ಕಾಂತಾರ ದಾಖಲೆಯ ಕಲೆಕ್ಷನ್: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ರಿಷಬ್ ಶೆಟ್ಟಿ ಸಿನಿ ಕೆರಿಯರ್ನಲ್ಲಿ ಮೈಲಿಗಲ್ಲು
ವಿಶ್ವದಾದ್ಯಂತ ಮೆಚ್ಚಗೆ ಗಳಿಸುತ್ತಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ದಾಖಲೆಯ ಸದ್ದು ಮಾಡಿದೆ. ಈವರೆಗೆ ಚಿತ್ರ ಗಳಿಸಿದ್ದೆಷ್ಟು ಎಂಬುದರ ಮಾಹಿತಿ ಇಲ್ಲಿದೆ...

Published : October 13, 2025 at 2:28 PM IST
ಕಾಂತಾರ ಅಧ್ಯಾಯ 1 ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಸಿನಿಮಾ. ಮೊದಲ ವಾರವೇ 500 ಕೋಟಿ ಗಡಿ ದಾಟಿದ್ದ ಸಿನಿಮಾ ಎರಡನೇ ವಾರವೂ ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮುಂದುವರಿಸಿದೆ. ಹಾಗಾದ್ರೆ ಕಾಂತಾರ ಸಿನಿಮಾದ ಒಟ್ಟು ಕಲೆಕ್ಷನ್ ಎಷ್ಟು? ಕರ್ನಾಕದಲ್ಲಿ ಗಳಿಸಿದ್ದೆಷ್ಟು? ಎಂಬುದರ ಬಗ್ಗೆ ಒಂದು ವರದಿ...
ಹೊಂಬಾಳೆ ಫಿಲ್ಮ್ ಸಂಸ್ಥೆಯ ಆಪ್ತರೊಬ್ಬರ ಮಾಹಿತಿಯಂತೆ ಕಾಂತಾರ ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 191 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈಗಾಗಲೇ ಈ ಚಿತ್ರವನ್ನು ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಂಬರುವ ಹಬ್ಬದ ವಾರದಲ್ಲಿ, ಚಿತ್ರಮಂದಿರಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗಲಿದ್ದು, ಕರ್ನಾಟಕದಲ್ಲೇ ₹250 ಕೋಟಿಗೂ ಅಧಿಕ ಗಳಿಕೆ ಮಾಡುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎಂದು ಮೂಲಗಳು ಹೇಳುತ್ತಿವೆ.

ಎರಡನೇ ವಾರವೂ ಹೌಸ್‌ಫುಲ್: ಎರಡನೇ ವಾರವೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕೆಲವೆಡೆ ಬೆಳಗಿನಜಾವ ಹೆಚ್ಚಿನ ಶೋಗಳನ್ನು ಆಯೋಜಿಸಲಾಗುತ್ತಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಮತ್ತಷ್ಟು ಜನರನ್ನು ಸಿನಿಮಾ ನೋಡುವಂತೆ ಪ್ರೇರೇಪಿಸುತ್ತಿದೆ. ಈಗಾಗಲೇ ಕೂಲಿ, ಸಯ್ಯಾರ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ದಾಖಲೆಯನ್ನು ಕಾಂತಾರ ಅಧ್ಯಾಯ 1ಸಿನಿಮಾ ಹಿಂದಿಕ್ಕಿದೆ.
ಸದ್ಯ 11 ದಿನಗಳಲ್ಲಿ ವಿಶ್ವದಾದ್ಯಂತ ಕಾಂತಾರ ಅಧ್ಯಾಯ 1 ಸಿನಿಮಾ ಬರೋಬ್ಬರಿ 656 ಕೋಟಿ ರೂ. ಕಲೆಕ್ಷನ್ ಮಾಡಿದೆ ಅಂತಾ ಅಧಿಕೃತವಾಗಿ ಹೊಂಬಾಳೆ ಫಿಲ್ಮ್ ಪ್ರಕಟಿಸಿದೆ. ಇದಕ್ಕೂ ಮುನ್ನ ಮೊದಲ ವಾರ 509 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು ಅಂತಾ ಹೊಂಬಾಳೆ ಘೋಷಿಸಿತ್ತು. ಸೆಕೆಂಡ್ ವೀಕೆಂಡ್‌ನಲ್ಲಿ ಕಲೆಕ್ಷನ್ ಹೆಚ್ಚಾಗಿದ್ದು, 3 ದಿನಕ್ಕೆ 100 ಕೋಟಿ ರೂ.ಗೂ ಅಧಿಕ ಗಳಿಕೆ ಆಗಿದೆ ಅಂತಾ ಬಾಕ್ಸಾಫೀಸ್ ಪಂಡಿತರು ಅಂದಾಜಿಸಿದ್ದಾರೆ.
ಹಿಂದಿ ಪ್ರೇಕ್ಷಕರಿಂದಲೂ ಒಳ್ಳೆಯ ರೆಸ್ಪಾನ್ಸ್ ಪಡೆದಿರುವ ಕಾಂತಾರ ಗಳಿಕೆಯಲ್ಲೂ ಈಗಾಗಲೇ 100 ಕೋಟಿ ದಾಟಿದೆ. ಇದೀಗ 11 ದಿನಕ್ಕೆ ಹಿಂದಿಯಲ್ಲಿ 146.22 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಫಸ್ಟ್ ವೀಕ್ 110.10 ಕೋಟಿ ರೂ. ಗಳಿಸಿತ್ತು. ಶನಿವಾರ 14.37 ಕೋಟಿ ರೂ. ಹಾಗೂ ಭಾನುವಾರ 14.65 ರೂ. ಕಲೆಹಾಕಿದೆ ಅಂತಾ ಹೊಂಬಾಳೆ ಸಂಸ್ಥೆಯ ಮೂಲಗಳು ತಿಳಿಸಿವೆ.
ಬುಕ್‌ಮೈ ಶೋ ಪ್ರಕಾರ 11 ದಿನಕ್ಕೆ 1 ಕೋಟಿಗೂ ಅಧಿಕ ಕಾಂತಾರ ಟಿಕೆಟ್ ಬುಕ್ ಆಗಿರುವ ಮಾಹಿತಿ ಇದೆ. ಈ ಮೂಲಕ ರಿಷಬ್ ಶೆಟ್ಟಿ ಸಿನಿಮಾ ವೃತ್ತಿ ಜೀವನದಲ್ಲಿ ಇದು ಒಂದು ಮೈಲಿಗಲ್ಲಾಗಿದೆ.
ಕಾಂತಾರ ಓಟ ಹೀಗೆ ಮುಂದುವರಿದರೆ ಮುಂಬರುವ ಹಬ್ಬದ ವೀಕೆಂಡ್‌ನಲ್ಲಿ ಚಿತ್ರ ಮತ್ತಷ್ಟು ಹಣ ಗಳಿಸಲಿದೆ. ಅದರಲ್ಲೂ ಈ ಬಾರಿ ಪಟಾಕಿ ಹಬ್ಬಕ್ಕೆ ಬೇರೆ ಯಾವುದೇ ದೊಡ್ಡ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿಲ್ಲ. ಹಾಗಾಗಿ ಕಾಂತಾರ ಅಧ್ಯಾಯ 1 ಚಿತ್ರಕ್ಕೆ ಪ್ಲಸ್ ಆಗಲಿದೆ. ಸದ್ಯ ಹೊಂಬಾಳೆ ಫಿಲ್ಮ್ ಸಂಸ್ಥೆಯ ಮೂಲಗಳು ಹೇಳುವಂತೆ, ಚಿತ್ರ 800 ರಿಂದ 900 ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಅಂತಿದ್ದಾರೆ. ಈ ಮಾತು ನಿಜವಾದ್ರೆ ಕಾಂತಾರ ಅಧ್ಯಾಯ 1 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಬರೆಯಲಿದೆ.

