ನವದೆಹಲಿ: ತರಕಾರಿಗಳು ಮತ್ತು ಪ್ರೋಟೀನ್ ಭರಿತ ವಸ್ತುಗಳ ಬೆಲೆಗಳಲ್ಲಿನ ಕುಸಿತದಿಂದಾಗಿ ದೇಶದಲ್ಲಿನ ಚಿಲ್ಲರೆ ಹಣದುಬ್ಬರವು ಮಾರ್ಚ್ ತಿಂಗಳಲ್ಲಿ ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡಾ 3.34ಕ್ಕೆ ಇಳಿದಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿತ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 3.61 ಮತ್ತು ಕಳೆದ ವರ್ಷ ಮಾರ್ಚ್ನಲ್ಲಿ ಶೇಕಡಾ 4.85 ರಷ್ಟಿತ್ತು.
ಮಾರ್ಚ್ 2025 ರಲ್ಲಿ ಹಣದುಬ್ಬರ ದರವು ಆಗಸ್ಟ್ 2019 ರ ನಂತರ ಅತ್ಯಂತ ಕಡಿಮೆಯಾಗಿದೆ. ಮಾರ್ಚ್ 2019 ರಲ್ಲಿ ಅದು ಶೇಕಡಾ 3.28 ರಷ್ಟಿತ್ತು. ಈ ವರ್ಷದ ಮಾರ್ಚ್ನಲ್ಲಿ ಆಹಾರ ಹಣದುಬ್ಬರವು ಶೇಕಡಾ 2.69 ರಷ್ಟಿದ್ದರೆ, ಫೆಬ್ರವರಿಯಲ್ಲಿ ಶೇಕಡಾ 3.75 ಮತ್ತು ಮಾರ್ಚ್ 2024 ರಲ್ಲಿ ಶೇಕಡಾ 8.52 ರಷ್ಟಿತ್ತು.
ಹಣದುಬ್ಬರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಳೆದ ವಾರ ರಿಸರ್ವ್ ಬ್ಯಾಂಕ್ ಪ್ರಮುಖ ಅಲ್ಪಾವಧಿ ಸಾಲ ದರವನ್ನು (ರೆಪೊ) 25 ಬಿಪಿಎಸ್ ನಷ್ಟು ಕಡಿತಗೊಳಿಸಿತ್ತು. 2025-26ರ ಹಣಕಾಸು ವರ್ಷದಲ್ಲಿ ಸಿಪಿಐ ಹಣದುಬ್ಬರವು ಶೇಕಡಾ 4 ರಷ್ಟಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇಕಡಾ 3.6, ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 3.9, ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 3.8 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 4.4 ರಷ್ಟಿರಬಹುದು ಎಂದು ರಿಸರ್ವ್ ಬ್ಯಾಂಕ್ ಅಂದಾಜಿಸಿದೆ.
ತರಕಾರಿಗಳು, ಆಲೂಗಡ್ಡೆ ಮತ್ತು ಇತರ ಆಹಾರ ಪದಾರ್ಥಗಳ ಬೆಲೆಗಳು ಕಡಿಮೆಯಾಗಿದ್ದರಿಂದ ಸಗಟು ಬೆಲೆ ಹಣದುಬ್ಬರವು ಮಾರ್ಚ್ನಲ್ಲಿ ಆರು ತಿಂಗಳ ಕನಿಷ್ಠ ಶೇಕಡಾ 2.05 ಕ್ಕೆ ಇಳಿದಿದೆ ಎಂದು ಸರ್ಕಾರದ ಅಂಕಿ ಅಂಶಗಳು ಮಂಗಳವಾರ ತೋರಿಸಿವೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 2.38 ರಷ್ಟಿತ್ತು. ಕಳೆದ ವರ್ಷ ಮಾರ್ಚ್ ನಲ್ಲಿ ಇದು ಶೇಕಡಾ 0.26ರಷ್ಟಿತ್ತು.
ಇದನ್ನೂ ಓದಿ: 10 ಗ್ರಾಂ ಗೆ 96,450 ರೂ.: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ - GOLD PRICE