ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ದಕ್ಷಿಣ ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಮತ್ತು ಇತರ ಮಕ್ಕಳನ್ನು ಭೀಕರ ಅಗ್ನಿ ಅವಘಡದಿಂದ ರಕ್ಷಿಸಿದ ನಾಲ್ವರು ಭಾರತೀಯ ವಲಸೆ ಕಾರ್ಮಿಕರನ್ನು ಸಿಂಗಾಪುರ ಸರ್ಕಾರ ಸನ್ಮಾನಿಸಿದೆ.
ಸಿಂಗಾಪುರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ಗೆ ಸಮೀಪ ಇರುವ ರಿವರ್ ವ್ಯಾಲಿ ರಸ್ತೆಯಲ್ಲಿರುವ 3 ಅಂತಸ್ತಿನ ಕಟ್ಟಡದಲ್ಲಿ ಏಪ್ರಿಲ್ 8 ರಂದು ಅಗ್ನಿ ಅವಘಡ ಸಂಭವಿಸಿತ್ತು. ದುರಂತದಲ್ಲಿ 15 ಮಕ್ಕಳು ಸೇರಿ 20 ಜನರು ಗಾಯಗೊಂಡರು. ಆ ಪೈಕಿ ಕಲ್ಯಾಣ್ ಕಿರಿಪುತ್ರ ಮಾರ್ಕ್ ಶಂಕರ್ ಕೂಡಾ ಓರ್ವ. ವೈದ್ಯಕೀಯ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ನಾಲ್ವರು ಭಾರತೀಯ ವಲಸೆ ಕಾರ್ಮಿಕರು ಅಲ್ಲೇ ಸಮೀಪದಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ, ಮಕ್ಕಳ ಕಿರುಚಾಟ ಕೇಳಿ ಕಟ್ಟಡದ 3ನೇ ಮಹಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದರು. ಆ ಕೂಡಲೇ ಅವರು ಸ್ಥಳಕ್ಕೆ ಧಾವಿಸಿ ತ್ವರಿತ ರಕ್ಷಣಾ ಕಾರ್ಯಾಚರಣೆ ನಡೆಸಿ, ಒಳಗೆ ಸಿಲುಕಿದ್ದ ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು.
ಪ್ರಾಣವನ್ನೇ ಪಣಕ್ಕಿಟ್ಟ ಕಾರ್ಮಿಕರ ಧೈರ್ಯಕ್ಕೆ ಮೆಚ್ಚುಗೆ: ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಕಾರ್ಮಿಕರ ಧೈರ್ಯವನ್ನು ಗುರುತಿಸಿ, ಸಿಂಗಾಪುರ್ ಸರ್ಕಾರವು ಗೌರವಿಸಿದೆ. ಕಾರ್ಮಿಕರ ಕೆಲಸವನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ. ಬಿಕ್ಕಟ್ಟಿನ ಸಮಯದಲ್ಲಿ ಅವರ ಧೈರ್ಯ ಮತ್ತು ನಿಸ್ವಾರ್ಥತೆಯನ್ನು ಅಲ್ಲಿನ ಅಧಿಕಾರಿಗಳು ಎತ್ತಿ ಹಿಡಿದಿದ್ದಾರೆ.
ಚಿರಂಜೀವಿ ಟ್ವೀಟ್: ಇತ್ತೀಚೆಗೆ ಎಕ್ಸ್ ಪೋಸ್ಟ್ ಶೇರ್ ಮಾಡಿದ್ದ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, "ನಮ್ಮ ಮಗು ಮಾರ್ಕ್ ಮನೆಗೆ ಬಂದಿದ್ದಾನೆ. ಆದರೆ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕಿದೆ. ನಮ್ಮ ಕುಲದೇವರಾದ ಆಂಜನೇಯ ಸ್ವಾಮಿಯ ಕೃಪೆಯಿಂದ ಮಗು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾನೆ ಎಂಬ ನಂಬಿಕೆಯಿದೆ. ಆ ದೇವರು ನಮ್ಮೊಂದಿಗೆ ನಿಂತು, ಮಗುವನ್ನು ಅವಘಡದಿಂದ ರಕ್ಷಿಸಿದರು. ಪ್ರತಿಯೊಬ್ಬರೂ ನಮ್ಮ ಕುಟುಂಬಕ್ಕೆ ಬೆಂಬಲ ಕೊಟ್ಟಿದ್ದಾರೆ. ಮಗು ಶೀಘ್ರವೇ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ. ಆಶೀರ್ವದಿಸುತ್ತಿದ್ದಾರೆ. ನಮ್ಮ ಇಡೀ ಕುಟುಂಬದ ಪರವಾಗಿ, ನಾವು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ" ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಜಾಹ್ನವಿ ಕಪೂರ್ಗೆ 5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕೊಟ್ಟ ಅನನ್ಯಾ ಬಿರ್ಲಾ ಯಾರು? ಕಾರು ಕೊಟ್ಟಿದ್ದೇಕೆ?
ನಟ ಜೂನಿಯರ್ ಎನ್ಟಿಆರ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ, ''ಸಿಂಗಾಪುರ ಅಗ್ನಿ ಅವಘಡದಲ್ಲಿ ಮಾರ್ಕ್ ಶಂಕರ್ ಸಿಲುಕಿದ ಸುದ್ದಿ ಕೇಳಿ ಬಹಳ ಬೇಸರವಾಯಿತು. ಬಾಲಕ ಶೀಘ್ರವೇ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ. ಪುಟ್ಟ ಯೋಧ, ಧೈರ್ಯವಾಗಿ ಇರು. ಪವನ್ ಕಲ್ಯಾಣ್ ಮತ್ತು ಕುಟುಂಬಕ್ಕೆ ಶಕ್ತಿ ಮತ್ತು ಪ್ರಾರ್ಥನೆಗಳು'' ಎಂದು ತಿಳಿಸಿದ್ದರು.
ಇದನ್ನೂ ಓದಿ: 'ಅಭಿಮಾನಿಗಳನ್ನು ದೇವರೆಂದ, ನಿರ್ಮಾಪಕರನ್ನು ಅನ್ನದಾತರೆಂದ ಕನ್ನಡಿಗರ ಕಣ್ಮಣಿ': ಅಪ್ಪಾಜಿ ಸ್ಮರಿಸಿದ ಶಿವಣ್ಣ