ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಅವರು ಮೋಹನ್ ಲಾಲ್ ಮುಖ್ಯಭೂಮಿಕೆಯ 'ಎಲ್2: ಎಂಪುರಾನ್' ತಂಡಕ್ಕೆ ಶುಭ ಹಾರೈಸಿದ್ದಾರೆ. ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಚಿತ್ರವು ಗಡಿ ಮೀರಿ ಯಶಸ್ಸು ಕಾಣುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಹೆಮ್ಮೆ ತರಲಿದೆ ಎಂದು ನಂಬಿದ್ದಾರೆ.
"ಎಂಪುರಾನ್ ಚಿತ್ರದ ಐತಿಹಾಸಿಕ ಗೆಲುವಿಗಾಗಿ ಇಡೀ ಚಿತ್ರತಂಡಕ್ಕೆ ಬೆಸ್ಟ್ ವಿಶಸ್, ಇದು ಪ್ರಪಂಚದಾದ್ಯಂತದ ಗಡಿಗಳನ್ನು ದಾಟಿ ಇಡೀ ಮಲಯಾಳಂ ಚಿತ್ರೋದ್ಯಮವನ್ನು ಹೆಮ್ಮೆಪಡುವಂತೆ ಮಾಡುತ್ತದೆ ಎಂದು ಆಶಿಸುತ್ತೇನೆ. ಡಿಯರ್ ಲಾಲ್ ಹಾಗೂ ಪೃಥ್ವಿ, ರೂಟಿಂಗ್ ಫಾರ್ ಯು" ಎಂದು ಮಮ್ಮುಟ್ಟಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
Best wishes to the entire cast and crew of #Empuraan for a historic victory! Hope it crosses boundaries across the world and makes the entire Malayalam industry proud. Rooting for you, Dear Lal and Prithvi 😊 pic.twitter.com/ipPJ7SNO67
— Mammootty (@mammukka) March 26, 2025
ಮಮ್ಮುಟ್ಟಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಚಿತ್ರದ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್, "ಏನೂ ಇಲ್ಲ, ಮಲಯಾಳಂ ಚಿತ್ರರಂಗದ ಹಿರಿಯರ ಶುಭಹಾರೈಕೆಗಳಿಗಿಂತ ವಿಶೇಷವಾದದ್ದೇನೂ ಇಲ್ಲ! ಧನ್ಯವಾದಗಳು ಮಮ್ಮುಟ್ಟಿ" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಮಮ್ಮುಟ್ಟಿ ಮತ್ತು ಮೋಹನ್ಲಾಲ್ ಹಲವು ವರ್ಷಗಳಿಂದ ಆಪ್ತ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಮಾಲಿವುಡ್ನ ಸಹೋದ್ಯೋಗಿಗಳು. ಇತ್ತೀಚೆಗೆ, ಮೋಹನ್ ಲಾಲ್ ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಮ್ಮುಟ್ಟಿ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದರು. ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ, ಅವರು ಮಮ್ಮುಟ್ಟಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದು ಆರಂಭದಲ್ಲಿ ಖಾಸಗಿಯಾಗಿತ್ತು. ಆದ್ರೆ ದೇವಸ್ಥಾನಕ್ಕೆ ಸಂಬಂಧಿಸಿದ ರಶೀದಿಯ ಫೋಟೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ, ಸಖತ್ ಸುದ್ದಿಯಾಯ್ತು. ವ್ಯಾಪಕವಾಗಿ ವೈರಲ್ ಆಗಿ, ಅಭಿಮಾನಿಗಳಿಂದ ಪ್ರೀತಿ ಸ್ವೀಕರಿಸಿತು.
ನಂತರ ಈ ಬಗ್ಗೆ ಮಾತನಾಡಿದ ಮೋಹನ್ ಲಾಲ್, "ನಾವು 45 ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. 55ಕ್ಕೂ ಹೆಚ್ಚು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೇವೆ. ಅವರು ನನಗೆ ಸಹೋದರನಂತೆ. ನಮ್ಮ ಕುಟುಂಬಗಳು ಕೂಡಾ ಬಹಳ ಆತ್ಮೀಯವಾಗಿವೆ. ನಾನು ಶಬರಿಮಲೆಯಲ್ಲಿದ್ದಾಗ, ಅವರ ಬಗ್ಗೆ ಯೋಚಿಸಿದೆ ಮತ್ತು ಅವರಿಗಾಗಿ ಪ್ರಾರ್ಥಿಸಿದೆ" ಎಂದು ತಿಳಿಸಿದರು.
ಇದನ್ನೂ ಓದಿ: 'ಎಂಪುರಾನ್' ದಾಖಲೆ: 1 ಮಿಲಿಯನ್ ಅಡ್ವಾನ್ಸ್ ಟಿಕೆಟ್ಸ್ ಮಾರಾಟ ಮಾಡಿದ ಮೊದಲ ಮಲಯಾಳಂ ಸಿನಿಮಾ
ಮೋಹನ್ ಲಾಲ್ ಅವರ ಎಂಪುರಾನ್ 2019ರ ಬ್ಲಾಕ್ಬಸ್ಟರ್ ಲೂಸಿಫರ್ನ ಮುಂದುವರಿದ ಭಾಗವಾಗಿದ್ದು, ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಚೊಚ್ಚಲ ಚಿತ್ರ. ಲೂಸಿಫರ್ ಅಭೂತಪೂರ್ವ ಯಶಸ್ಸು ಕಂಡು, ವಿಶ್ವದಾದ್ಯಂತ 200 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದ ಮಲಯಾಳಂ ಚಿತ್ರವಾಗಿ ಹೊರಹೊಮ್ಮಿತು. ಇದರ ಮುಂದಿನ ಭಾಗ ನಾಳೆ (ಮಾರ್ಚ್ 27, 2025)ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಅಭಿಮಾನಿಗಳ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲೇ ಇವೆ.
ಇದನ್ನೂ ಓದಿ: 'ಸಿಕಂದರ್' ಅಡ್ವಾನ್ಸ್ ಬುಕಿಂಗ್: 6 ಕೋಟಿಗೂ ಹೆಚ್ಚಿನ ವ್ಯವಹಾರ, ಭಾನುವಾರ ಸಿನಿಮಾ ಬಿಡುಗಡೆ
ಚಿತ್ರವನ್ನು ಆಂಥೋನಿ ಪೆರುಂಬವೂರ್ ಅವರ ಆಶೀರ್ವಾದ್ ಸಿನಿಮಾಸ್, ಲೈಕಾ ಪ್ರೊಡಕ್ಷನ್ಸ್ ಮತ್ತು ಶ್ರೀ ಗೋಕುಲಂ ಮೂವೀಸ್ ಜಂಟಿಯಾಗಿ ನಿರ್ಮಿಸಿವೆ. ಮುರಳಿ ಗೋಪಿ ಬರೆದಿರುವ ಈ ಚಿತ್ರಕ್ಕೆ ದೀಪಕ್ ದೇವ್ ಸಂಗೀತ, ಸುಜಿತ್ ವಾಸುದೇವ್ ಛಾಯಾಗ್ರಹಣ ಮತ್ತು ಅಖಿಲೇಶ್ ಮೋಹನ್ ಸಂಕಲನವಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಚಿತ್ರದಲ್ಲಿ ಟೋವಿನೋ ಥಾಮಸ್, ಮಂಜು ವಾರಿಯರ್, ಸೂರಜ್ ವೆಂಜರಮೂಡು, ಪೃಥ್ವಿರಾಜ್ ಸುಕುಮಾರನ್, ನಿಖತ್ ಖಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂ, ತೆಲುಗು, ಹಿಂದಿ, ಕನ್ನಡ ಮತ್ತು ತಮಿಳು ಸೇರಿದಂತೆ ಬಹು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.