ಸ್ಟಾರ್ ನಟರ ಸಿನಿಮಾಗಳ ಕೊರತೆಯ ನಡುವೆ ಚಿತ್ರಮಂದಿರಗಳಿಗೆ ಪ್ರೇಕ್ಷಕ ಪ್ರಭು ಬರುತ್ತಿಲ್ಲ. ವೀಕ್ಷಕರ ಸಂಖ್ಯೆ ಇಳಿಕೆಯಾಗುತ್ತಿದೆ ಎಂಬ ಸೆಲೆಬ್ರಿಟಿಗಳ ಮತ್ತು ಸಿನಿಮಾ ಮಂದಿಯ ಆತಂಕ ಹೆಚ್ಚಾಗುತ್ತಿದೆ. ಈ ಸಮಸ್ಯೆ ಕನ್ನಡಕ್ಕೆ ಮಾತ್ರ ಸೀಮಿತವಲ್ಲ. ಎಲ್ಲಾ ಭಾಷೆಯ ಚಿತ್ರರಂಗಗಳಲ್ಲೂ ಇದೆ.
ಸಿನಿಮಾ ಮಂದಿ ಪ್ರೇಕ್ಷಕರನ್ನು ದೂರುತ್ತಿದ್ದಾರೆಯೇ ಹೊರತು ಸಮಸ್ಯೆಗೆ ಪರಿಹಾರ ಹುಡುಕುತ್ತಿಲ್ಲ. ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿಲ್ಲ ಎಂಬ ಅಸಮಾಧಾನವೂ ಕೇಳಿಬರುತ್ತಿದೆ. ಒಟಿಟಿ, ಡಿಜಿಟಲ್ ಯುಗದಲ್ಲಿ ತಾವಿದ್ದಲ್ಲೇ ಸಿನಿಮಾ ನೋಡುವ ಅವಕಾಶ ಸಿಕ್ಕ ನಂತರವಂತೂ ಥಿಯೇಟರ್ಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬುದು ಹಲವರ ಅಂಬೋಣ.
ಈ ತಿಂಗಳು ಸ್ಯಾಂಡಲ್ವುಡ್ನಲ್ಲಿ ಬಿಗ್ ಬಜೆಟ್ ಪ್ರೊಜೆಕ್ಟ್ಸ್, ಸೂಪರ್ ಸ್ಟಾರ್ಗಳ ಚಿತ್ರಗಳು ರಿಲೀಸ್ ಆಗುತ್ತಿವೆ. ದುನಿಯಾ ವಿಜಯ್ ಅಭಿನಯದ 'ಭೀಮ' ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಕೃಷ್ಣಂ ಪ್ರಣಯ ಸಖಿ' ಮತ್ತು ಕಿರುತೆರೆಯ ಕನ್ನಡತಿ ಸೀರಿಯಲ್ನಿಂದ ಕನ್ನಡಿಗರ ಮನಗೆದ್ದ ಕಿರಣ್ ರಾಜ್ ಬಿಗ್ ಸ್ಕ್ರೀನ್ನಲ್ಲಿ ಮೋಡಿ ಮಾಡಲು ರೆಡಿಯಾಗಿರುವ 'ರಾನಿ' ನಿರೀಕ್ಷೆ ಹುಟ್ಟಿಸಿದೆ.
ಈ ನಡಜುವೆ 'ರಾನಿ' ತಂಡ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ವಿಭಿನ್ನ ಪ್ರಯತ್ನ ಮಾಡುತ್ತಿದೆ. ಚಿತ್ರದ ನಾಯಕ ಕಿರಣ್ ರಾಜ್ ಖಾಲಿ ಇರುವ ಚಿತ್ರ ಮಂದಿರದೊಳಗೆ ಒಂದು ವಿಶೇಷ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಪ್ರೇಕ್ಷಕರು ಏಕೆ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಬೇಕು ಎಂಬುದಕ್ಕೆ ಕೆಲವು ಅರ್ಥಪೂರ್ಣ ಉದಾಹರಣೆಗಳನ್ನು ನೀಡಿದ್ದಾರೆ.
ಚಿತ್ರಮಂದಿರಗಳಿಗೆ ಬನ್ನಿ: ವಿಶೇಷ ವಿಡಿಯೋದಲ್ಲಿ ಮಾತನಾಡಿರುವ ಕಿರಣ್ ರಾಜ್, "ಡಾ.ರಾಜ್ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್, ದ್ವಾರಕೀಶ್, ಎಂ.ಶಂಕರ್, ಪ್ರಭಾಕರ್, ಅನಂತ್ ನಾಗ್, ರವಿಚಂದ್ರನ್ ಅಂತಹ ದಿಗ್ಗಜರು ಕಟ್ಟಿ ಬೆಳೆಸಿರುವ ಕನ್ನಡ ಚಿತ್ರರಂಗವನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ" ಎನ್ನುತ್ತಾ, ''ಖಾಲಿ ಖಾಲಿ. ಥಿಯೇಟರ್ಗಳೆಲ್ಲಾ ಖಾಲಿ. ಹಾಗಾದ್ರೆ ಜನ ಸಿನಿಮಾ ನೋಡ್ತಿಲ್ವಾ?. ನೋಡುತ್ತಿದ್ದಾರೆ! ಒಟಿಟಿ, ಡಿಜಿಟಲ್ ಪ್ಲ್ಯಾಟ್ಫಾರ್ಮ್ಗಳಲ್ಲಿ, ಟಿವಿಯಲ್ಲಿ. ಕೈಯಲ್ಲಿ ಮೊಬೈಲ್, ಮನೆಯಲ್ಲಿ ಟಿವಿ ಇದೆ. ಮನೆಯಲ್ಲಿ ದೇವರ ಕೋಣೆ, ಫೋಟೋಗಳಿರುತ್ತೆ. ಆದ್ರೂ ಮನಸ್ಸಿಗೆ ಹೆಚ್ಚಿನ ನೆಮ್ಮದಿ, ಖುಷಿ ಬೇಕೆಂದಾಗ ದೇವಸ್ಥಾನಗಳಿಗೆ ಹೋಗುತ್ತೇವೆ. ಮನೆಯಲ್ಲಿ ಅಡುಗೆ, ಊಟ ಮಾಡ್ತೇವೆ. ಆದ್ರೂ ಫ್ಯಾಮಿಲಿ ಜೊತೆ ವಾರಕ್ಕೋ ತಿಂಗಳಿಗೋ ಒಮ್ಮೆಯಾದ್ರೂ ಹೊರಗೆ ಹೋಗೇ ಹೋಗುತ್ತೇವೆ. ಸಿನಿಮಾವನ್ನು ಥಿಯೇಟರ್ನಲ್ಲೇ ಏಕೆ ನೋಡಬೇಕು? ಥಿಯೇಟರ್ ಎಕ್ಸ್ಪೀರಿನ್ಸ್''.
''ಅದೇ ಮನೆಯಲ್ಲಿ ಪೂಜೆ ಮಾಡೋದಕ್ಕೂ, ದೇವಸ್ಥಾನದಲ್ಲಿ ಪೂಜೆ ಮಾಡೋದಕ್ಕೂ ಇರೋ ವ್ಯತ್ಯಾಸ. ಈ ಅನುಭವ ನಿಮಗೂ ಆಗಿರುತ್ತೆ. ಫ್ರೆಂಡ್ಸ್ ಜೊತೆ ಸಿನಿಮಾ ನೋಡೋ ಮಜಾ ಮನೇಲಿ ಸಿಗುತ್ತಾ? ಅಥವಾ ಒಬ್ಬ ಫ್ಯಾನ್ ಆಗಿ ನಿಮ್ಮ ಮೆಚ್ಚಿನ ನಟನನ್ನು ನೋಡ್ಡಾಗ ಮನೇಲಿ ವಿಶುವಲ್ ಹೊಡೆಯೋಕೆ ಆಗುತ್ತಾ?. ಫ್ಯಾಮಿಲಿ ಜೊತೆ ಎಮೋಶನಲಿ ಸಿನಿಮಾಗೆ ಕನೆಕ್ಟ್ ಆಗೋಕೆ ಮನೇಲಿ ಆಗುತ್ತಾ? ನಿಮ್ಗೆ ಸಿನಿಮಾ ನೋಡೋದ್ರಿಂದ ಮನೋರಂಜನೆ ಮಾತ್ರ. ನನ್ನಂತ ಸಿನಿಮಾ ಕಾರ್ಮಿಕರಿಗೆ ಇದೇ ಬದುಕು. ಒಂದೊಳ್ಳೆ ಸಿನಿಮಾ ಮಾಡಲು ಶಕ್ತಿ ಪ್ರೇರಣೆ ಅಂದ್ರೆ ಅದು ನೀವು ಥಿಯೇಟರ್ಗೆ ಬಂದು ಸಿನಿಮಾ ನೋಡೋದು. ಅದನ್ನು ಬಿಟ್ಟರೆ ನಮಗೆ ಬೇರೆ ಯಾವ ಶಕ್ತಿ ಪ್ರೇರಣೆಯೂ ಇಲ್ಲ. ಆದ್ರೆ ಪರಿಸ್ಥಿತಿ ಹೀಗಿದೆ. ಪ್ರೇಕ್ಷಕರ ಕೊರತೆ ಇದೆ. ಆ ವೈಭವದ ದಿನಗಳು ಮತ್ತೆ ಬಂದೇ ಬರುತ್ತೆ. ಒಳ್ಳೆ ಸಿನಿಮಾಗಳೂ ಬರುತ್ತೆ. ನಮ್ಮ ಹಿರಿಯರು ಕಷ್ಟಪಟ್ಟು ಈ ಒಂದು ಚಿತ್ರರಂಗ ಬೆಳೆಸಿದ್ದಾರೆ. ಅದನ್ನು ಕಾಪಾಡಿಕೊಳ್ಳೋದು, ಉಳಿಸೋದು ನಮ್ಮ ಜವಾಬ್ದಾರಿ''.
''ಹಾಯ್ ನಾನು ಕಿರಣ್ ರಾಜ್. ನಾನು ಪ್ರಾಮಿಸ್ ಮಾಡುತ್ತಿದ್ದೇನೆ - ನಾನು ಮಾಡೋ ಪ್ರತೀ ಕೆಲಸ, ನಾನಿಡೋ ಪ್ರತೀ ಹೆಜ್ಜೆ, ನಮ್ಮ ಇಂಡಸ್ಟ್ರಿ ಬೆಳವಣಿಗೆಯ ಪೂರಕವಾಗಿರುತ್ತದೆ'' - ನಟ ಕಿರಣ್ ರಾಜ್.
ಇದನ್ನೂ ಓದಿ: ವಯನಾಡು ಭಯಾನಕ ಭೂಕುಸಿತಕ್ಕೆ ಮಿಡಿದ ನಟ ಪ್ರಭಾಸ್: 2 ಕೋಟಿ ರೂ. ನೆರವು - Prabhas Donation
'ಬಡ್ಡೀಸ್' ಬಳಿಕ ಕಿರಣ್ ರಾಜ್ 'ರಾನಿ' ಎಂಬ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಜೊತೆಗೆ ಲವ್ ಸ್ಟೋರಿ ಇರುವ ಸಿನಿಮಾ. ರವಿಶಂಕರ್, ಮೈಕೋ ನಾಗರಾಜ್, ನಾಗತಿಹಳ್ಳಿ ಚಂದ್ರಶೇಖರ್, ಬಿ.ಸುರೇಶ್, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಪೃಥ್ವಿರಾಜ್, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಅನಿಲ್, ಧರ್ಮೇಂದ್ರ ಅರಸ್, ಮನಮೋಹನ ರೈ ಸೇರಿದಂತೆ ಮೊದಲಾದವರು ನಟಿಸಿದ್ದಾರೆ.
ಪ್ರಮೋದ್ ಮರವಂತೆ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಮಣಿಕಾಂತ್ ಕದ್ರಿ ಟ್ಯೂನ್ ಹಾಕಿದ್ದಾರೆ. ಚಂದ್ರಕಾಂತ್ ಪೂಜಾರಿ ಉಮೇಶ ಹೆಗ್ಡೆ ನಿರ್ಮಾಣದ ಈ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದು, ಇದೇ ತಿಂಗಳ 30ಕ್ಕೆ ರಾನಿ ಚಿತ್ರಮಂದಿರ ಪ್ರವೇಶಿಸಲಿದೆ.
ಇದನ್ನೂ ಓದಿ: 'ನಾನು ಭೂಮಿ ಮೇಲಿನ ಅದೃಷ್ಟಶಾಲಿ': ಚಿಯಾನ್ ವಿಕ್ರಮ್ ಭೇಟಿಯಾದ ಖುಷಿಯಲ್ಲಿ ರಿಷಬ್ ಶೆಟ್ಟಿ - Rishab on Chiyaan Vikram