ಹೈದರಾಬಾದ್: ಬಾಲಿವುಡ್ ನಟಿ ತೃಪ್ತಿ ದಿಮ್ರಿ ಹಾಗೂ ಅವಿನಾಶ್ ತಿವಾರಿ ಅಭಿನಯದ ಚೊಚ್ಚಲ ಸಿನಿಮಾ ಲೈಲಾ ಮಜ್ನು ಆಗಸ್ಟ್ 9 ರಂದು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಒಟಿಟಿಯಲ್ಲಿ ಬಿಡುಗಡೆಗೊಂಂಡು ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಗಳಿಸಿದ್ದು, ಇದೀಗ ಅಭಿಮಾನಿಗಳ ಬೇಡಿಕೆಯ ಮೇರೆಗೆ ಚಿತ್ರ ಮರು ಬಿಡುಗಡೆಯಾಗುತ್ತಿದೆ. ಜನರ ಬೇಡಿಕೆ ಹಿನ್ನೆಲೆ ನಿರ್ಮಾಪಕರು ಸಿನಿಮಾವನ್ನು ಆಗಸ್ಟ್ 9 ರಂದು ಬಿಡುಗಡೆ ಮಾಡುತ್ತಿದ್ದಾರೆ.
ಸಾಜಿದ್ ಅಲಿ ನಿರ್ದೇಶನದ ಲೈಲಾ ಮಜ್ನು ಸಿನಿಮಾ 2018ರಲ್ಲಿ ಬಿಡುಗಡೆಗೊಂಡು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆದರೆ ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ವಿಮರ್ಶಾತ್ಮಕ ಪ್ರಶಂಸೆ ಗಳಿಸಿತ್ತು. ಜೊತೆಗೆ ಅನೇಕ ವೀಕ್ಷರ ಮನ ಗೆದ್ದಿತ್ತು. ಇದೀಗ ಚಿತ್ರದ ಮರು ಬಿಡುಗಡೆಗೆ ಕೇಳಿ ಬಂದಿರುವ ಬೇಡಿಕೆಯನ್ನು ನಿರ್ಮಾಪಕರು ಪೂರೈಸಿದ್ದಾರೆ.
ಚಿತ್ರದ ಚಿತ್ರಕಥೆಗಾರ ಇಪ್ತಿಯಾಜ್ ಅಲಿ, ಸಾರ್ವಜನಿಕ ಬೇಡಿಕೆಯ ಮೇರೆಗೆ ಲೈಲಾ ಮಜ್ನು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಲೈಲಾ ಮಜ್ನು ಸಿನಿಮಾ ಜನಪ್ರಿಯ ಬೇಡಿಕೆಯ ಮೇಲೆ ಮತ್ತೆ ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಿದೆ. ಆರು ವರ್ಷಗಳ ಬಳಿಕ ಅದನ್ನು ಮತ್ತೆ ಚಿತ್ರಮಂದಿರಗಳಿಗೆ ಎಳೆದು ತಂದ ನಿಮ್ಮ ಪ್ರೀತಿಗೆ ಕೃತಜ್ಞತೆ! ಸಿನಿಮಾ ಆಗಸ್ಟ್ 9ರಂದು ರಾಷ್ಟ್ರಾದ್ಯಂತ ಮರು ಬಿಡುಗಡೆಯಾಗುತ್ತಿದೆ. ಲೈಲಾ ಮಜ್ನು ಸಿನಿಮಾ ತಂಡಕ್ಕೆ ಅಭಿನಂದನೆಗಳು." ಎಂದು ಕ್ಯಾಪ್ಷನ್ ಜೊತೆಗೆ ಸಿನಿಮಾ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಲಿಸ್ಟ್ ಪ್ರತಿ ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಚಿತ್ರದ ಬಗ್ಗೆ ಮಾತನಾಡಿದ, ಈಗ ನ್ಯಾಶನಲ್ ಕ್ರಶ್ ಎಂದು ಪರಿಗಣಿಸಲ್ಪಿಟ್ಟಿರುವ ತೃಪ್ತಿ, "ಲೈಲಾ ಮಜ್ನು ಚಿತ್ರದಲ್ಲಿನ ನನ್ನ ಪಾತ್ರಕ್ಕಾಗಿ ನಾನು ಆಡಿಶನ್ ಮೂಲಕ ಆಯ್ಕೆಯಾಗಲಿಲ್ಲ. ಬದಲಿಗೆ ಚಲನಚಿತ್ರದ ಕಾಸ್ಟಿಂಗ್ ನಿರ್ದೇಶಕರು ನನ್ನ ಕಾಶ್ಮೀರಿ ಲುಕ್ ಅನ್ನು ಗುರುತಿಸಿ, ಒಂದು ಸಲ ಪ್ರಯತ್ನಿಸುವಂತೆ ಶಿಫಾರಸು ಮಾಡಿದರು. ಇದರ ಪರಿಣಾಮ ಲೈಲಾ ಪಾತ್ರದಲ್ಲಿ ಅಭಿನಯಿಸುವ ಮೂಲಕ ನನ್ನ ವೃತ್ತಿಜೀವನ ಆರಂಭವಾಯಿತು" ಎಂದು ಹೇಳಿಕೊಂಡಿದ್ದಾರೆ.
ಇಮ್ತಿಯಾಜ್ ಅಲಿ ನಿರ್ದೇಶನದ ಈ ಚಿತ್ರ ಮೊದಲ ಬಾರಿಗೆ 2018ರ ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು. ಇಮ್ತಿಯಾಜ್ ಅಲಿ ಮತ್ತು ಸಾಜಿದ್ ಅಲಿ ಬರೆದು ನಿರ್ದೇಶಿಸಿದ ರೋಮ್ಯಾಂಟಿಕ್ ಡ್ರಾಮಾದಲ್ಲಿ ಅವಿನಾಶ್ ತಿವಾರಿ ಹಾಗೂ ತೃಪ್ತಿ ದಿಮ್ರಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರ ಕಥೆಯು ತಮ್ಮ ಕುಟುಂಬಗಳ ಸಮಸ್ಯೆಯಿಂದಾಗಿ ಒಂದಾಗಲು ಸಾಧ್ಯವಾಗದೇ ಇರುವ ಕೈಸ್ ಮತ್ತು ಲೈಲಾ ಎಂಬ ಇಬ್ಬರು ಕಾಶ್ಮೀರಿ ಪ್ರೇಮಿಗಳ ಸುತ್ತ ಸುತ್ತುತ್ತದೆ. ವಿಧಿಯಾಟ ಬೇರೆಯದೇ ಆಗಿ ಲೈಲಾ ಬೇರೊಬ್ಬರನ್ನು ಮದುವೆಯಾಗಿ, ಕೈಸ್ ಲಂಡನ್‌ಗೆ ತೆರಳುತ್ತಾನೆ.
ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಗದಿದ್ದರೂ, ಸಿನಿಮಾ ಸಂಗೀತ, ಹಾಡುಗಳು ಸ್ಮ್ಯಾಶ್ ಹಿಟ್ ಆದವು. ಜೊತೆಗೆ ಹಲವಾರು ಅವಾರ್ಡ್ಗಳನ್ನೂ ಪಡೆದವು. ಹಿತೇಶ್ ಸೋನಿಕ್ ಅವರ ಹಿನ್ನೆಲೆ ಸಂಗೀತ, ಮೆಹಮೂದ್ ಗಾಮಿ, ಇರ್ಷಾದ್ ಕಾಮಿಲ್ ಮತ್ತು ಮುಹಮ್ಮದ್ ಮುನೀಮ್ ಸಾಹಿತ್ಯ ಚಿತ್ರದ ಹಾಡುಗಳಿಗಿವೆ. ಜೋಯ್ ಬರುವಾ, ಅಲಿಫ್ ಮತ್ತು ನೀಲಾದ್ರಿ ಕುಮಾರ್ ಹಾಡುಗಳನ್ನು ಸಂಯೋಜಿಸಿದ್ದಾರೆ.