ಹರಿದ್ವಾರ (ಉತ್ತರಾಖಂಡ): ಭಾರತೀಯ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಮನೋಜ್ ಕುಮಾರ್ ಅವರ ಚಿತಾಭಸ್ಮವನ್ನು ಇಂದು ಬೆಳಗ್ಗೆ ಹರಿದ್ವಾರದ ಹರ್ ಕಿ ಪೌರಿಯಲ್ಲಿ ಪವಿತ್ರ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು. ಆಪ್ತ ಕುಟುಂಬ ಸದಸ್ಯರು ಈ ಕಾರ್ಯದಲ್ಲಿ ಭಾಗಿಯಾದ್ದರು.
ಬ್ರಹ್ಮ ಕುಂಡದಲ್ಲಿ ನಡೆದ ಈ ಕಾರ್ಯ ಸಂಪೂರ್ಣ ವೈದಿಕ ವಿಧಿವಿಧಾನಗಳೊಂದಿಗೆ, ನದಿ ದಂಡೆಯಲ್ಲಿ ಮಂತ್ರಘೋಷಗಳೊಂದಿಗೆ ಪ್ರತಿಧ್ವನಿಸಿತು. ಕುಮಾರ್ ಅವರ ಪುತ್ರರಾದ ಕುನಾಲ್ ಗೋಸ್ವಾಮಿ ಮತ್ತು ವಿಶಾಲ್ ಗೋಸ್ವಾಮಿ ಸೇರಿದಂತೆ ಇತರ ಸಂಬಂಧಿಕರು ಕುಟುಂಬದ ಪುರೋಹಿತರ ನೇತೃತ್ವದಲ್ಲಿ ನಡೆದ ವಿಧಿವಿಧಾನದಲ್ಲಿ ಭಾಗವಹಿಸಿದ್ದರು.

'ಅವರ ಆತ್ಮಕ್ಕೆ ಶಾಂತಿ ಸಿಗಲಿ': ಚಿತಾಭಸ್ಮ ವಿಸರ್ಜಿಸಿದ ನಂತರ ಮಾತನಾಡಿದ ಪುತ್ರ ಕುನಾಲ್ ಗೋಸ್ವಾಮಿ, "ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸಲಾಗಿದೆ ಮತ್ತು ಗಂಗಾ ಮಾತೆಯ ಆಶೀರ್ವಾದದಿಂದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ" ಎಂದು ತಿಳಿಸಿದರು.

ಏ.4ರಂದು ತಮ್ಮ 87ನೇ ವಯಸ್ಸಿನಲ್ಲಿ ಕೊನೆಯುಸಿರು: ಜುಲೈ 24, 1937ರಂದು ಅಬ್ಬೋಟ್ಟಾಬಾದ್‌ನಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಜನಿಸಿದ ಹರಿಕೃಷ್ಣನ್ ಗೋಸ್ವಾಮಿಯಾಗಿ ಜನಿಸಿದ ಮನೋಜ್ ಕುಮಾರ್, ದೀರ್ಘಕಾಲದ ಅನಾರೋಗ್ಯದಿಂದ ಬಳಲಿ ಏಪ್ರಿಲ್ 4ರಂದು ತಮ್ಮ 87ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಮುಂಜಾನೆ 4:03ಕ್ಕೆ ಇಹಲೋಕ ತ್ಯಜಿಸಿದರು.
"ಭರತ್ ಕುಮಾರ್" ಎಂದೇ ಜನಪ್ರಿಯ: 'ಉಪ್ಕಾರ್', 'ಪೂರಬ್ ಔರ್ ಪಶ್ಚಿಮ್' ಮತ್ತು 'ಶಾಹಿದ್'ನಂತಹ ಚಿತ್ರಗಳಲ್ಲಿನ ಅಭಿನಯ, ದೇಶಭಕ್ತಿ ಪಾತ್ರಗಳಿಂದಾಗಿ "ಭರತ್ ಕುಮಾರ್" ಎಂದೇ ಜನಪ್ರಿಯರಾಗಿದ್ದರು. 1960 ಮತ್ತು 70ರ ದಶಕಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಗುರುತಿಸಿಕೊಂಡಿದ್ದರು.
ಅತ್ಯಂತ ಜನಪ್ರಿಯ ನಟನಾಗಿ ಮಾತ್ರವಲ್ಲದೇ ನಿರ್ದೇಶಕ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. 1967ರಲ್ಲಿ ಅವರ ಚೊಚ್ಚಲ ನಿರ್ದೇಶನದ 'ಉಪ್ಕಾರ್' ಎರಡನೇ ಅತ್ಯುತ್ತಮ ಚಲನಚಿತ್ರದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಅವರು ಆ್ಯಕ್ಷನ್ ಕಟ್ ಹೇಳಿದ್ದ 'ಪೂರಬ್ ಔರ್ ಪಶ್ಚಿಮ್' (1970) ಮತ್ತು 'ರೋಟಿ ಕಪ್ಡಾ ಔರ್ ಮಕಾನ್' (1974) ಸೇರಿವೆ ವಿಮರ್ಶಾತ್ಮಕವಾಗಿ ಮತ್ತು ಕಮರ್ಷಿಯಲ್ ಆಗಿ ಯಶಸ್ವಿಯಾದವು.
ಇದನ್ನೂ ಓದಿ: ಅಗ್ನಿ ಅವಘಡ: ಪವನ್ ಕಲ್ಯಾಣ್ ಪುತ್ರ ಸೇರಿ ಮಕ್ಕಳನ್ನು ರಕ್ಷಿಸಿದ ಭಾರತೀಯ ಕಾರ್ಮಿಕರನ್ನು ಸನ್ಮಾನಿಸಿದ ಸಿಂಗಾಪುರ ಸರ್ಕಾರ
ಪ್ರಧಾನಿ ನರೇಂದ್ರ ಮೋದಿ ಅವರು ಮನೋಜ್ ಕುಮಾರ್ ಅವರ ಪತ್ನಿ ಶಶಿ ಗೋಸ್ವಾಮಿ ಅವರಿಗೆ ಬರೆದ ಪತ್ರದಲ್ಲಿ ಹಿರಿಯ ನಟನ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಾಹ್ನವಿ ಕಪೂರ್ಗೆ 5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕೊಟ್ಟ ಅನನ್ಯಾ ಬಿರ್ಲಾ ಯಾರು? ಕಾರು ಕೊಟ್ಟಿದ್ದೇಕೆ?
ಏಪ್ರಿಲ್ 5ರಂದು ಮುಂಬೈನ ಪವನ್ ಹನ್ಸ್ ಸ್ಮಶಾನದಲ್ಲಿ ಮನೋಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಅಂತ್ಯಕ್ರಿಯೆಯಲ್ಲಿ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಸಲೀಂ ಖಾನ್ ಮತ್ತು ಅರ್ಬಾಜ್ ಖಾನ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಹಾಜರಿದ್ದರು.