ಮುಂಬೈ(ಮಹಾರಾಷ್ಟ್ರ): ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ಬ್ಲಾಕ್ಬಸ್ಟರ್ ಚಿತ್ರ 'ಕೆಜಿಎಫ್ 2' ತೆರೆಕಂಡು ಇಂದಿಗೆ 3 ವರ್ಷ. ರಾಕಿ ಭಾಯ್ ಯಶ್ ಅವರ ಮುಂಬರುವ ಚಿತ್ರಗಳ ಮೇಲೆ ಸಿನಿಪ್ರಿಯರ ಜೊತೆ ಭಾರತೀಯ ಚಿತ್ರರಂಗದ ಗಣ್ಯರೂ ಕೂಡಾ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
3 ವರ್ಷಗಳ ಸಂಭ್ರಮದಲ್ಲಿ 'ಕೆಜಿಎಫ್ 2': 2022ರ ಏಪ್ರಿಲ್ 14ರಂದು ತೆರೆಕಂಡ ಪ್ರಶಾಂತ್ ನೀಲ್ ನಿರ್ದೇನದ ಸಿನಿಮಾ ನಿರೀಕ್ಷೆಗಳನ್ನೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದ ಚಿತ್ರ ಸಿನಿಪ್ರಿಯರು, ಅಭಿಮಾನಿಗಳ ಜೊತೆಗೆ ಸಿನಿಮಾ ಇಂಡಸ್ಟ್ರಿಯ ಗಣ್ಯರ ಮೆಚ್ಚುಗೆಗೂ ಪಾತ್ರವಾಗಿತ್ತು. ಭಾರತೀಯ ಚಿತ್ರರಂಗದ ಹೆಸರಾಂತರು ರಾಕಿಭಾಯ್ ಯಶ್ ಅವರ ಅಮೋಘ ಅಭಿನಯ ಮತ್ತು ಪ್ರಶಾಂತ್ ನೀಲ್ ಅವರ ನಿರ್ದೇಶನ ಶೈಲಿಯನ್ನು ಮೆಚ್ಚಿ ಕೊಂಡಾಡಿದ್ದರು. ಈ ಸಿನಿಮಾ ಇಂದು 3 ವರ್ಷಗಳ ಸಂಭ್ರಮದಲ್ಲಿದೆ.
ಹೊಂಬಾಳೆ ಫಿಲ್ಮ್ಸ್ ಸ್ಪೆಷಲ್ ಪೋಸ್ಟ್: ಚಿತ್ರಕ್ಕೆ ಬಂಡವಾಳ ಹೂಡಿದ್ದ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇಂದು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದೆ. ಪೋಸ್ಟ್ಗೆ, ''ಕೆಜಿಎಫ್ ಚಾಪ್ಟರ್ 2ರ 3 ವರ್ಷಗಳ ಸಂಭ್ರಮಾಚರಣೆ. ಸಿಲ್ವರ್ ಸ್ಕ್ರೀನ್ ಅನ್ನು ನಡುಗಿಸಿದ, ಚಿತ್ರಮಂದಿರಗಳನ್ನು ಆಚರಣೆಯ ಅಖಾಡಗಳನ್ನಾಗಿ ಮಾಡಿದ ಮತ್ತು ಚಿನ್ನದಲ್ಲಿ ಕೆತ್ತಿದ ಪರಂಪರೆಯನ್ನು ಬಿಟ್ಟ ಭೀಕರ ಚಂಡಮಾರುತ'' ಎಂದು ಕ್ಯಾಪ್ಷನ್ ಕೊಡಲಾಗಿದೆ.
ವಿಡಿಯೋದಲ್ಲಿ, ಕೆಜಿಎಫ್ 2ರ ಅದ್ಭುತ ಸೀನ್ಸ್ ಮತ್ತು ಡೈಲಾಗ್ಸ್ ಬಳಸಲಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಚಿತ್ರದ ಈ ವಿಡಿಯೋ ಕೂಡಾ ಬಹುಭಾಷೆಗಳ ಡೈಲಾಗ್ಸ್ನಿಂದ ಕೂಡಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಕೆಜಿಎಫ್ 3ಕ್ಕೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.
ಇದನ್ನೂ ಓದಿ: 'ಮನೆಗೆ ನುಗ್ಗಿ ಕೊಲ್ಲುತ್ತೇವೆ, ಬಾಂಬ್ ಇಟ್ಟು ಕಾರನ್ನು ಸ್ಫೋಟಿಸುತ್ತೇವೆ': ಸಲ್ಮಾನ್ ಖಾನ್ಗೆ ಮತ್ತೊಮ್ಮೆ ಜೀವ ಬೆದರಿಕೆ
ಮುಂಬೈನಲ್ಲಿ ಯಶ್, ರಾಧಿಕಾ ದಂಪತಿ: ರಾಕಿಭಾಯ್ ಪಾತ್ರದ ಮೂಲಕ ಅದ್ಭುತ ಅಭಿನಯದಿಂದ ವಿಶ್ವಾದ್ಯಂತ ಹೆಸರುವಾಸಿಯಾದ ರಾಕಿಂಗ್ ಸ್ಟಾರ್ ಯಶ್ ಇಂದು ಮುಂಬೈನಲ್ಲಿ ಕಾಣಿಸಿಕೊಂಡರು. 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಶೂಟಿಂಗ್ ಸಲುವಾಗಿ ಸುದ್ದಿಯಲ್ಲಿರುವ ನಟ, ಮುದ್ದಿನ ಮಡದಿ ರಾಧಿಕಾ ಪಂಡಿತ್ ಜೊತೆ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡರು. ಕನ್ನಡ ಚಿತ್ರರಂಗದ ಮಾದರಿ ದಂಪತಿ ಎಂದೇ ಖ್ಯಾತರಾಗಿರುವ ಯಶ್ ರಾಧಿಕಾ ಸಖತ್ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ವಿಡಿಯೋಗಳು ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ವಿಡಿಯೋ: ತಿರುಪತಿಗೆ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ; ಸಿಂಗಾಪುರ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಪುತ್ರ ಭಾರತಕ್ಕೆ ವಾಪಸ್
ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣ 2024ರ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದೇ ಏಪ್ರಿಲ್ಗೆ ತೆರೆಗಪ್ಪಳಿಸಬೇಕಿತ್ತು. ಆದ್ರೆ ಅದ್ಭುತ ಸಿನಿಮೀಯ ಅನುಭವ ಒದಗಿಸುವ ಗುರಿ ಹೊಂದಿರುವ ಹಿನ್ನೆಲೆ, ಬಿಡುಗಡೆ ವಿಳಂಬವಾಗಿದೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಅದ್ಧೂರಿಯಾಗಿದೆ ಚಿತ್ರಮಂದಿರ ಪ್ರವೇಶಿಸಲಿದೆ.