ಬೆಂಗಳೂರು: ಕಿರುತೆರೆ ನಟರಿಗೆ ಸಿಗುತ್ತಿರುವ ಜನಪ್ರಿಯತೆ ಹೆಚ್ಚುತ್ತಿದ್ದು, ಇದು ಬೆಳ್ಳಿತೆರೆಯ ಅವಕಾಶವನ್ನೂ ತೆರೆದಿಡುತ್ತಿದೆ. ಇದೀಗ ದೊಡ್ಡ ಪರದೆಯ ಮೇಲೆ ಅದೃಷ್ಟ ಪರೀಕ್ಷೆಗೆ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಪಾತ್ರಧಾರಿ ದೀಪಕ್ ಸುಬ್ರಹ್ಮಣ್ಯ ಸಜ್ಜಾಗಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರದ ಮೂಲಕ ದೀಪಕ್ ಸುಬ್ರಹ್ಮಣ್ಯ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇದೀಗ ಅವರಿಗೆ ಸಿನಿಮಾದಲ್ಲಿ ನಾಯಕ ನಟನ ಅವಕಾಶ ಒಲಿದಿದ್ದು, 'ಮಿ.ರಾಣಿ' ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಲು ಅಣಿಯಾಗಿದ್ದಾರೆ. ಈ ಹಿಂದೆ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಚಿತ್ರದ ನಿರ್ದೇಶಕ ಮಧುಚಂದ್ರ ಈ ಸಿನಿಮಾ ಮಾಡುತ್ತಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದೆ. ವಿನೂತನ ಪ್ರಚಾರದ ಮೂಲಕ ನಿರ್ದೇಶಕ ಮಧುಚಂದ್ರ ಸಿನಿಮಾವನ್ನು ಜನರಿಗೆ ತಲುಪಿಸುವ ಪ್ರಯತ್ನಕ್ಕೆ ತಯಾರಿ ನಡೆಸುತ್ತಿದ್ದಾರೆ.
ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ದೀಪಕ್ ಸುಬ್ರಹ್ಮಣ್ಯರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಪೈಕಿ 108 ಅಭಿಮಾನಿಗಳ ಮನೆಗೆ 'ಮಿ.ರಾಣಿ' ಚಿತ್ರತಂಡ ಭೇಟಿ ನೀಡಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ದರ್ಶನ ಪಡೆದು, ಅವರ ಮೂಲಕವೇ ಪೋಸ್ಟರ್ ಬಿಡುಗಡೆ ಮಾಡಿಸಿದ್ದಾರೆ. 108 ಜನರ ಮನೆಗೆ ಭೇಟಿ ನೀಡಿದಾಗ ಅವರು ತೋರಿದ ಪ್ರೀತಿಯಿಂದ ಮನತುಂಬಿ ಬಂದಿದೆ ಎಂದು 'ಮಿ.ರಾಣಿ' ಚಿತ್ರತಂಡ ತಿಳಿಸಿದ್ದು ಧನ್ಯವಾದ ಹೇಳಿದೆ.
ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ನವೆಂಬರ್ನಲ್ಲಿ ಚಿತ್ರವನ್ನು ತೆರೆಗೆ ಪ್ರಯತ್ನ ನಡೆಯುತ್ತಿದೆ. ಚಿತ್ರದ ನಾಯಕಿಯಾಗಿ ಪಾರ್ವತಿ ನಾಯರ್ ನಟಿಸಿದ್ದಾರೆ. ಶ್ರೀವತ್ಸ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ ಲಾಂಛನದಲ್ಲಿ ನೂರಕ್ಕೂ ಹೆಚ್ಚು ಮಂದಿ ಬಂಡವಾಳ ಹೂಡಿ ನಿರ್ಮಿಸಿರುವ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ. ರವೀಂದ್ರನಾಥ್ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರೋರಿಂಗ್ ಸ್ಟಾರ್: 'ಬಘೀರ' ರಿಲೀಸ್ ಡೇಟ್ ಅನೌನ್ಸ್