: Watch: ಥಿಯೇಟರ್ ಒಳಗೇ ಕೋಲ; ದೈವನರ್ತನವನ್ನು ಅಪಹಾಸ್ಯ ಮಾಡದಿರುವಂತೆ ಚಿತ್ರತಂಡದ ಮನವಿ

