ಬೆಂಗಳೂರು: ಅನೇಕರ ಬದುಕಿನ ಮಹತ್ವದ ಕನಸುಗಳಲ್ಲಿ ಒಂದು ಸ್ವಂತ ಮನೆ ಕಟ್ಟುವುದು ಇಲ್ಲವೇ ಪ್ಲಾಟ್ ಅಥವಾ ಸ್ವಂತ ನಿವೇಶನ ಹೊಂದುವುದು. ಇದಕ್ಕಾಗಿ ತಮ್ಮ ಜೀವಮಾನದ ಸಂಪಾದನೆಯನ್ನು ಅವರು ಕೂಡಿಡುತ್ತಾರೆ. ಈ ರೀತಿ ಕಷ್ಟಪಟ್ಟು ಖರೀದಿಸಿದ ಆಸ್ತಿಗಳಲ್ಲಿ ಅನೇಕ ಬಾರಿ ವಂಚನೆಗೆ ಒಳಗಾಗಿರುವ ಸಾಕಷ್ಟು ನಿದರ್ಶನಗಳಿವೆ. ಆಸ್ತಿ ಖರೀದಿಗೆ ಮುನ್ನ ಸರಿಯಾದ ದಾಖಲಾತಿ ಪರಿಶೀಲನೆ ನಡೆಸದೇ ಇರುವುದು ಇದಕ್ಕೆ ಪ್ರಮುಖ ಕಾರಣ.
ಆಸ್ತಿ ಕೊಳ್ಳುವಾಗಿನ ಉತ್ಸಾಹವನ್ನು ಅವುಗಳ ದಾಖಲೆ ಪರಿಶೀಲನೆ ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿ ಪಡೆಯುವಲ್ಲಿ ಹೊಂದುವುದು ಕೂಡಾ ಅತೀ ಅಗತ್ಯ. ಹಾಗಾದರೆ ಬನ್ನಿ, ಆಸ್ತಿ ಖರೀದಿಸುವ ಮುನ್ನ ಗಮನಿಸಬೇಕಿರುವ ಅಂಶಗಳೇನು ಎಂಬುದನ್ನು ತಿಳಿಯೋಣ.
ನೋಂದಣಿ: ಸ್ಥಿರಾಸ್ತಿ ಹೆಸರಿಗೆ ವರ್ಗಾಯಿಸಲಾಗಿದೆ ಎಂಬುದನ್ನು ದೃಢೀಕರಿಸುವ ಪ್ರಕ್ರಿಯೆಯೇ ನೋಂದಣಿ. ನೋಂದಣಿ ಕಾರ್ಯ ಉಪ ನೋಂದಣಿ ಕಚೇರಿಗಳಲ್ಲಿ ಮಾಡಲಾಗುತ್ತದೆ. ಇದು ಆಸ್ತಿ ಹಕ್ಕಿನ ದಾಖಲೆಯೂ ಆಗುತ್ತದೆ. ನೋಂದಣಿಗೆ ಮುನ್ನ ಛಾಪಾ ಕಾಗದದ ಮೇಲೆ ಕರಡುಪ್ರತಿ ಸಿದ್ಧಪಡಿಸಬೇಕು. ಮೂಲ ಹಕ್ಕುಪತ್ರ, ಹಿಂದಿನ ದಾಖಲೆಗಳು, ಆಸ್ತಿ, ಮನೆ ತೆರಿಗೆ ರಸೀದಿಗಳು ಹಾಗೂ ಇಬ್ಬರು ಸಾಕ್ಷಿಗಳು ನೋಂದಣಿ ವೇಳೆ ಅಗತ್ಯ.
ಮುದ್ರಾಂಕ ಶುಲ್ಕ: ಮುದ್ರಾಂಕ ಶುಲ್ಕವನ್ನು ಪಾವತಿಸಿದ ಬಳಿಕ ಭೂ ದಾಖಲೆಗಳು ಅಧಿಕೃತ ಮಾನ್ಯತೆ ಪಡೆದಿರುತ್ತದೆ. ಕೋರ್ಟ್ ಹಾಗೂ ಕಚೇರಿಯಲ್ಲೂ ಸ್ವೀಕೃತವಾಗುವುದು.
ಜಮೀನಿನ ಅಳತೆ: ಜಮೀನು ಖರೀದಿ ಮಾಡಿದ ಮೇಲೆ ಅದನ್ನು ನೋಂದಣಿ ಮಾಡಿಸುವ ಮುನ್ನ ಅಳತೆ ಮಾಡಿಸುವುದು ಸೂಕ್ತ. ನೋಂದಾಯಿತ ಸರ್ವೇಯರ್‌ಗಳ ಮೂಲಕ ಅಳತೆ ಮಾಡಿಸಿಕೊಳ್ಳಬೇಕು. ಗಡಿಯಂಚು ಹಾಗೂ ನಿವೇಶನ ಅಳತೆ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಕರಾರು ಪತ್ರ: ಜಮೀನು ಮಾರಾಟ ಮಾಡುವವರು ಹಾಗೂ ಖರೀದಿಸುವವರ ನಡುವೆ ದಾಖಲೆಗಳು ಹಾಗೂ ಹಣಕಾಸಿನ ಮಾತುಕತೆ ನಡೆದ ನಂತರ ಕರಾರು ಸಿದ್ಧಪಡಿಸಬೇಕು. ಕರಾರಿನಂತೆ ಆಸ್ತಿ ಮಾರಾಟಗಾರರು ಮಾತುಕತೆ ನಡೆಸಿದ ಬಳಿಕ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡದ ಹಾಗೆ ಹಾಗೂ ಇತರರಿಗೆ ಮಾರಾಟ ಮಾಡದಂತೆ ನೋಡಿಕೊಳ್ಳಲು ಈ ಒಪ್ಪಂದ ಸಹಾಯ ಮಾಡುತ್ತದೆ. ಒಪ್ಪಂದವನ್ನು 50 ರೂ.ಗೂ ಹೆಚ್ಚಿನ ಮೌಲ್ಯದ ಛಾಪಾ ಕಾಗದದ ಮೇಲೆ ಬರೆಯಬೇಕು.
ಜಮೀನಿನ ಹಕ್ಕುಪತ್ರ: ಜಮೀನು ಅಥವಾ ನಿವೇಶನ ಖರೀದಿದಾರರು ಮೊದಲು ಗಮನಿಸಬೇಕಿರುವುದು ಖರೀದಿ ಉದ್ದೇಶದ ಜಮೀನಿನ ಹಕ್ಕುಪತ್ರ (ಟೈಟಲ್ ಡೀಡ್). ಆ ಜಮೀನು ಮಾರಾಟಗಾರನ ಹೆಸರಲ್ಲಿ ನೋಂದಣಿ ಆಗಿದೆಯೇ? ಆತನಿಗೆ ಮಾರಾಟ ಮಾಡುವ ಹಕ್ಕು ಇದೆಯೇ ಎಂಬುದನ್ನು ಪರಿಶೀಲಿಸಬೇಕು. ವಕೀಲರ ಮೂಲಕ ಮೂಲ ಒಪ್ಪಂದವನ್ನು ಪಡೆದುಕೊಂಡರೆ ಒಳ್ಳೆಯದು. ಇದರ ಜೊತೆಗೆ ಹಿಂದಿನ ದಸ್ತಾವೇಜುಗಳನ್ನೂ ಕೇಳಬಹುದು. ಕೆಲವು ಬಾರಿ ಒಬ್ಬರಿಗಿಂತ ಹೆಚ್ಚಿನವರು ಆಸ್ತಿ ಒಡೆತನ ಹೊಂದಿರುತ್ತಾರೆ. ಹಾಗಿದ್ದಲ್ಲಿ ಆಸ್ತಿ ನೋಂದಣಿಗೆ ಮುನ್ನ ಅವರಿಂದ ರಿಲೀಸ್ ಪ್ರಮಾಣಪತ್ರ ಪಡೆಯಬೇಕು.
ಕ್ರಯ ಪತ್ರ: ಇದನ್ನು ಕನ್ವೇಯನ್ಸ್ ಡೀಡ್ ಅಥವಾ ಸೇಲ್ ಡೀಡ್ ಎಂದು ಕರೆಯಲಾಗುತ್ತದೆ. ಇದು ಆಸ್ತಿ ಮಾರಾಟ ಮಾಡಿರುವ ಬಗ್ಗೆ ದಾಖಲೆ ಪತ್ರ. ಕನ್ವೇಯನ್ಸ್ ಅಂದರೆ ಆಸ್ತಿಯ ಒಡೆತನವನ್ನು ಮಾರಾಟಗಾರ ಖರೀದಿದಾರನಿಗೆ ಹಸ್ತಾಂತರಿಸುವುದು ಎಂದರ್ಥ. ಕ್ರಯ ಪತ್ರದ ಮೂಲಕ ಆಸ್ತಿಯು ಯಾವ ಸೊಸೈಟಿ, ಬಿಲ್ಡರ್ ಅಥವಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು. ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸಿರುವುದನ್ನು ದೃಢೀಕರಿಸುವ ರಶೀದಿ ಸಂಗ್ರಹಿಸುವುದರ ಜೊತೆಗೆ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಯಾಗಿದೆಯೇ ಅಥವಾ ಬಾಕಿ ಉಳಿದಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.
ಋಣಭಾರ ಪ್ರಮಾಣಪತ್ರ: ನಿವೇಶನ ಅಥವಾ ಮನೆ ಖರೀದಿಗೆ ಮುನ್ನ ಯಾವುದೇ ಶುಲ್ಕಗಳ ಬಾಕಿ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ. ಈ ಹಿಂದೆ ಆಸ್ತಿ ನೋಂದಣಿಯಾಗಿರುವುದು, ಶುಲ್ಕ ಬಾಕಿ ಇಲ್ಲ ಎಂದು ಉಪ ನೋಂದಣಾಧಿಕಾರಿಗಳಿಂದ ಇಸಿ (ಋಣಭಾರ ಪ್ರಮಾಣಪತ್ರ) ಪಡೆಯುವುದು ಉತ್ತಮ. ಸ್ಥಿರಾಸ್ತಿ ಖರೀದಿದಾರನ ಹೆಸರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಮೂದಾದರೆ ಮಾತ್ರ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವುದು. ಈ ಸಂಬಂಧ ರಿಜಿಸ್ಟ್ರೇಷನ್ ಡೀಡ್ ಜೊತೆಗೆ ಪಂಚಾಯಿತಿಗೆ ಅರ್ಜಿ ಬರೆಯಬೇಕು. ಕೆಲವು ಬಾರಿ ನೀವು ಖರೀದಿಸಿದ್ದ ಜಮೀನಿನ ಮೇಲೆ ಯಾರಾದರೂ ಸಾಲ ಪಡೆದಿರಬಹುದು ಎಂಬುದನ್ನು ಗಮನಿಸಬೇಕು. ಆ ಸಾಲವನ್ನು ಸಂಪೂರ್ಣ ತೀರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬ್ಯಾಂಕಿನಿಂದ ರಿಲೀಸ್ ಸರ್ಟಿಫಿಕೇಟ್ ಸಹ ಪಡೆದುಕೊಳ್ಳಬೇಕು.
ಜಿಪಿಎ: ಅನಿವಾಸಿ ಭಾರತೀಯರು ಸಂಬಂಧಪಟ್ಟವರಿಗೆ ಪವರ್ ಆಫ್ ಅಟಾರ್ನಿ ನೀಡುವ ಮೂಲಕ 3ನೇ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಬಹುದು. ಇಂತಹ ಸಂದರ್ಭದಲ್ಲಿ ಪವರ್ ಆಫ್ ಅಟಾರ್ನಿಯು ಭಾರತೀಯ ರಾಯಭಾರ ಕಚೇರಿಯಿಂದ ಸಹಿ ಮತ್ತು ಮುದ್ರೆಯನ್ನು ಹೊಂದಿರಬೇಕು. ವಿದೇಶದಲ್ಲಿರುವ ಮೂಲ ಮಾಲೀಕನ ಪರವಾಗಿ ಭಾರತದಲ್ಲಿ ಆಸ್ತಿ ವ್ಯವಹಾರ ನಡೆಸಲು ನೀಡುವ ಅಧಿಕಾರ ಪತ್ರವೇ ಪವರ್ ಆಫ್ ಅಟಾರ್ನಿ. ಮುದ್ರಾಂಕ ಶುಲ್ಕ ಪಾವತಿ ಕೂಡ ಅಧಿಕಾರ ಪತ್ರದ ಸ್ವರೂಪದ ಮೇಲೆ ನಿರ್ಧಾರವಾಗುತ್ತದೆ. ಹೆಚ್ಚಿನ ವ್ಯವಹಾರಗಳನ್ನು ನಡೆಸಲು ಅಧಿಕಾರವನ್ನು ಒಬ್ಬ ವ್ಯಕ್ತಿ ವಹಿಸಿಕೊಟ್ಟಿದ್ದರೆ ಅದು 'ಜನರಲ್ ಪವರ್ ಆಫ್ ಅಟಾರ್ನಿ' (ಜಿಪಿಎ) ಎನ್ನುತ್ತಾರೆ.
ಜಮೀನು, ನಿವೇಶನ ಅಥವಾ ಮನೆ ಖರೀದಿಸುವ ಬಹುತೇಕ ಜನರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಣ ಕೊಟ್ಟು ಬ್ರೋಕರ್‌ಗಳ ಮೂಲಕ ಈ ಕೆಲಸ ಮಾಡಿಸಿಕೊಳ್ಳುತ್ತಾರೆ. ಜಮೀನು ಖರೀದಿಗಾರನೂ ಮಾಹಿತಿ ತಿಳಿದುಕೊಂಡರೆ ಮೋಸ ಹೋಗುವುದನ್ನು ತಪ್ಪಿಸಬಹುದು. ಹಾಗಾಗಿ, ಜಮೀನು ಖರೀದಿಸುವವರು ಸಂಪೂರ್ಣ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಕಂದಾಯ ಅಧಿಕಾರಿಗಳು.
ಇದನ್ನೂ ಓದಿ: ಬೆಂಗಳೂರು: ಅಂಬೇಡ್ಕರ್ ಜೀವನಾಧಾರಿತ ಲಾಲ್ಬಾಗ್ ಫ್ಲವರ್ಶೋಗೆ ಜನಸಾಗರ