'ಕಾಂತಾರ' ಸಿನಿಮಾಟೋಗ್ರಫಿ: ಅದ್ಭುತ ದೃಶ್ಯ ಸೆರೆ ಹಿಡಿದ ಅರವಿಂದ್ ಕಶ್ಯಪ್ ಜೊತೆ ಎಕ್ಸ್ಕ್ಲೂಸಿವ್ ಮಾತು
'ಕಾಂತಾರ ಅಧ್ಯಾಯ 1' ಸಿನಿಮಾ ದೃಶ್ಯಗಳಿಂದ ಸಾಕಷ್ಟು ಶ್ರೀಮಂತವಾಗಿ ಮೂಡಿಬಂದಿದ್ದು, ಅದ್ಭುತ ದೃಶ್ಯಗಳನ್ನು ಸೆರೆಹಿಡಿದ ಕ್ಯಾಮೆರಾಮನ್ ಅರವಿಂದ್ ಕಶ್ಯಪ್ ಜೊತೆ ಎಕ್ಸ್ಕ್ಲೂಸಿವ್ ಮಾತು.


Published : October 7, 2025 at 5:56 PM IST
|Updated : October 7, 2025 at 6:03 PM IST
ರವಿಕುಮಾರ್ ಎಂ.ಕೆ.
'ಕಾಂತಾರ ಅಧ್ಯಾಯ 1' ಸಿನಿಮಾ ಕನ್ನಡ ಸೇರಿದಂತೆ ವಿಶ್ವದಾದ್ಯಂತ ಸಿನಿರಸಿಕರನ್ನು ಸೆಳೆಯುತ್ತಾ ಅದ್ಭುತ ಪ್ರದರ್ಶನ ಮುಂದುವರೆಸಿದೆ. ರಿಷಬ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನಕ್ಕೆ ಸಿನಿಮಾ ಪ್ರೇಕ್ಷಕರಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ಪಡೆಯುತ್ತಿದೆ.
ಅದ್ದೂರಿ ಮೇಕಿಂಗ್ ಹಾಗು ದಟ್ಟ ಕಾಡಿನ ಮಧ್ಯೆ ಮನಮೋಹಕವಾಗಿ ಚಿತ್ರೀಕರಣ ಮಾಡಿರುವುದಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಇದರ ಹಿಂದೆ ಕೆಲಸ ಮಾಡಿರುವವರ ಪೈಕಿ ಕ್ಯಾಮೆರಾಮ್ಯಾನ್ ಅರವಿಂದ್ ಕಶ್ಯಪ್ ಒಬ್ಬರು. ಅಸಿಸ್ಟೆಂಟ್ ಕ್ಯಾಮೆರಾಮ್ಯಾನ್ ಆಗಿದ್ದ ಇವರು, ಈ ಸಿನಿಮಾದಲ್ಲಿ ಸಿನಿಮಾಟೋಗ್ರಾಫರ್ ಪ್ರಯಾಣ ಹೇಗಿತ್ತು?, ಕಾಂತಾರ ಸಿನಿಮಾದ ಮೂರು ವರ್ಷದ ಜರ್ನಿಯಲ್ಲಿ ಎದುರಿಸಿದ ಸವಾಲುಗಳು, ಅನುಭವ ಸೇರಿದಂತೆೆ ಹಲವು ಕುತೂಹಲಕಾರಿ ವಿಚಾರಗಳನ್ನು ಈಟಿವಿ ಭಾರತ್ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.
- ಮೊದಲ ಕಾಂತಾರಕ್ಕೂ ಈಗ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಅಧ್ಯಾಯ 1 ಸಿನಿಮಾಕ್ಕೂ ಏನು ವ್ಯತ್ಯಾಸ, ನೀವು ಎದುರಿಸಿದ ಸವಾಲುಗಳೇನು?
ನಾನು ಕಾಂತಾರ ಸಿನಿಮಾದ ಕಥೆ ಕೇಳಿದ್ದು ಮಂಗಳೂರಿನಲ್ಲಿ. ಮೊದಲಿಗೆ ಭಯ ಆಗಿತ್ತು. ಯಾಕೆಂದರೆ ಇದು ದೊಡ್ಡ ಮಟ್ಟದ ಸಿನಿಮಾ. ವಿಷ್ಯೂಲ್ಸ್ ಡಿಮ್ಯಾಂಡ್ ಹೆಚ್ಚಿತ್ತು. ಕಥೆ ಓಕೆ ಆದ್ಮೇಲೆ ಇಡೀ ಟೀಮ್ ಕುಂದಾಪುರಕ್ಕೆ ಶಿಫ್ಟ್ ಆದ್ವಿ. ಒಂದು ಆಫೀಸ್ ಮಾಡಿ ಪ್ರತಿದಿನ 8 ಗಂಟೆ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ವಿಎಫ್ಎಕ್ಸ್ ಮಾಡುವುದಕ್ಕೆ ಶೂಟಿಂಗ್ ಮುಗಿಸಿ ಒಂದು ವರ್ಷ ಸಮಯ ಬೇಕು. ಇದಕ್ಕಾಗಿ ನಾವು ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಯುತ್ತಿದ್ದಂತೆ ವಿಎಫ್ಎಕ್ಸ್ ಕೆಲಸ ಶುರು ಮಾಡಿದೆವು. ಮೊದಲೆರಡು ವರ್ಷ ಬಿಡುವಿಲ್ಲದ ಕೆಲಸ. ಶೂಟಿಂಗ್ ಮುಗಿಯುತ್ತಿದ್ದಂತೆ ಎಡಿಟಿಂಗ್, ವಿಎಫ್ಎಕ್ಸ್ ಕೆಲಸದಲ್ಲಿ ತೊಡಗಿದ ನಮಗೆ ಯೋಚನೆ ಮಾಡುವುದಕ್ಕೂ ಟೈಮ್ ಇರಲಿಲ್ಲ. ಶೂಟಿಂಗ್ ಮುಗಿಯುತ್ತಿದ್ದಂತೆ ಎಡಿಟಿಂಗ್ಗೆ ಐದು ದಿನ, ವಿಎಫ್‌ಎಕ್ಸ್‌ಗೆ ಒಂದು ದಿನ. ಇದಾದ ಮರುದಿನವೇೆ ಬ್ಯಾಕ್ ಟು ಶೂಟಿಂಗ್ ಇರುತ್ತಿತ್ತು.
- ದೇಶಾದ್ಯಂತ 'ಕಾಂತಾರ ಅಧ್ಯಾಯ 1' ಸಿನಿಮಾದ ಮೇಕಿಂಗ್ ಹಾಗು ಕ್ಯಾಮೆರಾ ವರ್ಕ್ ಬಗ್ಗೆ ಮಾತನಾಡುತ್ತಿದ್ದಾರೆ, ಹೇಗನ್ನಿಸುತ್ತಿದೆ?
ಈ ಸಿನಿಮಾದ ಭಾಗವಾಗಿರುವುದು ಹೆಮ್ಮೆಯ ಸಂಗತಿ. ಯಾಕೆಂದರೆ, ಈ ವಿಷ್ಯೂಲ್ಸ್ ಹೀಗೇ ಬರಬೇಕು ಎಂದು ಅಂದುಕೊಂಡಿರಲಿಲ್ಲ. ಯಾರೂ ಹೋಗದ ಕಾಡಿನ ಜಾಗದಲ್ಲಿ ಹೋಗಿ ಚಿತ್ರೀಕರಣ ಮಾಡುವುದಕ್ಕೆ ನಿರ್ಮಾಣ ಸಂಸ್ಥೆ ನಮಗೆ ಎಲ್ಲ ರೀತಿಯ ಬೆಂಬಲ ನೀಡಿತು. ಅದರಲ್ಲೂ ಜೀಪ್ನಲ್ಲಿ ಕ್ಯಾಮೆರಾ ಇಟ್ಟು ರಸ್ತೆ ಇಲ್ಲದ ಜಾಗದಲ್ಲಿ ಶೂಟಿಂಗ್ ಮಾಡಬೇಕಾದರೆ, ಯಾಕೆ ಇಷ್ಟೊಂದು ರಿಸ್ಕ್ ತಗೊಂಡು ಶೂಟಿಂಗ್ ಮಾಡಬೇಕು ಅಂತಾ ಅನ್ನಿಸಿತ್ತು. ಆದರೆ, ಇವತ್ತು ಚಿತ್ರದ ಒಂದೊಂದು ಸೀನ್ ಬಗ್ಗೆ ಮಾತನಾಡುವಾಗ ನಾವು ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಗುತ್ತಿದೆ ಎಂದು ಅನ್ನಿಸುತ್ತಿದೆ. ಇದೆಲ್ಲಾ ಸಾಧ್ಯವಾಗಿದ್ದು ರಿಷಬ್ ಅವರ ದೃಷ್ಟಿ ಹಾಗು ನಿರ್ಮಾಣ ಸಂಸ್ಥೆ.
- ಕರ್ನಾಟಕದ ಲೊಕೇಶನ್ಗಳನ್ನು ಹಾಲಿವುಡ್ ಶೈಲಿಯ ಸಿನಿಮಾಗಳಂತೆ ಚಿತ್ರೀಕರಣ ಮಾಡಿದ್ದೀರಿ. ನಿಮಗೆ ಯಾವುದು ಚಾಲೆಂಜಿಂಗ್ ಅನಿಸಿದ್ದು?
ಕಾಡಿನ ಮಧ್ಯೆ ಶೂಟಿಂಗ್. ಶೂಟಿಂಗ್ ಹೆಚ್ಚಾಗಿ ರಾತ್ರಿ ಸಮಯದಲ್ಲೇ ನಡೆಯುತ್ತಿತ್ತು. ನಮಗೆ ಗೊತ್ತಿರುವ ಹಾಗೆಯೇ ನೈಟ್ ಶೂಟ್ನಲ್ಲಿ ಯಾರೂ ಮಾಡಿಲ್ಲ ಲೈಟ್ ಅನ್ನು ನಾವು ಉಪಯೋಗಿಸಿದ್ದೇವೆ. ಕಾಡಿಗೆ ಹೋಗಿ ಚೆಕ್ ಮಾಡಬೇಕಾದ್ರೆ ಶೂಟಿಂಗ್ ಮಾಡುವ ಲೊಕೇಶನ್ಗಳಲ್ಲಿ ಮರದ ಗೋಪುರ ಕಟ್ಟಿ, ಅಲ್ಲಿ ಕ್ಯಾಮರಾ ಫಿಕ್ಸ್ ಮಾಡಿ ಶೂಟ್ ಮಾಡಿದ್ವಿ. ಅದು ವರ್ಕ್ ಆಯಿತು. ಅದು 70 ಅಡಿ 80 ಅಡಿ ಎತ್ತರದಲ್ಲಿ. ಗೋಪುರದಲ್ಲಿ ಕ್ಯಾಮರಾ ಕಟ್ಟಲು ಮರದ ಗೊಂಬೆಗಳನ್ನು ಹತ್ತುವಾಗ ತುಂಬಾ ಭಯ ಆಗ್ತಿತ್ತು. ಒಂದು ದಿನ ಕಾಡಿನ ಮಧ್ಯೆ ಶೂಟಿಂಗ್ ಮಾಡಬೇಕಾದರೆ ಒಂದು ವಾರ ಸಿದ್ದತೆ ಮಾಡಿಕೊಂಡು ಸೀನ್ಗಳನ್ನು ತೆಗೆದಿದ್ದೀವಿ.
- 'ಕಾಂತಾರ ಅಧ್ಯಾಯ 1' ಸಿನಿಮಾದಲ್ಲಿ ಅದ್ದೂರಿ ಮೇಕಿಂಗ್ ಇದೆ, ಅದಕ್ಕೆ ಯಾವ ಯಾವ ಕ್ಯಾಮೆರಾಗಳನ್ನು ಬಳಲಾಗಿದೆ?
ಮುಖ್ಯವಾಗಿ, ಆರ್ಡಿ ಎಲ್ಎಫ್ ಕ್ಯಾಮೆರಾ ಬಳಸಿದ್ದೇವೆ. ಕಾಂತಾರ ಚಿತ್ರದಲ್ಲೂ ಅದೇ ಕ್ಯಾಮರಾ ಬಳಕೆ ಮಾಡಿದ್ದೆವು. ಇದಕ್ಕಿಂತ ಮುಂಚೆ ಸಾಕಷ್ಟು ಕ್ಯಾಮರಾಗಳನ್ನು ಬಳಸಿದ್ದೆವು. ಆದರೆ, ಇಷ್ಟು ಕ್ವಾಲಿಟಿ ಸಿಗಲಿಲ್ಲ. ಈ ಸಿನಿಮಾದಲ್ಲಿ ಮೂರು ನಾಲ್ಕು ಟೈಮ್ ಪಿರೀಡ್ ಇದೆ. ಆ ಕಾರಣಕ್ಕೆ ಕ್ಯಾಮರಾ ಲೆನ್ಸ್‌ಗಳನ್ನು ಬೇರೆ ಬೇರೆ ಬಳಸಿದ್ವಿ.

- ಸಿನಿಮಾದಲ್ಲಿ ಜಿಮ್ಮಿಜಿಪ್, ಟ್ರಾಲಿ ಹಾಗು ಹೆಗಲ ಮೇಲೆ ಕ್ಯಾಮೆರಾ ಇಟ್ಟುಕೊಂಡು ಚಿತ್ರೀಕರಣ ಮಾಡಿದ್ದೀರಿ, ಎಷ್ಟು ಕಷ್ಟ ಆಗುತ್ತಿತ್ತು?
ಕಥೆಗೆ ತಕ್ಕಂತೆ ನಾವು ಚಿತ್ರೀಕರಣ ಮಾಡಬೇಕಿತ್ತು. ಪ್ರತಿದಿನ ಜಿಮ್ಮಿಜಿಪ್, ಟ್ರಾಲಿ ಇರುತ್ತಿತ್ತು. ಯಾಕೆಂದರೆ ಸಿನಿಮಾದ ಕಥೆಯ ಮೂಡ್‌ಗೆ ತಕ್ಕಂತೆ ಚಿತ್ರೀಕರಣ ಮಾಡಬೇಕಿತ್ತು. ಯಾಕೆಂದರೆ ಆ ಎಮೋಷನ್ ಶೂಟಿಂಗ್ ಮಾಡಬೇಕಿತ್ತು. ಅದಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
- ರಿಷಬ್ ಶೆಟ್ಟಿ ನಿಮ್ಮ ಪರಿಚಯ ಆಗಿದ್ದು ಎಲ್ಲಿ ಆಯಿತು. ಅವರ ಜೊತೆ ಕೆಲಸ ಮಾಡಿದ ಅನುಭವ?
ನಾನು ರಿಷಬ್ ಶೆಟ್ಟಿ ಮೀಟ್ ಆಗಿದ್ದು ಲೂಸಿಯಾ ಸಿನಿಮಾ ಶೂಟಿಂಗ್ ಸ್ಪಾಟ್‌ನಲ್ಲಿ. ನಾನು ಕ್ಯಾಮರಾ ಅಸಿಸ್ಟೆಂಟ್ ಆಗಿದ್ದೆ. ಅವರು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬಂದಿದ್ದರು. ಅಲ್ಲಿಂದ ಅವರು ರಿಕ್ಕಿ ಸಿನಿಮಾ ನಿರ್ದೇಶನ ಮಾಡಿದಾಗ ನಾನು ಡ್ರೋಣ್ ಕ್ಯಾಮರಾ ಅಪರೇಟರ್ ಆಗಿದ್ದೆ. ಕಿರಿಕ್ ಪಾರ್ಟಿ ಮಾಡುವಾಗ ಅಸಿಸ್ಟೆಂಟ್ ಕ್ಯಾಮರಾಮ್ಯಾನ್ ಆಗಿದ್ದೆ. ಅವರು ಹೀರೋ ಆಗಿ ಬೆಲ್ ಬಾಟಮ್ ಸಿನಿಮಾ ಮಾಡಬೇಕಾದರೆ ನೀನು ಸಿನಿಮಾಗೆ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡು ಎಂದರು. ಮೊದಲಿಗೆ ನಾನು ಹಿಂಜರಿದೆ. ಆದರೆ ನನಗೆ ಧೈರ್ಯ ತುಂಬಿ ನೀನು ಮಾಡ್ತಿಯಾ ಎಂದು ಅವರು ಹುರಿದುಂಬಿಸಿದರು. ಅಲ್ಲಿಂದ ಹೀರೋ ಸಿನಿಮಾಗಳ ಕ್ಯಾಮೆರಾಮ್ಯಾನ್ ಕೆಲಸ ಆರಂಭಿಸಿದೆ. ಬಳಿಕ ಮೊದಲು ಕಾಂತಾರ ಈಗ ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ಕೆಲಸ ಮಾಡುತ್ತಾ ಬರುತ್ತಿದ್ದೇನೆ ಎಂದರು.
- ಮೆಕಾನಿಕಲ್ ಇಂಜಿನಿಯರಿಂಗ್ ಓದಿದ ನೀವು ಸಿನಿಮಾ ಕ್ಯಾಮೆರಾಮ್ಯಾನ್ ಆಗಿದ್ದು ಹೇಗೆ?
ವಿಜ್ಞಾನ ವಿಷಯ ಅಧ್ಯಯನ ಮಾಡಿರುವುದರಿಂದ ಇದು ನನಗೆ ಸಿನಿಮಾ ಶೂಟಿಂಗ್ ಸ್ಪಾಟ್‌ನಲ್ಲಿ ತುಂಬಾ ಹೆಲ್ಪ್ ಆಯಿತು ಎಂದು ನಕ್ಕ ಅವರು, ಇದರಿಂದ ಎಲ್ಲಿ ಲೈಟಿಂಗ್ ಮಾಡಬೇಕು, ಎಲ್ಲಿ ರೋಪ್ ಕಟ್ಟಿಸಬೇಕು ಎನ್ನುವುದನ್ನು ತಿಳಿಯಲು ತುಂಬಾ ಸಹಾಯ ಆಗಿದೆ.

- ಅರವಿಂದ್ ಕಶ್ಯಪ್ಗೆ ದೇವರ ನಂಬಿಕೆ ಇದ್ಯಾ?
ನಾನು ದೇವರನ್ನು ನಂಬ್ತೀನಿ. ನಮ್ಮ ಮನೆ ದೇವರು ತಿರುಪತಿ. ನನಗೆ ದಕ್ಷಿಣ ಕನ್ನಡದ ದೈವರಾಧನೆ, ಭೂತಕೋಲ ಆಚರಣೆ ಬಗ್ಗೆ ತಿಳಿದಿರಲಿಲ್ಲ. ಕಾಂತಾರ ಹಾಗು ಈಗ 'ಕಾಂತಾರ ಚಾಪ್ಟರ್ 1' ಸಿನಿಮಾದಿಂದಾಗಿ ಆ ದೇವರುಗಳ ಮೇಲೆ ನಂಬಿಕೆ ಶುರುವಾಗಿದೆ.
- ಸಿನಿಮಾದ ಕ್ಲೈಮಾಕ್ಸ್ ಹಾಗು ಗುಲ್ಶನ್ ದೇವಯ್ಯ ಕಾಡಿಗೆ ಬಂದಾಗ, ರಿಷಬ್ ಶೆಟ್ಟಿ ಮೇಲೆ ಬರುವ ದೈವದ ಸನ್ನಿವೇಶವನ್ನು ಶೂಟ್ ಮಾಡೋದು ಎಷ್ಟು ಸಾಹಸದ ಕೆಲಸವಾಗಿತ್ತು?
ಅದು ಚಾಲೆಂಜಿಂಗ್ ಕೆಲಸ. ಯಾಕೆಂದರೆ ರಿಷಬ್ ಅವರಿಗೆ ಬರುವ ಎನರ್ಜಿ ಮೇಲೆ ಚಿತ್ರೀಕರಣ ಮಾಡಬೇಕಿತ್ತು. ಆ ಸೀನ್ಗಳನ್ನು ಮಾಡಬೇಕಾದ್ರೆ, ಕಡಿಮೆ ಜನ ಇಟ್ಟುಕೊಂಡು ಶೂಟಿಂಗ್ ಮಾಡಿದ್ವಿ. ಬಹಳ ಶ್ರದ್ಧೆಯಿಂದ ರಿಷಬ್ ಅವರು ಕೆಲಸ ಮಾಡುವಾಗ ನನಗೆ ಒಂದು ಅಥವಾ ಎರಡು ಟೇಕ್‌ನಲ್ಲಿ ಮುಗಿಸಬೇಕು ಎಂಬ ಒತ್ತಡವೂ ಇತ್ತು. ಇದು ಸಾಮಾನ್ಯ ಸೀನ್ ರೀತಿ ಟೆಕ್ ಪಡೆಯಲು ಸಾಧ್ಯವಿಲ್ಲ. ರಿಷಬ್ ಅವರ ಮೇಲೆ ದೈವ ಬರೋ ಸೀನ್ ತೆಗೆಯುವ ಸಮಯದಲ್ಲಿ ನಮಗೆ ಒಂದು ರೀತಿಯ ಫೀಲ್ ಆಗುತ್ತಿತ್ತು. ಕ್ಲೈಮಾಕ್ಸ್ ಹಾಗು ಗುಲ್ಶನ್ ದೇವಯ್ಯ ಸೀನ್ಗಳನ್ನು ಎರಡು ಎರಡು ಕ್ಯಾಮರಾಗಳನ್ನು ಬಳಸಿ ಎರಡೇ ಟೇಕ್‌ನಲ್ಲಿ ಶೂಟ್ ಮಾಡಿದ್ದೇವೆ. ಮೊದಲ ಕಾಂತಾರ ಕೂಡ ಹಾಗೇ ಫೈಟ್ ಸಿಕ್ವೇನ್ಸ್ ಅನ್ನು ಬೇಗ ಶೂಟ್ ಮಾಡಿದ್ವಿ. ಆದ್ರೆ ರಿಷಬ್ ಅವರ ಮೇಲೆ ಬರುವ ದೈವದ ಸೀನ್ ಮಾಡಬೇಕಾದ್ರೆ ಒಂದು ದಿನ ಆಗಿತ್ತು.
- ಕಾಂತಾರ ಅಧ್ಯಾಯ 1 ಶೂಟಿಂಗ್ ಮಾಡಬೇಕಾದ್ರೆ ನಿಮಗೆ ದೈವದ ಅನುಭವ ಏನಾದ್ರು ಆಗಿದೆಯಾ?
ರಿಷಬ್ ಸಾರ್ ಹೇಳಿದಾಗೆ ನಮಗೆಲ್ಲ ಒಂದು ಪಾಸಿಟಿವ್ ಫೀಲ್ ಆಗಿದೆ. ಯಾಕೆಂದರೆ, ನಾವು ಕಾಡಿನಲ್ಲಿ ಕಾಡು ಪ್ರಾಣಿಗಳು ಓಡಾಡುವ ಜಾಗದಲ್ಲಿ ಪ್ರಾರ್ಥಿಸುತ್ತಿದ್ದೆವು. ಹಾಗೇ ಯಾವಾಗಲೂ ಮಳೆ ಬರುವ ಸಂದರ್ಭದಲ್ಲಿ ಪೂಜೆ ಮಾಡಿದಾಗ ಎಷ್ಟೋ ಸಲ ಮಳೆ ನಿಂತಿದೆ. ಆ ಸಮಯದಲ್ಲಿ ನಾವು ದೈವದ ಅನುಗ್ರಹ ಇದೆ ಅಂತಾ ಮಾತನಾಡಿದ್ವಿ. ಪ್ರತಿದಿನ ಶೂಟಿಂಗ್ ಮಾಡುವ ಮುನ್ನ ಪೂಜೆ ನಮಸ್ಕಾರ ಮಾಡಿನೇ ಶೂಟಿಂಗ್ ಆರಂಭಿಸುತ್ತಿದ್ದೆವು.

- ಕಾಂತಾರ ಅಧ್ಯಾಯ 1 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಲೂಟಿ ಮಾಡುವುದರ ಜೊತೆ ಜನರು ಅಲ್ಲದೆ ಸಿನಿಮಾ ತಾರೆಯರೂ ಕೂಡ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಏನು ಹೇಳ್ತೀರಾ ಇದಕ್ಕೆ?
ನಾನು ದೇಶದಲ್ಲಿ ದೊಡ್ಡ ಕ್ಯಾಮರಾಮ್ಯಾನ್ಗಳ ಕೆಲಸ ನೋಡಿ ಇಷ್ಟಪಟ್ಟು ಈ ಕೆಲಸಕ್ಕೆ ಬಂದೆ. ಆ ಎಲ್ಲ ಕ್ಯಾಮರಾಮ್ಯಾನ್ಗಳು ನನಗೆ ಸ್ಪೂರ್ತಿ. ಅಂಥವರು ಕಾಡಿನ ಶಾಟ್ಸ್ ಚೆನ್ನಾಗಿ ತೆಗೆದಿದ್ದಿಯಾ ಅಂತಾ ಹೇಳಿ ಫೋನ್ ಹಾಗು ಮೆಸೇಜ್ ಮಾಡುತ್ತಿರುವುದು ತುಂಬಾ ಹೆಮ್ಮೆ ಅನಿಸುತ್ತಿದೆ.
- ಈ ಸಿನಿಮಾದಲ್ಲಿ ಮರೆಯಲು ಸಾಧ್ಯವಾಗದ ಸವಾಲಿನ ದೃಶ್ಯ ಚಿತ್ರೀಕರಣ ಯಾವುದು?
ಬೋಟ್ ಸೀಕ್ವೆನ್ಸ್. ಯಾಕೆಂದರೆ ಸಿನಿಮಾ ಎಂಡ್ಗೆ ಬಂದಿದ್ವಿ. ಆ ಸೀನ್ ಮುಗಿಸಲಿಲ್ಲ ಅಂದ್ರೆ ಸಿನಿಮಾ ರಿಲೀಸ್ ಆಗ್ತಾ ಇರಲಿಲ್ಲ. ಅದು ನನಗೆ ಚಾಲೆಂಜಿಂಗ್ ಆಗಿತ್ತು. ಪ್ರತಿದಿನ 8 ಹಾಗು 10 ಗಂಟೆಗಳ ಕಾಲ ಮಳೆ ಬರ್ತಾನೇ ಇತ್ತು. ಮೇನ್ ರೋಡ್‌ನಿಂದ ಶೂಟಿಂಗ್ ಸ್ಪಾಟ್‌ಗೆ ಮುಕ್ಕಾಲು ಗಂಟೆ ಪ್ರಯಾಣ. ಒಂದು ಸಾವಿರ ಜೂನಿಯರ್ಸ್ ಇಟ್ಟುಕೊಂಡು ಶೂಟ್ ಮಾಡಬೇಕಿತ್ತು. ಆಲ್ ಮೋಸ್ಟ್ ಬೋಟ್ ಸೀನ್ ಆಗುವುದಿಲ್ಲ ಅಂತಾ ಫಿಕ್ಸ್ ಆಗಿ ಬೇರೆ ಸೀನ್ ಮಾಡೋಣ ಅಂತಾ ಅಂದುಕೊಂಡಿದ್ವಿ. ದೇವರ ದಯೆಯಿಂದ ವಾರಪೂರ್ತಿ ಸುರಿಯುತ್ತಿದ್ದ ಮಳೆ ಸಡನ್ನಾಗಿ ನಿಂದು ಬಿಸಿಲು ಬಂದಾಗ ಕೂಡಲೇ ಬೋಟ್ ಸೀನ್ ಶೂಟ್ ಮಾಡಿದ್ವಿ. ಆ ಚಿತ್ರೀಕರಣ ಮಾಡಿ ಅರ್ಧ ಗಂಟೆಗೆ ಮತ್ತೆ ಮಳೆ ಶುರುವಾಯಿತು.

ದೈವದ ಕಥೆ ಹೊಂದಿರುವ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ಹೊಂಬಾಳೆ ಫಿಲ್ಮ್ ಸಂಸ್ಥೆ 125 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಈಗ ನಾಲ್ಕು ದಿನಕ್ಕೆ 335 ಕೋಟಿ ಗಳಿಕೆ ಮಾಡಿ ದಾಖಲೆ ಮಾಡಿದೆ.
ಇವುಗಳನ್ನೂ ಓದಿ: Interview:'ಸಾವಿರಾರು ಜನರೊಂದಿಗೆ ಶೂಟಿಂಗ್ ಸವಾಲಾಗಿತ್ತು, ಕೂಗಾಡಿ ರಿಷಬ್ ಶೆಟ್ರ ವಾಯ್ಸ್ ಹೋಗಿತ್ತು': ಡ್ಯಾನ್ಸ್ ಮಾಸ್ಟರ್ ಭೂಷಣ್
'ವರಾಹ ರೂಪಂ' ಬರೆದ ಸಾಹಿತಿಯಿಂದ 'ಕಾಂತಾರ ಚಾಪ್ಟರ್ 1'ಕ್ಕೂ 2 ಹಾಡು: ಶಶಿರಾಜ್ ಕಾವೂರು ಸಂದರ್ಶನ

