ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದ ಜನಪ್ರಿಯ ತಾರಾ ದಂಪತಿ. ನವಜೋಡಿಗಳಿಗೆ ಸ್ಫೂರ್ತಿ ಆದ ಈ ಜೋಡಿಯ ನಿರ್ಶ್ಚಿತಾರ್ಥಕ್ಕೀಗ 8 ವರ್ಷಗಳ ಸಂಭ್ರಮ. ಪ್ರೀತಿಸಿ, ಮದುವೆಯಾಗಿ ಮಾದರಿ ವೈವಾಹಿಕ ಜೀವನ ನಡೆಸುತ್ತಿರುವ ಸೆಲೆಬ್ರಿಟಿ ಕಪಲ್ ಸೋಷಿಯಲ್ ಮೀಡಿಯಾದಲ್ಲಿ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಯಶ್ ಹಾಗೂ ರಾಧಿಕಾ 2016ರಲ್ಲಿ ಅದ್ಧೂರಿ ವಿವಾಹ ಮಹೋತ್ಸವದ ಮೂಲಕ ದಾಂಪತ್ಯ ಜೀವನ ಆರಂಭಿಸಿದರು. ಮದುವೆಗೂ ಮುನ್ನ ಗ್ರ್ಯಾಂಡ್ ಎಂಗೇಜ್ಮೆಂಟ್ ಸೆಲೆಬ್ರೇಶನ್ ಹಮ್ಮಿಕೊಂಡಿದ್ದರು. ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬ ಸದಸ್ಯರು, ಆಪ್ತರು, ಸಿನಿಸ್ನೇಹಿತರು ಸಾಕ್ಷಿಯಾಗಿದ್ದರು. ಇದೀಗ ಈ ಮಹತ್ವದ ಕ್ಷಣಕ್ಕೆ 8 ವರ್ಷಗಳ ಸಂಭ್ರಮ. ಸೋಮವಾರ ಸಂಜೆ ನಿಶ್ಚಿತಾರ್ಥ ಹಾಗೂ ತಮ್ಮ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡಿರುವ ನಟಿ ರಾಧಿಕಾ ಪಂಡಿತ್, ಹೃದಯಸ್ಪರ್ಶಿ ಕ್ಯಾಪ್ಷನ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ರಾಧಿಕಾ ಪಂಡಿತ್ ಪೋಸ್ಟ್: ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಮೂರು ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ, ''8 ವರ್ಷಗಳ ಹಿಂದೆ ಈ ದಿನದಂದು ನಾವು ನಿಶ್ಚಿತಾರ್ಥ ಮಾಡಿಕೊಂಡಾಗ ನೂರು ಜೀವಿತಾವಧಿಯಲ್ಲೂ ನಿಮ್ಮನ್ನೇ ಆಯ್ಕೆ ಮಾಡುತ್ತೇನೆ ಎಂಬುದು ನನಗೆ ತಿಳಿದಿತ್ತು'' ಎಂದು ಬರೆದುಕೊಂಡಿದ್ದಾರೆ.
ಪ್ರೇಮಪಕ್ಷಿಗಳ ಮುದ್ದಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅಭಿಮಾನಿಗಳು ಕಾಮೆಂಟ್ ಸೆಕ್ಷನ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು ಕಾಮೆಂಟ್ ಮಾಡಿದ್ದು, 'ಏಳೇಳು ಜನ್ಮಕು ನಿಮ್ಮ ಈ ಸಂಬಂಧವು ಹೀಗೇ ಸಂತೋಷದಿಂದ ತುಂಬಿರಲಿ. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ' ಎಂದು ತಿಳಿಸಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, ನೀವಿಬ್ಬರೂ ಜೊತೆಯಾಗಿ ಬಹಳ ಸಂತೋಷವಾಗಿ ಕಾಣುತ್ತೀರಿ. ಇನ್ನೂ ಹಲವು ವರ್ಷಗಳು ನಿಮ್ಮದಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ. ಹೀಗೆ ಜೋಡಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಯಶ್ ಹಾಗೂ ರಾಧಿಕಾ ಇಬ್ಬರೂ ಸಿನಿರಂಗದ ಸಾಧಕರೇ. ಅತಿ ಕಡಿಮೆ ಸಿನಿಮಾಗಳ ಮೂಲಕ ದೊಡ್ಡ ಸ್ಟಾರ್ಡಮ್ ಗಿಟ್ಟಿಸಿಕೊಂಡವರು. ಆರಂಭದಲ್ಲಿ ಕಿರುತೆರೆ ಮೂಲಕ ವೃತ್ತಿಜೀವನ ಆರಂಭಿಸಿದ ಈ ಜೋಡಿ 'ಮೊಗ್ಗಿನ ಮನಸು' ಚಿತ್ರದಲ್ಲಿ ತೆರೆಹಂಚಿಕೊಂಡರು. ಕಿರುತೆರೆ, ಹಿರಿತೆರೆಯಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ನಡುವೆ ಪ್ರೇಮಾಂಕುರವಾಗಿದ್ದು ಮಾತ್ರ ಯಾರಿಗೂ ತಿಳಿಯಲೇ ಇಲ್ಲ. ವೈಯಕ್ತಿಕ ಜೀವನವನ್ನು ವೃತ್ತಿಜೀವನದಿಂದ ದೂರವಿಟ್ಟಿದ್ದರು.
ಡೇಟಿಂಗ್ನಲ್ಲಿದ್ದ ಈ ಜೋಡಿ ಮದುವೆ ದಿನ ಸಮೀಪಿಸುತ್ತಿದ್ದಂತೆ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದರು. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿನ ಡೈಲಾಗ್ಸ್ ಅಂತೆಕಂತೆಗಳಿಗೆ ತುಪ್ಪ ಸುರಿದಿತ್ತು. ನಂತರ 2016ರ ಆಗಸ್ಟ್ನಲ್ಲಿ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷ ಡಿಸೆಂಬರ್ 9ರಂದು ದಾಂಪತ್ಯ ಜೀವನ ಆರಂಭಿಸಿದರು. ಈ ತಾರಾ ದಂಪತಿಯೀಗ ಐರಾ ಮತ್ತು ಯಥರ್ವ್ ಎಂಬಿಬ್ಬರು ಮುದ್ದು ಮಕ್ಕಳ ಪೋಷಕರು. ಮಕ್ಕಳಾದ ಬಳಿಕ ರಾಧಿಕಾ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಕೆಜಿಎಫ್ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯರಾದ ಯಶ್ ಸದ್ಯ ಟಾಕ್ಸಿಕ್ ಚಿತ್ರದ ಸಲುವಾಗಿ ಸಖತ್ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸುತ್ತಿರುವ 'ಜಿಎಸ್ಟಿ' ಚಿತ್ರೀಕರಣ ಪೂರ್ಣ - GST Shooting Completed