ವಾಷಿಂಗ್ಟನ್(ಅಮೆರಿಕ): ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಸುಂಕ ಯುದ್ಧ ಸಾರಿರುವ ಅಮೆರಿಕವು ಅಲ್ಪ ವಿನಾಯಿತಿಯನ್ನೂ ಘೋಷಿಸಿದೆ. ಸ್ಮಾರ್ಟ್ಫೋನ್, ಲ್ಯಾಪ್ಟಾಪ್ ಸೇರಿದಂತೆ ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಪ್ರತಿ ಸುಂಕದಿಂದ ಹೊರಗಿಡುವುದಾಗಿ ತಿಳಿಸಿದೆ.
ಅಮೆರಿಕದಲ್ಲಿ ತಯಾರಾಗದ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಈ ಸುಂಕ ನಿಯಮ ಅನ್ವಯಿಸುವುದಿಲ್ಲ. ಇದು ಗ್ರಾಹಕರ ಮೇಲೆ ಬೀಳುವ ಹೆಚ್ಚಿನ ಹೊರೆ ತಗ್ಗಿಸಲು ಡೊನಾಲ್ಡ್ ಟ್ರಂಪ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ವಿನಾಯಿತಿಯಿಂದ ಎಲೆಕ್ಟ್ರಾನಿಕ್ ಕಂಪನಿಗಳಾದ ಆ್ಯಪಲ್, ಸ್ಯಾಮ್‌ಸಂಗ್, ಎನ್‌ವಿಡಿಯಾದಂತಹ (Nvidia) ಚಿಪ್ ತಯಾರಿಕಾ ಕಂಪನಿಗಳು ತೆರಿಗೆ ಹೊಡೆತದಿಂದ ತಪ್ಪಿಸಿಕೊಳ್ಳಲಿವೆ.
ಪ್ರತಿ ಸುಂಕದಿಂದ ಹೊರಗಿಡಲಾದ ಉತ್ಪನ್ನಗಳ ಪಟ್ಟಿಯನ್ನು ಅಮೆರಿಕದ ಸುಂಕ ಹಾಗೂ ಗಡಿ ಭದ್ರತಾ ಇಲಾಖೆ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಮೊಡೆಮ್ ರೂಟರ್, ಫ್ಲ್ಯಾಶ್ಡ್ರೈವ್ ಹಾಗೂ ತಂತ್ರಜ್ಞಾನ ಉತ್ಪನ್ನಗಳು ಇದರಲ್ಲಿ ಸೇರಿವೆ. ಇವುಗಳಲ್ಲಿ ಹೆಚ್ಚಿನವನ್ನು ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡುವುದಿಲ್ಲ.
ಚೀನಾದ ಮೇಲೆ ಪ್ರತಿ ಸುಂಕ ಮುಂದುವರಿಕೆ: ಚೀನಾದಿಂದ ಆಮದಾಗುವ ವಸ್ತುಗಳ ಮೇಲಿನ ಶೇಕಡಾ 145ರಷ್ಟು ಪ್ರತಿ ಸುಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಸೂಚಿತ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳಿಗೆ ಅನ್ವಯಿಸುವುದಿಲ್ಲ. ತೆರಿಗೆ ಏರಿಕೆಗಿಂತ ಮೊದಲಿದ್ದ ಆಮದು ನಿಯಮಗಳು ಆ ವಸ್ತುಗಳ ಮೇಲೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಂಕ ಏರಿಕೆಗೆ ಬೆದರಿದ್ದ ಮೊಬೈಲ್ ಕಂಪನಿಗಳು: ಟ್ರಂಪ್ ಸರ್ಕಾರ ಚೀನಾದ ಮೇಲೆ ಅತ್ಯಧಿಕ ಸುಂಕ ಹೇರಿದ ಬೆನ್ನಲ್ಲೇ, ವಿಶ್ವದ ವಿವಿಧ ದೇಶಗಳಲ್ಲಿ ಮೊಬೈಲ್ ಫೋನ್ಗಳನ್ನು ಉತ್ಪಾದಿಸುವ ಕಂಪನಿಗಳು ತೆರಿಗೆ ಹೊಡೆತದಿಂದ ನಷ್ಟಕ್ಕೀಡಾಗುವ ಭೀತಿ ಎದುರಿಸಿದ್ದವು. ಇದರಿಂದ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆ ಹೆಚ್ಚಿಸಿ ಅವುಗಳನ್ನು ಹೊಸ ಸುಂಕ ಜಾರಿಯಾಗುವ ಮೊದಲೇ ಅಮೆರಿಕಕ್ಕೆ ಕೊಂಡೊಯ್ದಿವೆ.
ಮಾಹಿತಿ ಪ್ರಕಾರ, ಅತಿಹೆಚ್ಚು ಬೇಡಿಕೆಯುಳ್ಳ ಆ್ಯಪಲ್ ಕಂಪನಿಯ 15 ಲಕ್ಷ ಐಫೋನ್ಗಳನ್ನು ಕಳೆದ ವಾರ ಭಾರತದಿಂದ ಅಮೆರಿಕಕ್ಕೆ ರವಾನಿಸಲಾಗಿದೆ. ಕಂಪನಿಯು ಹೆಚ್ಚಿನ ತೆರಿಗೆಯನ್ನು ತಪ್ಪಿಸಿಕೊಳ್ಳಲು 6 ವಿಮಾನಗಳಲ್ಲಿ 600 ಟನ್ ತೂಕದಷ್ಟು ಐಫೋನ್ಗಳನ್ನು ಸಾಗಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ಚೀನಾ ವಸ್ತುಗಳ ಮೇಲೆ ಅಮೆರಿಕ ಶೇ.125ರಷ್ಟು ಸುಂಕ: ಆಮದುದಾರರು ಮತ್ತು ಅಗ್ಗದ ಸರಕುಗಳ ಮೇಲಾಗುವ ಪರಿಣಾಮಗಳೇನು?
ಅಮೆರಿಕದ ಸರಕುಗಳ ಮೇಲೆ 125ರಷ್ಟು ಪ್ರತಿಸುಂಕ: ನಾಳೆಯಿಂದಲೇ ಜಾರಿ, ನಾವು ಬಗ್ಗಲ್ಲ- ಜಗ್ಗಲ್ಲ ಎಂದ ಚೀನಾ