ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ಅವರು 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಬಗ್ಗೆ ಮಾಡಿದ್ದ ಟೀಕೆಗೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅಕ್ಷಯ್ ಮತ್ತು ಭೂಮಿ ಪೆಡ್ನೇಕರ್ ನಟನೆಯ 2017ರ ಚಿತ್ರದ ಶೀರ್ಷಿಕೆಗೆ ಜಯಾ ಬಚ್ಚನ್ ಕಾರ್ಯಕ್ರಮವೊಂದರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ, ಮುಂಬೈನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ 'ಕೇಸರಿ:ಅಧ್ಯಾಯ 2'ರ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರ ಪ್ರಶ್ನೆಗೆ ಅಕ್ಷಯ್ ಪ್ರತಿಕ್ರಿಯಿಸಿದ್ದಾರೆ. ಈ ಚಿತ್ರದ ಶೀರ್ಷಿಕೆಯನ್ನು ಬೆಂಬಲಿಸುವುದಿಲ್ಲ ಎಂದಿದ್ದ ಜಯಾ 'ಫ್ಲಾಪ್' ಎಂದು ಕರೆದಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್, ''ಅಂತಹ ಸಿನಿಮಾಗಳನ್ನು ಟೀಕಿಸುತ್ತಾರೆಂದು ನನಗನಿಸುವುದಿಲ್ಲ. ಒಂದು ವೇಳೆ ಟೀಕೆ ಮಾಡಿದ್ದರೆ ಅವರು ಮೂರ್ಖರೇ ಆಗಿರಬೇಕು. ನಾನು ಪ್ಯಾಡ್ ಮ್ಯಾನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಏರ್ಲಿಫ್ಟ್, ಕೇಸರಿ, ಕೇಸರಿ 2ನಂತಹ ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಇಂಥ ಚಿತ್ರಗಳನ್ನು ಟೀಕಿಸುವವರು ಖಂಡಿತಾ ಮೂರ್ಖರೇ ಆಗಿರಬೇಕು. ಆ ಚಿತ್ರಗಳು ಪ್ರೇಕ್ಷಕರಿಗೆ ಸಾಕಷ್ಟು ಸಂದೇಶಗಳನ್ನು ಒದಗಿಸಿವೆ'' ಎಂದು ತಿಳಿಸಿದ್ದಾರೆ.
''ಅವರು ಹಾಗೆ ಹೇಳಿದ್ದರೆ, ಅವರು ಹೇಳಿದ್ದು ಸರಿ'': ಈ ವೇಳೆ ಮಾಧ್ಯಮದವರು ಹಿರಿಯ ನಟಿ ಜಯಾ ಬಚ್ಚನ್ ಹೇಳಿಕೆ ಬಗ್ಗೆ ನಟನಲ್ಲಿ ಕೇಳಿದರು. ಪ್ರತಿಕ್ರಿಯಿಸಿದ ನಟ, "ಅವರು ಹಾಗೆ ಹೇಳಿದ್ದರೆ, ಅವರು ಹೇಳಿದ್ದು ಸರಿ. ನಾನು ಅಂಥ ಸಿನಿಮಾ ಮಾಡುವ ಮೂಲಕ ತಪ್ಪು ಮಾಡಿದ್ದರೆ, ಅವರು ಸರಿ ಇರಬಹುದು" ಎಂದು ತಿಳಿಸಿದರು. ನಟನ ಗೌರವಯುತ ಪ್ರತಿಕ್ರಿಯೆ ಆನ್‌ಲೈನ್‌ನಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
'ಇದು ಒಂದು ಶೀರ್ಷಿಕೆಯೇ'? ಎಂದು ಪ್ರಶ್ನಿಸಿದ್ದ ಜಯಾ ಬಚ್ಚನ್: ತಮ್ಮ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುವುದಕ್ಕೆ ಹೆಸರುವಾಸಿಯಾಗಿರುವ ಜಯಾ ಬಚ್ಚನ್, ಈ ವರ್ಷಾರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದರು. ಶೀರ್ಷಿಕೆಯ ಆಯ್ಕೆಯನ್ನು ಪ್ರಶ್ನಿಸಿದ್ದ ಹಿರಿಯ ನಟಿ, "ಚಿತ್ರದ ಶೀರ್ಷಿಕೆಯನ್ನು ನೋಡಿ. ಅಂಥಹ ಹೆಸರಿನ ಚಿತ್ರವನ್ನು ನಾನೆಂದಿಗೂ ನೋಡಲು ಹೋಗುವುದಿಲ್ಲ. ಯೇ ಕೋಯಿ ನಾಮ್ ಹೈ? (ಇದು ಒಂದು ಶೀರ್ಷಿಕೆಯೇ)" ಎಂದು ಪ್ರಶ್ನಿಸಿದ್ದರು. ನಂತರ ಅವರು ಹಾಸ್ಯಮಯವಾಗಿ ಪ್ರೇಕ್ಷಕರಲ್ಲಿ ಅಂತಹ ಹೆಸರಿನ ಚಿತ್ರವನ್ನು ನೋಡಲು ನೀವು ಮುಂದಾಗುತ್ತೀರಾ ಎಂದು ಕೇಳಿದ್ದರು. ಕೆಲವರಷ್ಟೇ ಕೈ ಎತ್ತಿದಾಗ, ಜಯಾ "ಯೇ ತೋ ಫ್ಲಾಪ್ ಹೈ" ಎಂದು ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: 'ರೈತರು ಉಳಿದರೆ ಮಾತ್ರ ನಾವು ಉಳಿಯೋದು': ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕೆ ಅದಿತಿ, ಡಾಲಿ ಬೆಂಬಲ
'ಟಾಯ್ಲೆಟ್: ಏಕ್ ಪ್ರೇಮ್ ಕಥಾ' 2017ರ ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ತೆರೆಕಂಡು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿತ್ತು. ಜೊತೆಗೆ, ಬಾಕ್ಸ್ ಆಫೀಸ್ನಲ್ಲೂ ಯಶಕಂಡಿತ್ತು. ಈ ಚಿತ್ರ ಗ್ರಾಮೀಣ ಭಾರತದಲ್ಲಿ ಬಯಲು ಮಲವಿಸರ್ಜನೆ ಮತ್ತು ನೈರ್ಮಲ್ಯದ ವಿಷಯದ ಸುತ್ತ ಸುತ್ತುತ್ತದೆ. ಜೊತೆಗೆ ಪ್ರೇಮಕಥೆಯೂ ಇದೆ. ನಾಯಕ ನಟ ಅಕ್ಷಯ್ ಕುಮಾರ್ ತನ್ನ ಪತ್ನಿ ಜಯಾ (ಭೂಮಿ ಪೆಡ್ನೇಕರ್ ನಿರ್ವಹಿಸಿದ ಪಾತ್ರ)ಗಾಗಿ ಶೌಚಾಲಯವನ್ನು ನಿರ್ಮಿಸುವ ಸಲುವಾಗಿ ಸಂಪ್ರದಾಯದ ಮೊಂಡುತನದ ವಿರುದ್ಧ ಹೋರಾಡುವ ಸಣ್ಣ ಪಟ್ಟಣದ ವ್ಯಕ್ತಿ ಕೇಶವ್ ಪಾತ್ರವನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪುತ್ರನ ಆರೋಗ್ಯದಲ್ಲಿ ಚೇತರಿಕೆ: ಅಗ್ನಿ ಅವಘಡದ ಬಳಿಕ ಮಾಹಿತಿ ಹಂಚಿಕೊಂಡ ಚಿರಂಜೀವಿ
ಜಯಾ ಅವರ ಹೇಳಿಕೆಗಳಿಗೆ ನಿರ್ಮಾಪಕಿ ಪ್ರೇರಣಾ ಅರೋರಾ ಕೂಡಾ ಪ್ರತಿಕ್ರಿಯಿಸಿದ್ದಾರೆ. "ಟಾಯ್ಲೆಟ್: ಏಕ್ ಪ್ರೇಮ್ ಕಥಾ ಶೀರ್ಷಿಕೆ ಸೂಕ್ತವಲ್ಲ ಎಂದು ಜಯಾ ಜಿ ಭಾವಿಸಿದ್ದಕ್ಕಾಗಿ ನಾನು ಅವರಲ್ಲಿ ಒಮ್ಮೆ ಸಿನಿಮಾ ವೀಕ್ಷಿಸಲು ವಿನಂತಿಸುತ್ತೇನೆ. ಅವರು ಬಹಳ ಹಿರಿಯರು ಮತ್ತು ಅವರು ಸ್ವತಃ ಒಂದು ದೊಡ್ಡ ಸಂಸ್ಥೆ. ಹಾಗಾಗಿ, ಅವರು ಸ್ವಲ್ಪ ಸಮಯ ನೀಡಿ ಈ ಚಿತ್ರವನ್ನು ವೀಕ್ಷಿಸಿದರೆ ಬಹಳ ಒಳ್ಳೆಯದು. ಅಲ್ಲದೇ, ಇದು ಅಕ್ಷಯ್ ಸರ್ ಅವರ ಅತ್ಯುತ್ತಮ ಚಿತ್ರ" ಎಂದು ತಿಳಿಸಿದ್ದರು.