ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ, ಬ್ಯಾಡ್ಮಿಂಟನ್ ಲೆಜೆಂಡ್ ಪ್ರಕಾಶ್ ಪಡುಕೋಣೆ ಅವರ 70ನೇ ಹುಟ್ಟುಹಬ್ಬವನ್ನಿಂದು ಬಹಳ ವಿಶೇಷವಾಗಿ ಆಚರಿಸಿದರು.
'ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್' (ಪಿಎಸ್ಬಿ) ಬೆಂಗಳೂರು, ಎನ್ಸಿಆರ್, ಮುಂಬೈ, ಚೆನ್ನೈ, ಜೈಪುರ, ಪುಣೆ, ನಾಸಿಕ್, ಮೈಸೂರು, ಪಾಣಿಪತ್, ಡೆಹ್ರಾಡೂನ್, ಉದಯಪುರ, ಕೊಯಮತ್ತೂರು, ಸಾಂಗ್ಲಿ ಮತ್ತು ಸೂರತ್ ಸೇರಿದಂತೆ 18 ನಗರಗಳಲ್ಲಿ 75ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಮಾಧ್ಯಮ ಪ್ರಕಟಣೆ ಮೂಲಕ ಹೇಳಿದ್ದಾರೆ.
"ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುವುದು ನಮ್ಮ ಆಶಯ" ಎಂದೂ ಸಹ ದೀಪಿಕಾ ತಿಳಿಸಿದ್ದಾರೆ. ಈ ಮೂಲಕ ಕೇಂದ್ರಗಳ ಸಂಖ್ಯೆ ವಿಸ್ತರಿಸುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ನಲ್ಲಿ, "ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳಾಗಿ, ಈ ಕ್ರೀಡೆಯು ಒಬ್ಬರ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೇಗೆ ರೂಪಿಸುತ್ತದೆ ಎಂಬುದನ್ನು ನಾನು ನೇರವಾಗಿ ಅನುಭವಿಸಿದ್ದೇನೆ. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB) ಮೂಲಕ, ಬ್ಯಾಡ್ಮಿಂಟನ್‌ನ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ಹಂತದ ಜನರಿಗೆ ತಲುಪಿಸಲು ಮತ್ತು ಆರೋಗ್ಯಕರ, ಫೋಕಸ್ಡ್ ಮತ್ತು ಕ್ರೀಡೆಯಿಂದ ಪ್ರೇರಿತವಾದ ಪೀಳಿಗೆಯನ್ನು ನಿರ್ಮಿಸಲು ನಾವು ಆಶಿಸುತ್ತೇವೆ. ಅಪ್ಪಾ, ನಿಮ್ಮನ್ನು ಚೆನ್ನಾಗಿ ತಿಳಿದಿರುವವರಿಗೆ ಈ ಕ್ರೀಡೆಯ ಬಗ್ಗೆ ನಿಮ್ಮ ಉತ್ಸಾಹವೂ ತಿಳಿದಿದೆ. 70ನೇ ವಯಸ್ಸಿನಲ್ಲಿಯೂ ನೀವು ಬ್ಯಾಡ್ಮಿಂಟನ್ಗೆ ನಿಮ್ಮನ್ನು ಸಮರ್ಪಿಸಿದ್ದೀರಿ. ನಿಮ್ಮ ಉತ್ಸಾಹವನ್ನು ನಿಜವಾಗಿಸಲು ನಾವು ಬದ್ಧರಾಗಿದ್ದೇವೆ. ಎಲ್ಲರಿಗಾಗಿ ಬ್ಯಾಡ್ಮಿಂಟನ್! 70ನೇ ಹುಟ್ಟುಹಬ್ಬದ ಶುಭಾಶಯಗಳು ಪಪ್ಪಾ!" ಎಂದು ಬರೆದುಕೊಂಡಿದ್ದಾರೆ.
ನಟಿಯ ಘೋಷಣೆಯ ನಂತರ, ಪತಿ-ಬಾಲಿವುಡ್ ನಟ ರಣ್ವೀರ್ ಸಿಂಗ್ ಕಾಮೆಂಟ್ ಸೆಕ್ಷನ್ನಲ್ಲಿ ಹಾರ್ಟ್ ಎಮೋಜಿಯನ್ನು ಹಾಕೋ ಮೂಲಕ ತಮ್ಮ ಬೆಂಬಲ ಮತ್ತು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: '777 ಚಾರ್ಲಿ ಕೇವಲ ಒಂದು ಸಿನಿಮಾವಲ್ಲ, ಅದಕ್ಕೂ ಹೆಚ್ಚಿನದು, ಕೃತಜ್ಞ': ರಕ್ಷಿತ್ ಶೆಟ್ಟಿ
ನಟಿ ಶೇರ್ ಮಾಡಿದ ಪ್ರಕಟಣೆಯಲ್ಲಿ, ಪಿಎಸ್‌ಬಿಯ ಮಾರ್ಗದರ್ಶಕ ಮತ್ತು ಸಲಹೆಗಾರ ಪ್ರಕಾಶ್ ಪಡುಕೋಣೆ ತಮ್ಮ ಮನದಾಳವನ್ನೂ ಹಂಚಿಕೊಂಡರು. "ಕ್ರೀಡೆಯು ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದೆ. ಇದು ಶಿಸ್ತು, ಸ್ಥಿತಿಸ್ಥಾಪಕತ್ವ ಮತ್ತು ಗೆಲುವಿನ ಮನಸ್ಥಿತಿಯನ್ನು ಹುಟ್ಟಿಸುತ್ತದೆ. ಪಿಎಸ್‌ಬಿಯೊಂದಿಗೆ, ಗುಣಮಟ್ಟದ ತರಬೇತಿಯನ್ನು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವುದು, ತಳಮಟ್ಟದಿಂದ ಪ್ರತಿಭೆಯನ್ನು ಪೋಷಿಸುವುದು ಮತ್ತು ಭಾರತೀಯ ಬ್ಯಾಡ್ಮಿಂಟನ್‌ನ ಭವಿಷ್ಯಕ್ಕೆ ಬಲವಾದ ಅಡಿಪಾಯವನ್ನು ಹಾಕುವುದು ನಮ್ಮ ಗುರಿ" ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ 'ಥಗ್ ಲೈಫ್' ಬಿಡುಗಡೆಗೆ ಅನುಮತಿ ಸಿಗುತ್ತಾ? 5 ದಿನಗಳಾದರೂ 50 ಕೋಟಿ ದಾಟದ ಕಮಲ್ ಹಾಸನ್ ಸಿನಿಮಾ
ಭಾರತದ 18 ನಗರಗಳಲ್ಲಿ 75 ಕೇಂದ್ರಗಳು ಆರಂಭಗೊಂಡಿದ್ದು, ಈ ವರ್ಷದ ಕೊನೆಗೆ 100 ಕೇಂದ್ರಗಳು ಮತ್ತು 2027ರ ಹೊತ್ತಿಗೆ 250 ಕೇಂದ್ರಗಳಿಗೆ ವಿಸ್ತರಿಸುವ ಗುರಿಯನ್ನು 'ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್' ಹೊಂದಿದೆ. ದೀಪಿಕಾ ಪಡುಕೋಣೆ ಇದರ ಸಂಸ್ಥಾಪಕಿಯಾದರೆ, ಪ್ರಕಾಶ್ ಪಡುಕೋಣೆ ಮಾರ್ಗದರ್ಶಕರಾಗಿ ಪಿಎಸ್‌ಬಿಯ ಭಾಗವಾಗಿದ್ದಾರೆ.