ಸ್ಟಾರ್ ಕ್ರಿಕೆಟಿಗ ಮತ್ತು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದು ಕ್ರಿಕೆಟ್ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಆಘಾತ ತಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುದ್ದಿನ ಮಡದಿ ಅನುಷ್ಕಾ ಶರ್ಮಾ ಕೂಡಾ ಭಾವನಾತ್ಮಕ ಬರಹ ಹಂಚಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಮ್ ಪೋಸ್ಟ್: ''ಅವರು ದಾಖಲೆಗಳು ಮತ್ತು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನೀವು ಎಂದಿಗೂ ತೋರಿಸದ ಕಣ್ಣೀರು, ಯಾರೂ ನೋಡದ ನಿಮ್ಮ ಯುದ್ಧಗಳು ಮತ್ತು ಈ ಆಟದ ಸ್ವರೂಪಕ್ಕೆ ನೀವು ನೀಡಿದ ಅಪಾರ ಪ್ರೀತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇದೆಲ್ಲವೂ ನಿಮ್ಮಿಂದ ಎಷ್ಟರ ಮಟ್ಟಿಗೆ ತೆಗೆದುಕೊಂಡಿದೆ ಎಂಬುದು ನನಗೆ ತಿಳಿದಿದೆ. ಪ್ರತೀ ಟೆಸ್ಟ್ ಸರಣಿಯ ನಂತರ, ನೀವು ಸ್ವಲ್ಪ ಬುದ್ಧಿವಂತರಾಗಿ, ಸ್ವಲ್ಪ ವಿನಮ್ರರಾಗಿ ಹಿಂತಿರುಗಿದ್ದೀರಿ. ಅದರ ಮೂಲಕ ನೀವು ವಿಕಸನಗೊಳ್ಳುವುದನ್ನು ನೋಡುವುದು ಒಂದು ಸೌಭಾಗ್ಯ. ನಾನು ಯಾವಾಗಲೂ ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬಿಳಿ ಉಡುಪಿನಲ್ಲಿ ನಿವೃತ್ತರಾಗುತ್ತೀರಿ ಎಂದು ಊಹಿಸಿದ್ದೆ. ಆದರೆ ಯಾವಾಗಲೂ ನೀವು ನಿಮ್ಮ ಹೃದಯದ ಮಾತನ್ನು ಕೇಳಿದ್ದೀರಿ. ಆದ್ದರಿಂದ ನಾನೀಗ ಹೇಳಲು ಬಯಸುವುದೇನೆಂದರೆ, ನೀವು ಈ ವಿದಾಯವನ್ನು ಗಳಿಸಿದ್ದೀರಿ'' ಎಂದು ಬರೆದುಕೊಂಡಿದ್ದಾರೆ.
ಅನುಷ್ಕಾ ಅವರು ಕೊಹ್ಲಿ ವೃತ್ತಿಜೀವನದ ಏರಿಳಿತಗಳಲ್ಲಿ ಯಾವಾಗಲೂ ಬೆಂಬಲದ ಬಂಡೆಯಾಗಿ ನಿಂತಿದ್ದಾರೆ. ಇದೀಗ ಅವರ ಪೋಸ್ಟ್ ಅಭಿಮಾನಿಗಳಿಂದ ಮೆಚ್ಚುಗೆ ಸ್ವೀಕರಿಸಿದ್ದಾರೆ.
ವಿಶ್ವಾದ್ಯಂತ ಜನಪ್ರಿಯತೆ ಹೊಂದಿರುವ ಕೊಹ್ಲಿ ಇಂದು ಬೆಳಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಅವರ ಮಾತಿನಲ್ಲಿ ಹೇಳುವುದಾದರೆ, 'ತಮ್ಮನ್ನು ರೂಪಿಸಿದ ಮತ್ತು ಜೀವನಕ್ಕೆ ಪಾಠಗಳನ್ನು ಕಲಿಸಿದ ಸ್ವರೂಪ'ಕ್ಕೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ವಿಡಿಯೋ: ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಪತ್ನಿಯೊಂದಿಗೆ ಏರ್ಪೋರ್ಟ್‌ನಲ್ಲಿ ಕೊಹ್ಲಿ
ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ದಂಪತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಫೋಟೋ ವಿಡಿಯೋಗಳು ಆನ್ಲೈನ್ನಲ್ಲಿ ವೈರಲ್ ಆಗಿವೆ. ಕೊಹ್ಲಿ 123 ಟೆಸ್ಟ್‌ಗಳು, 9,230 ರನ್‌ಗಳು ಮತ್ತು 30 ಶತಕಗಳೊಂದಿಗೆ ನಿವೃತ್ತಿ ಹೊಂದಿದ್ದಾರೆ.
ಇದನ್ನೂ ಓದಿ: 'ಕಾಂತಾರದಿಂದಾಗಿ ರಾಕೇಶ್ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದ್ದ': ಗೆಳೆಯ ಗೋವಿಂದೇಗೌಡ
2008ರ 'ರಬ್ ನೆ ಬನಾ ದಿ ಜೋಡಿ' ಸಿನಿಮಾ ಮೂಲಕ ನಟನೆ ಪ್ರಾರಂಭಿಸಿದ ಅನುಷ್ಕಾ ಶರ್ಮಾ ಕೊನೆಯದಾಗಿ 2018ರ 'ಝೀರೋ' ಚಿತ್ರದಲ್ಲಿ ಕಾಣಿಸಿಕೊಂಡರು. ಚೊಚ್ಚಲ ಮತ್ತು ಕೊನೆಯ ಸಿನಿಮಾಗಳೆರಡರಲ್ಲೂ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಅತಿ ಕಡಿಮೆ ಅವಧಿಯಲ್ಲೇ ಜನಪ್ರಿಯರಾದ ಅನುಷ್ಕಾ 6-7 ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದಾರೆ. 2017ರ ಡಿಸೆಂಬರ್ 11ರಂದು ವಿರಾಟ್ ಕೊಹ್ಲಿ ಜೊತೆ ಹಸೆಮಣೆ ಏರಿದ ನಟಿ ಈಗ ಎರಡು ಮುದ್ದು ಮಕ್ಕಳ ತಾಯಿ. ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.