ರೈತ ಬಾಂಧವರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ, ಗ್ರಾಹಕರಿಗೆ ಸ್ವತಃ ತಾವೇ ಮಾರಾಟ ಮಾಡಲು ಮುಂದಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ 'ನೇರ ಮಾರಾಟದ ಮೂಲಕ ನಮ್ಮ ಹೋರಾಟ - ನಮ್ಮ ಬೆಳೆಗೆ ನಮ್ಮದೇ ಬೆಲೆ' ಶೀರ್ಷಿಕೆ ಅಡಿ ಕಾರ್ಯಕ್ರಮ ನಡೆಯುತ್ತಿದೆ. ಬೆಂಗಳೂರಿನ ಆರ್ಆರ್ ನಗರದ ಐಡಿಯಲ್ ಹೋಮ್ಸ್ ಲೇಔಟ್ನಲ್ಲಿರುವ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ ಇದೇ ಏಪ್ರಿಲ್ 12 ರಿಂದ 14ರವರೆಗೆ ಆಯೋಜಿಸಿರುವ ರೈತ ಸಂತೆಯಲ್ಲಿ ರೈತರೇ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲಿದ್ದಾರೆ.
'ನೇರ ಮಾರಾಟದ ಮೂಲಕ ನಮ್ಮ ಹೋರಾಟ - ನಮ್ಮ ಬೆಳೆಗೆ ನಮ್ಮದೇ ಬೆಲೆ' ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳೂ ಬೆಂಬಲ ಕೊಡುತ್ತಿದ್ದಾರೆ. ಡಾಲಿ ಧನಂಜಯ್ ಅವರಿಂದು ವಿಡಿಯೋ ಶೇರ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದಕ್ಕೂ ಮುನ್ನ, ನಟಿ ಅದಿತಿ ಪ್ರಭುದೇವ ಮಾತನಾಡಿದ್ದರು.
'ರೈತರೊಂದಿಗೆ ನಿಲ್ಲೋಣ' - ಧನಂಜಯ್: ಚಂದನವನದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಮಾತನಾಡಿ, ''ರೈತರ ಸಮಸ್ಯೆಗಳ ಬಗ್ಗೆ ತಮ್ಮೆಲ್ಲರಿಗೂ ಗೊತ್ತೇ ಇದೆ. ತಾವು ಬೆಳೆಯೋ ತರಕಾರಿಗಳಿಗೆ, ಧವಸ ಧಾನ್ಯಗಳಿಗೆ ಸರಿಯಾದ ಬೆಲೆ ಸಿಗದೇ ಬಹಳ ಒದ್ದಾಡುತ್ತಿದ್ದಾರೆ. ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ, ಏಪ್ರಿಲ್ 12 ರಿಂದ 14ರವರೆಗೆ ಆರ್ಆರ್ ನಗರದ ಐಡಿಯಲ್ ಹೋಮ್ಸ್ ಲೇಔಟ್ನಲ್ಲಿರುವ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ 'ನೇರ ಮಾರಾಟದ ಮೂಲಕ ನಮ್ಮ ಹೋರಾಟ - ನಮ್ಮ ಬೆಳೆಗೆ ನಮ್ಮದೇ ಬೆಲೆ' ಕಾರ್ಯಕ್ರಮ ನಡೆಯಲಿದೆ. ಈ ಮೂಲಕ ರೈತರೇ ಬಂದು ತಾವು ಬೆಳೆದ ತರಕಾರಿ, ಧವಸ ಧಾನ್ಯಗಳನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಈ ಮೂರು ದಿನ ನಾವು ರೈತರಿಂದ ನೇರವಾಗಿ ನಮಗೆ ಬೇಕಾದ ತರಕಾರಿಗಳನ್ನು ಖರೀದಿಸಬಹುದಾಗಿದೆ. ಎಲ್ಲರೂ ಇದರಲ್ಲಿ ಭಾಗವಹಿಸಿ. ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರೊಂದಿಗೆ ನಿಲ್ಲೋಣ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ'' ಎಂದು ತಿಳಿಸಿದ್ದಾರೆ.
'ರೈತರು ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ': ತಮ್ಮ ವಿಡಿಯೋ ಪೋಸ್ಟ್ಗೆ, ''ನೇರ ಮಾರಾಟದ ಮೂಲಕ ನಮ್ಮ ಹೋರಾಟ - ನಮ್ಮ ಬೆಳೆಗೆ ನಮ್ಮದೇ ಬೆಲೆ. ಇದು ಬೆಂಗಳೂರಿನ ನಗರವಾಸಿಗಳು ವಾಸಿಸುವ ಬಡಾವಣೆಗಳಲ್ಲಿ ರೈತರು ತಮ್ಮ ಬೆಳೆಗಳಿಗೆ ತಾವೇ ನಿಗದಿಪಡಿಸಿದ ಬೆಲೆಯಲ್ಲಿ ರೈತರೇ ನಿಂತು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಕಾರ್ಯಕ್ರಮವಾಗಿದೆ. ಬೆಂಗಳೂರಿನ ಗ್ರಾಹಕರು ರೈತರಿಂದ ನೇರ ಖರೀದಿ ಮಾಡಬೇಕು. ರೈತರು ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಇದು ನಮ್ಮೆಲ್ಲರ ಜವಾಬ್ದಾರಿ'' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಅದಿತಿ ಪ್ರಭುದೇವ ಪೋಸ್ಟ್: ನಮ್ಮ ಬೆಳೆಗೆ ನಮ್ಮದೇ ಬೆಲೆ - ರೈತ ಸಂತೆ ಇದೇ ಏಪ್ರಿಲ್ 12 ರಿಂದ 14ರವರೆಗೆ ಶ್ರೀ ಮುನಿವೆಂಕಟಯ್ಯ ಸ್ಮಾರಕ ಬಯಲು ಮಂದಿರ, ರಾಜರಾಜೇಶ್ವರಿ ನಗರದಲ್ಲಿ ನಡೆಯಲಿದೆ. ನೇರವಾಗಿ ನಮ್ಮ ರೈತ ಭಾಂದವರು ಬೆಳೆದಂತಹ ಬೆಳೆಯನ್ನು ಗ್ರಾಹಕರಿಗೆ ಮಾರಲಿದ್ದಾರೆ. ಎಲ್ಲರೂ ಬಂದು ಈ ಸಂತೆಯಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಿ. ನಮ್ಮ ರೈತರು ಸೂಕ್ತ ಬೆಲೆ ಸಿಗದೇ ಒದ್ದಾಡುತ್ತಿದ್ದಾರೆ. ಕೇವಲ ಸರ್ಕಾರದ ಕರ್ತವ್ಯವನ್ನು ನೆನೆಯುವುದನ್ನು ಬಿಟ್ಟು ನಾವೆಲ್ಲರೂ ಸೇರಿ ಇಂತಹ ಪ್ರಯೋಗಗಳಿಗೆ ಕೈಜೋಡಿಸೋಣ. ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ. ಜೈ ಅನ್ನದಾತ ಎಂದು ಅದಿತಿ ಪ್ರಭುದೇವ ಇನ್ಸ್ಟಾ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ವಿಡಿಯೋದಲ್ಲಿ ನಟಿ ಹೇಳಿರೋದಿಷ್ಟು: ''ನಾನಿಂದು ಬಹಳ ಮುಖ್ಯವಾದ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಸಾಮಾನ್ಯವಾಗಿ ನಾವು ಹೇಳಿರುತ್ತೇವೆ, ಕೇಳಿರುತ್ತೇವೆ - ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ. ನಮ್ಮ ರೈತ ಬಾಂಧವರೆಲ್ಲ ಕರ್ಮಯೋಗಿಗಳೇನೋ ನಿಜ. ಆದ್ರೆ ನಾವೆಲ್ಲರೂ ಅವರೊಂದಿಗೆ ಎಷ್ಟು ಧರ್ಮದಲ್ಲಿ ನಡೆದುಕೊಳ್ಳುತ್ತಿದ್ದೇವೆ ಅನ್ನೋದು ಒಂದು ದೊಡ್ಡ ಪ್ರಶ್ನೆ. ನಾವು, ಮಾಲ್ ಸೇರಿ ಹಲವೆಡೆ ಡಿಸ್ಕೌಂಟ್ ಕೇಳ್ದೆ ಪೂರ್ತಿ ಬಿಲ್ ಕಟ್ಟಿಬರುತ್ತೇವೆ. ಅದೇ ರೈತರು ತಮ್ಮ ತೋಟದಿಂದ ಹಣ್ಣು ಹಂಪಲು, ತರಕಾರಿಗಳನ್ನು ತಂದು ರಸ್ತೆ ಬದಿಯಲ್ಲಿ ಮಾರಾಟಕ್ಕಿಳಿದರೆ, ನಾವು ಪಕ್ಕಾ ಚೌಕಾಸಿ ಮಾಡುತ್ತೇವೆ. ನಾನು ಈ ಬಗ್ಗೆ ಎಷ್ಟೋ ಬಾರಿ ಪ್ರಶ್ನೆ ಎತ್ತಿದ್ದೇನೆ, ನಮ್ಮ ಮನೆಯವರಲ್ಲೂ ತಿಳಿಸಿದ್ದೇನೆ, ದಯವಿಟ್ಟು ಅಂತಹವರಲ್ಲಿ ಚೌಕಾಸಿ ಮಾಡಬೇಡಿ. ಏಕಂದ್ರೆ, ಅವರಿಗೆ ಅದೇ ಊಟ.
ಇದನ್ನೂ ಓದಿ: ಆಸ್ಕರ್ನಲ್ಲಿ ಮತ್ತೊಮ್ಮೆ RRRಗೆ ಮನ್ನಣೆ: ಪ್ರಶಸ್ತಿಯಲ್ಲಿ ಹೊಸ ವರ್ಗ ಸೇರ್ಪಡೆ, ರಾಜಮೌಳಿ ಹೇಳಿದ್ದಿಷ್ಟು
ರೈತರ ಪರಿಸ್ಥಿತಿ ನೆನಪಿಸಿಕೊಂಡರೆ ನಿಜವಾಗಿಯೂ ಬಹಳ ಬೇಸರ ಆಗುತ್ತದೆ. ರೈತರ ಆತ್ಮಹತ್ಯೆ ವಿಷಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಅನ್ನೋದನ್ನು ನೆನಪಿಸಿಕೊಂಡರೆ ನೋವಾಗುತ್ತದೆ. ಈಗಲೂ ಬೆಲೆ ಇಳಿಕೆ ಆಗಿದೆ. ಸರಿಯಾದ ಬೆಲೆ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ, ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ನಮ್ಮ ಬೆಳೆಗೆ ನಮ್ಮದೇ ಬೆಲೆ. ಸುಮಾರು 150 ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಮಾರಾಟ ಮಾಡಲಿದ್ದಾರೆ. ಈ ಕಾನ್ಸೆಪ್ಟ್ ಬಹಳ ಇಷ್ಟವಾಯಿತು. ಈ ಪ್ರಯೋಗ ಯಶಸ್ವಿ ಆದರೆ, ಖಂಡಿತವಾಗಿಯೂ ನಮಗೂ ಕೂಡಾ ಲಾಭ. ಹಾಗೇನೆ ರೈತ ಬಾಂಧವರಿಗೂ ಕೂಡಾ ಲಾಭ. ದಯವಿಟ್ಟು ಎಲ್ಲರೂ ಬೆಂಬಲಿಸೋಣ. ರೈತ ಬಾಂಧವರೊಟ್ಟಿಗೆ ಬೆರೆಯೋಣ. ಕಷ್ಟ ಸುಖಗಳನ್ನು ಹಂಚಿಕೊಳ್ಳೋಣ. ಅವರು ತರುವ ಆರೋಗ್ಯಕರ ಬೆಳೆಗಳನ್ನು ನಾವೂ ಕೂಡಾ ಖರೀದಿ ಮಾಡೋಣ. ಇಬ್ಬರೂ (ರೈತರು-ಗ್ರಾಹಕರು) ಗೆಲ್ಲೋಣ, ಇಬ್ಬರೂ ಸಂತೋಷ ಮತ್ತು ಸಾಮರಸ್ಯದಿಂದ ಬದುಕೋಣ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಂದು ನಟಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪುತ್ರನ ಆರೋಗ್ಯದಲ್ಲಿ ಚೇತರಿಕೆ: ಅಗ್ನಿ ಅವಘಡದ ಬಳಿಕ ಮಾಹಿತಿ ಹಂಚಿಕೊಂಡ ಚಿರಂಜೀವಿ