ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಎರಡನೇ ಪುತ್ರ ಪ್ರಣಂ ದೇವರಾಜ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ "S/O ಮುತ್ತಣ್ಣ''. ಟೈಟಲ್ನಿಂದಲೇ ಗಮನ ಸೆಳೆಯುತ್ತಿರೋ ಈ ಚಿತ್ರಕ್ಕಾಗಿ ಗೀತೆರಚನೆಕಾರ ಯೋಗರಾಜ್ ಭಟ್ ಅವರು "ಕಮ್ಮಂಗಿ ನನ್ ಮಗನೇ" ಎಂಬ ಹಾಡನ್ನು ಬರೆದಿದ್ದು, ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು.
ನಟ ಶರಣ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶರಣ್ ಹಾಗೂ ಹೆಸರಾಂತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಈ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ.
ಶರಣ್ ಮಾತನಾಡಿ, ನಾನು ಹುಟ್ಟಿದ್ದು ಯಾದಗಿರಿಯಲ್ಲಿ. ಬೆಳೆದಿದ್ದು ಹುಬ್ಬಳ್ಳಿಯಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ಈ ಊರುಗಳು ಬಿಟ್ಟರೆ ಹೆಚ್ಚು ಪ್ರೀತಿಸುವುದು ಮೈಸೂರು. ನನ್ನ ಮೆಚ್ಚಿನ ಊರಿನಲ್ಲಿ ನಾನು ಹಾಡಿರುವ ಹಾಡು ಬಿಡುಗಡೆಯಾಗಿದ್ದು ಖುಷಿಯಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡಿಗೆ ವಿ.ಹರಿಕೃಷ್ಣ ಅವರು ಸಹ ಧ್ವನಿಯಾಗಿರುವುದು ಸಂತಸ ಕೊಟ್ಟಿದೆ. ಸಚಿನ್ ಬಸ್ರೂರ್ ಸಂಗೀತ ಕೂಡ ಸೊಗಸಾಗಿದೆ. ಪುರಾತನ ಫಿಲ್ಮ್ಸ್ ನಿರ್ಮಾಣದಲ್ಲಿ, ಶ್ರೀಕಾಂತ್ ಹುಣಸೂರ್ ನಿರ್ದೇಶನದಲ್ಲಿ ಹಾಗೂ ಪ್ರಣಂ ದೇವರಾಜ್ ಮತ್ತು ರಂಗಾಯಣ ರಘು ಅವರ ಕಾಂಬಿನೇಶನ್ನಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ನಿರ್ದೇಶಕ ಪವನ್ ಒಡೆಯರ್ ಮಾತನಾಡಿ, ಸನ್ ಆಫ್ ಮುತ್ತಣ್ಣ ಚಿತ್ರದ ಕಂಟೆಂಟ್ ಚೆನ್ನಾಗಿದೆ ಈ ಸಿನಿಮಾ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಶುಭ ಕೋರಿದರು.

ನಂತರ ನಟ ಪ್ರಣಂ ದೇವರಾಜ್ ಮಾತನಾಡಿ, ನಮ್ಮ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ಆಗಬೇಕಿತ್ತು. ಆದ್ರೆ ಆಗಲಿಲ್ಲ. ಆದರೆ ನಮ್ಮಿಷ್ಟದ ಮೈಸೂರು ನಮ್ಮನ್ನು ಬಿಡುವುದಿಲ್ಲ. ನಮ್ಮ ಚಿತ್ರದ ಮೊದಲ ಹಾಡು ಮೈಸೂರಿನಲ್ಲೇ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರ ಸಾಹಿತ್ಯ, ಶರಣ್ ಹಾಗೂ ಹರಿಕೃಷ್ಣ ಅವರ ಗಾಯನ ಅದ್ಭುತವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು.
ಇನ್ನೂ ಈ ಚಿತ್ರದ ನಿರ್ದೇಶಕ ಶ್ರೀಕಾಂತ್ ಹುಣಸೂರು ಮಾತನಾಡಿ, ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ನನ್ನೂರಿನಲ್ಲಿ ನನ್ನ ನಿರ್ದೇಶನದ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು ಸಂತಸ ತಂದಿದೆ ಎಂದರು.
ಈ ಚಿತ್ರದಲ್ಲಿ ತಂದೆಯ ಪಾತ್ರ ನಿರ್ವಹಿಸಿರುವ ರಂಗಾಯಣ ರಘು ಮಾತನಾಡಿ, ಮೈಸೂರಿಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧವಿದೆ. ಅಂತಹ ಈ ಊರಿನಲ್ಲಿ ಚಿತ್ರದ ಹಾಡು ಬಿಡುಗಡೆಯಾಗಿದೆ. ಹಾಡು ಚೆನ್ನಾಗಿದೆ. ನಾನು ಹಾಗೂ ಪ್ರಣಂ ಈ ಚಿತ್ರದಲ್ಲಿ ಅಪ್ಪ - ಮಗನಾಗಿ ನಟಿಸಿದ್ದೇವೆ ಎಂದರು.

ಇದನ್ನೂ ಓದಿ: 'ನನ್ನ ಈ ಪಾತ್ರದಲ್ಲಿ ರಾಜ್, ವಿಷ್ಣು, ಅಂಬಿ, ಅನಂತ್ನಾಗ್ರನ್ನು ನೋಡಿದ್ದೇನೆ': ನಟ ಅಜಯ್ ರಾವ್
ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ "ದಿಯಾ" ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ, ಸಂದೀಪ ಎಂ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ: 'ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ, ನಿನ್ನಲಿಯೇ ಅಪ್ಪು': ಶಿವಣ್ಣನಿಂದ ಪುನೀತ್ ಪುತ್ರಿಯ ಗುಣಗಾನ
ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿರುವ ಹಾಡುಗಳಿಗೆ ಸಚಿನ್ ಬಸ್ರೂರು ಸಂಗೀತ ನೀಡಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನವಿದೆ. ಬಹುತೇಕ ಶೂಟಿಂಗ್ ಮುಗಿಸಿರೋ ಸನ್ ಆಫ್ ಮತ್ತಣ್ಣ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.