ಶಿಮ್ಲಾ (ಹಿಮಾಚಲ ಪ್ರದೇಶ): ಬಿಜೆಪಿ ಸಂಸದೆ, ಬಾಲಿವುಡ್ ಅಭಿನೇತ್ರಿ ಕಂಗನಾ ರಣಾವತ್ ಅವರು ಮನಾಲಿಯಲ್ಲಿರುವ ತಮ್ಮ ಮನೆಯ ವಿದ್ಯುತ್ ಬಿಲ್ ಬರೋಬ್ಬರಿ 1 ಲಕ್ಷ ರೂಪಾಯಿ ಆಗಿದೆ ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಸುಖ್ವಿಂದರ್ ಸಿಂಗ್ ಸುಖು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ರಣಾವತ್ ಅವರ ಕರೆಂಟ್ ಬಿಲ್ ನಿಜವಾಗಿಯೂ 1 ಲಕ್ಷ ರೂ. ಆಗಿದೆಯೇ? ಎಂಬ ಪ್ರಶ್ನೆ ಎದ್ದಿತ್ತು. ಹಿಮಾಚಲ ಪ್ರದೇಶ ವಿದ್ಯುತ್ ಮಂಡಳಿ ಈ ಬಗ್ಗೆ ಸ್ಪಷನೆ ನೀಡಿದೆ. ಮಂಡಳಿ ಹೊರಡಿಸಿರುವ ಹೇಳಿಕೆ ಪ್ರಕಾರ, ಕಂಗನಾ ಅವರ ವಿದ್ಯುತ್ ಬಿಲ್ 1 ಲಕ್ಷ ರೂ.ಗಳಲ್ಲ. ಬದಲಾಗಿ, 2 ತಿಂಗಳ ಒಟ್ಟು ದರ 90,384 ರೂಪಾಯಿಗಳಾಗಿದೆ ಎಂದಿದೆ.
ಹಿಮಾಚಲ ಪ್ರದೇಶದ ಮನಾಲಿಯ ಸಿಮ್ಸಾ ಗ್ರಾಮದಲ್ಲಿರುವ ನಿವಾಸಕ್ಕೆ ಕಂಗನಾ ರನಾವತ್ ಅವರ ಹೆಸರಿನಲ್ಲಿ ವಿದ್ಯುತ್ ಮೀಟರ್ ಸಂಪರ್ಕವಿದೆ ಎಂದು ವಿದ್ಯುತ್ ಮಂಡಳಿ ತಿಳಿಸಿದೆ. ಗೃಹಬಳಕೆದಾರರ ವಿದ್ಯುತ್ ಸಂಪರ್ಕ ಸಂಖ್ಯೆ 100000838073 ಕಂಗನಾ ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಕಂಗನಾ ಅವರ ಶಿಮ್ಲಾ ನಿವಾಸದ 2 ತಿಂಗಳ ಒಟ್ಟು ಬಾಕಿ ವಿದ್ಯುತ್ ಬಿಲ್ 90,384 ರೂಪಾಯಿ. 2 ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ.
ಇಂತಹ ಪರಿಸ್ಥಿತಿಯಲ್ಲಿ, ಅವರ 1 ಲಕ್ಷ ರೂ. ವಿದ್ಯುತ್ ಬಿಲ್ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂತಿದೆ ಎಂದು ಹಿಮಾಚಲ ಪ್ರದೇಶ ವಿದ್ಯುತ್ ಮಂಡಳಿ ಹೇಳಿದೆ. ಮಾರ್ಚ್ 22, 2025ರಂದು ಕಂಗನಾ ರಣಾವತ್ ಅವರಿಗೆ ನೀಡಲಾದ ವಿದ್ಯುತ್ ಬಿಲ್‌ನಲ್ಲಿ ಅವರ ಹಿಂದಿನ ತಿಂಗಳ ಬಾಕಿ ಮೊತ್ತವೂ ಸೇರಿದೆ. ಹಿಂದಿನ ಬಾಕಿಯೂ ಸೇರಿ ಒಟ್ಟು 90,384 ರೂ.ಗಳಾಗಿದೆ. ಅವರ ನಿವಾಸದ ಸಂಪರ್ಕಿತ ವಿದ್ಯುತ್ 94.82 kW ಆಗಿದ್ದು, ಇದು ಸಾಮಾನ್ಯ ನಿವಾಸದ ವಿದ್ಯುತ್ಗಿಂತ 1500 ಪ್ರತಿಶತದಷ್ಟು ಹೆಚ್ಚು ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: 'ಕೊನೆ ಉಸಿರಿರುವವರೆಗೂ ಕನ್ನಡ ಸಿನಿಮಾ ಮಾತ್ರ': ಗೆಳೆಯ ಧನ್ವೀರ್ ಚಿತ್ರ ವೀಕ್ಷಿಸಿ ದರ್ಶನ್ ಹೇಳಿದ್ದಿಷ್ಟು
ಹಿಮಾಚಲ ಪ್ರದೇಶ ವಿದ್ಯುತ್ ಮಂಡಳಿ ಪ್ರಕಾರ, ಕಂಗನಾ ರಣಾವತ್ ಮೊದಲ ಹಂತದಲ್ಲಿ - ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ವಿದ್ಯುತ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿಲ್ಲ. ಅದೇ ರೀತಿ, ಜನವರಿ ಮತ್ತು ಫೆಬ್ರವರಿ ತಿಂಗಳ ವಿದ್ಯುತ್ ಬಿಲ್‌ಗಳನ್ನು ಸಹ ಸಮಯಕ್ಕೆ ಸರಿಯಾಗಿ ಪಾವತಿಸಲಾಗಿಲ್ಲ. ಡಿಸೆಂಬರ್ ತಿಂಗಳಲ್ಲಿ 6,000 ಯೂನಿಟ್‌ಗಳ ವಿದ್ಯುತ್ ಬಳಕೆಯ ಬಾಕಿ ಮೊತ್ತ ಸುಮಾರು 31,367 ರೂ.ಗಳಾಗಿದ್ದು, ಫೆಬ್ರವರಿ ತಿಂಗಳಲ್ಲಿ 9,000 ಯೂನಿಟ್‌ಗಳ ವಿದ್ಯುತ್ ಬಳಕೆಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿಸದ ಕಾರಣ ತಡವಾದ ಶುಲ್ಕಗಳೂ ಸೇರಿದಂತೆ 58,096 ರೂ.ಗಳಾಗಿದೆ. ಕಂಗನಾ ಅವರ ನಿವಾಸದ 2024ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳ ವಿದ್ಯುತ್ ಬಿಲ್ 82,061 ರೂ.ಗಳಾಗಿತ್ತು. ಇದನ್ನು ಅವರು ಜನವರಿ 16, 2025ರಂದು ಪಾವತಿಸಿದ್ದಾರೆ.
ಇದನ್ನೂ ಓದಿ: ಮೋಹನ್ ಬಾಬು ಕೌಟುಂಬಿಕ ಜಗಳ ಬೀದಿಗೆ: ಗೇಟ್ ಬಂದ್, ಅಪ್ಪನ ಮನೆಯೆದುರು ಕುಳಿತ ಪುತ್ರ ಮನೋಜ್
ಜನವರಿ ಮತ್ತು ಫೆಬ್ರವರಿ ತಿಂಗಳ ವಿದ್ಯುತ್ ಬಿಲ್‌ಗಳನ್ನು ಮಾರ್ಚ್ 28, 2025ರಂದು ಪಾವತಿಸಿದ್ದಾರೆ. ಕಂಗನಾ ಅವರ ಮಾಸಿಕ ಬಳಕೆ ಸರಾಸರಿ 5,000 ಯೂನಿಟ್‌ಗಳಿಂದ 9,000 ಯೂನಿಟ್‌ಗಳವರೆಗೆ ಹೆಚ್ಚಾಗಿದೆ. ಅಲ್ಲದೇ, ಹಿಮಾಚಲ ಪ್ರದೇಶ ಸರ್ಕಾರವು ವಿದ್ಯುತ್ ಬಿಲ್‌ಗಳ ಮೇಲೆ ನೀಡುವ ಸಬ್ಸಿಡಿಯನ್ನು ನಟಿ ನಿರಂತರವಾಗಿ ಪಡೆಯುತ್ತಿದ್ದಾರೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ.