ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಂದು ವರ್ಷದಲ್ಲಿ ರಷ್ಯಾದ ಕಚ್ಚಾ ತೈಲದಿಂದ ತಯಾರಿಸಿದ 724 ಮಿಲಿಯನ್ ಯುರೋ (ಸುಮಾರು 6,850 ಕೋಟಿ ರೂ.) ಮೊತ್ತದ ಇಂಧನವನ್ನು ಅಮೆರಿಕಕ್ಕೆ ರಫ್ತು ಮಾಡಿದೆ ಎಂದು ಯುರೋಪಿಯನ್ ಥಿಂಕ್ ಟ್ಯಾಂಕ್ ವರದಿ ತಿಳಿಸಿದೆ.
"ಜನವರಿ 2024 ರಿಂದ ಜನವರಿ 2025 ರ ಅಂತ್ಯದವರೆಗೆ, ರಷ್ಯಾದ ಕಚ್ಚಾತೈಲವನ್ನು ಸಂಸ್ಕರಿಸುವ ಭಾರತ ಮತ್ತು ಟರ್ಕಿಯ ಆರು ಸಂಸ್ಕರಣಾಗಾರಗಳಿಂದ 2.8 ಬಿಲಿಯನ್ ಯುರೋ ಮೌಲ್ಯದ ಸಂಸ್ಕರಿಸಿದ ತೈಲವನ್ನು ಅಮೆರಿಕ ಆಮದು ಮಾಡಿಕೊಂಡಿದೆ. ಇದರಲ್ಲಿ ಅಂದಾಜು 1.3 ಬಿಲಿಯನ್ ಯುರೋಗಳಷ್ಟು ಮೌಲ್ಯದ ತೈಲವನ್ನು ರಷ್ಯಾದ ಕಚ್ಚಾ ತೈಲದಿಂದ ಸಂಸ್ಕರಿಸಲಾಗಿದೆ" ಎಂದು ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ (ಸಿಆರ್ಇಎ) ವರದಿಯಲ್ಲಿ ತಿಳಿಸಿದೆ.
ಕಚ್ಚಾ ತೈಲದಿಂದ ಸಂಸ್ಕರಿಸಿದ ಇಂಧನ: ರಿಲಯನ್ಸ್ನ ಅವಳಿ ತೈಲ ಸಂಸ್ಕರಣಾಗಾರಗಳು ಇರುವ ಗುಜರಾತ್ನ ಜಾಮ್ ನಗರದಿಂದ ಅಮೆರಿಕ 2 ಬಿಲಿಯನ್ ಯುರೋ ಮೌಲ್ಯದ ಪೆಟ್ರೋಲ್ ಮತ್ತು ಡೀಸೆಲ್ನಂಥ ಇಂಧನಗಳನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ 724 ಮಿಲಿಯನ್ ಯುರೋ ಮೌಲ್ಯದಷ್ಟು ತೈಲವನ್ನು ರಷ್ಯಾದ ಕಚ್ಚಾ ತೈಲದಿಂದ ಸಂಸ್ಕರಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ರಷ್ಯಾ ಮೇಲೆ ನಿರ್ಬಂಧ ವಿಧಿಸಿರುವ ಅಮೆರಿಕ: ಫೆಬ್ರವರಿ 2022 ರಲ್ಲಿ ಉಕ್ರೇನ್ ಆಕ್ರಮಣದ ನಂತರ ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಯುಎಸ್ ನಿರ್ಬಂಧಗಳನ್ನು ವಿಧಿಸಿವೆ. ಆದರೆ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದು, ಬಳಸುವುದು ಮತ್ತು ಅದರಿಂದ ಸಂಸ್ಕರಿಸಿದ ಡೀಸೆಲ್ನಂಥ ಇಂಧನಗಳನ್ನು ರಫ್ತು ಮಾಡುವುದನ್ನು ಇದರಡಿಯಲ್ಲಿ ನಿಷೇಧಿಸಲಾಗಿಲ್ಲ ಅಥವಾ ನಿರ್ಬಂಧಿಸಲಾಗಿಲ್ಲ.
ಸಿಆರ್ಇಎ ಹೇಳಿದ್ದೇನು?; ಗುಜರಾತ್ನ ವಾಡಿನಾರ್ ನಲ್ಲಿ 20 ಮಿಲಿಯನ್ ಟನ್ ಸಾಮರ್ಥ್ಯದ ಸಂಸ್ಕರಣಾಗಾರವನ್ನು ಹೊಂದಿರುವ ರಷ್ಯಾದ ರೋಸ್ ನೆಫ್ಟ್ ಮೂಲದ ನಯರಾ ಎನರ್ಜಿ ಜನವರಿ 2024 ಮತ್ತು ಜನವರಿ 2025 ರ ನಡುವೆ ಯುಎಸ್ಗೆ 184 ಮಿಲಿಯನ್ ಯುರೋ ಮೌಲ್ಯದ ಇಂಧನವನ್ನು ರಫ್ತು ಮಾಡಿದೆ. ಇದರಲ್ಲಿ 124 ಮಿಲಿಯನ್ ಯುರೋ ಮೌಲ್ಯದ ತೈಲವನ್ನು ರಷ್ಯಾದ ಕಚ್ಚಾ ತೈಲದಿಂದ ಸಂಸ್ಕರಿಸಲಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಸಿಆರ್ಇಎ ತಿಳಿಸಿದೆ.
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಘಟಕವನ್ನು ಹೊಂದಿರುವ ನವಮಂಗಳೂರು ಕಂಪನಿ ಯುಎಸ್ಗೆ 42 ಮಿಲಿಯನ್ ಯುರೋ ಮೌಲ್ಯದ ಇಂಧನವನ್ನು ರಫ್ತು ಮಾಡಿದೆ. ಅದರಲ್ಲಿ 22 ಮಿಲಿಯನ್ ಯುರೋ ಮೌಲ್ಯದಷ್ಟು ತೈಲವನ್ನು ರಷ್ಯಾದ ಕಚ್ಚಾತೈಲದಿಂದ ಸಂಸ್ಕರಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಯುರೋಪಿಯನ್ ಥಿಂಕ್ ಟ್ಯಾಂಕ್ ವರದಿಯ ಬಗ್ಗೆ ಪ್ರತಿಕ್ರಿಯೆ ಕೋರಿ ಕಳುಹಿಸಲಾದ ಈ ಮೇಲ್ ಗೆ ರಿಲಯನ್ಸ್ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ : ಮನರೇಗಾ ವೇತನ ₹400, ದಿನಗಳ ಸಂಖ್ಯೆ 150ಕ್ಕೆ ಹೆಚ್ಚಿಸಿ: ಸೋನಿಯಾ ಗಾಂಧಿ ಒತ್ತಾಯ - MGNREGA