ಮುಂಬೈ: ಕೇಂದ್ರ ಸರ್ಕಾರಕ್ಕೆ ಇಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಒಳ್ಳೆಯ ಸುದ್ದಿ ಕೊಟ್ಟಿದೆ. 2024-25ನೇ ಸಾಲಿಗೆ 2.69 ಲಕ್ಷ ಕೋಟಿ ರೂಪಾಯಿ ಡಿವಿಡೆಂಡ್(ಲಾಭಾಂಶ) ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ.
ಆರ್ ಬಿಐ ಗವರ್ನರ್ ಸಂಜಯ್ ಮಲ್ಲೋತ್ರಾ ಅಧ್ಯಕ್ಷತೆಯಲ್ಲಿ ನಡೆದ ಆರ್ ಬಿಐ ಕೇಂದ್ರ ನಿರ್ದೇಶಕರ ಮಂಡಳಿಯ 616ನೇ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಪರಿಸ್ಥಿತಿಗಳು ಮತ್ತು ಅಪಾಯದ ಬೆದರಿಕೆಗಳನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರ್ ಬಿಐ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
2023-24ರ ಸಾಲಿಗೆ ಆರ್ ಬಿಐ, ಕೇಂದ್ರ ಸರ್ಕಾರಕ್ಕೆ 2.1 ಲಕ್ಷ ಕೋಟಿ ರೂಪಾಯಿ ನೀಡಿತ್ತು. ಈ ಮೊತ್ತಕ್ಕೆ ಹೋಲಿಸಿದರೆ, ಇದು ಶೇ 27.4ರಷ್ಟು ಹೆಚ್ಚು. 2022-23ನೇ ಸಾಲಿಗೆ 87,416 ಕೋಟಿ ರೂಪಾಯಿ ಡಿವಿಡೆಂಡ್ ನೀಡಿತ್ತು. ಈ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.
ಆರ್ ಬಿಐ ಆದಾಯದ ಮೂಲಗಳೇನು?: ದೇಶಿ, ವಿದೇಶಿ ಸೆಕ್ಯುರಿಟೀಸ್ ಮೇಲಿನ ಬಡ್ಡಿ, ಸೇವೆಗಳ ಮೇಲಿನ ಶುಲ್ಕ, ಕಮಿಷನ್, ವಿದೇಶಿ ವಿನಿಮಯ ವಹಿವಾಟಿನ ಮೇಲಿನ ಲಾಭ ಸೇರಿದಂತೆ ಮತ್ತಿತರ ಮೂಲಗಳಿಂದ ಆದಾಯ ಗಳಿಸುತ್ತದೆ. ಆರ್‌ಬಿಐ ವಾರ್ಷಿಕವಾಗಿ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ಲಾಭಾಂಶದ ರೂಪದಲ್ಲಿ ಪಾವತಿಸುತ್ತದೆ.
ಆರ್ ಬಿಐ ಯಾವುದಕ್ಕೆಲ್ಲ ಖರ್ಚು ಮಾಡುತ್ತದೆ?: ಆರ್ ಬಿಐ ವೆಚ್ಚಗಳಲ್ಲಿ ಕರೆನ್ಸಿ ನೋಟುಗಳ ಮುದ್ರಣ, ಠೇವಣಿ-ಸಾಲಗಳ ಮೇಲಿನ ಬಡ್ಡಿ ಪಾವತಿ, ಸಿಬ್ಬಂದಿ ವೇತನ-ಪಿಂಚಣಿ, ಕಚೇರಿಗಳ ಚಾಲನಾ ವೆಚ್ಚಗಳು, ಆಕಸ್ಮಿಕ ಸಂದರ್ಭಗಳಿಗೆ ನಿಧಿ, ಸವಕಳಿಗೆ ಖರ್ಚು ಮಾಡುತ್ತದೆ.
ಈ ಆದಾಯ ಮತ್ತು ವೆಚ್ಚಗಳ ನಡುವಿನ ವ್ಯತ್ಯಾಸವನ್ನು ಹೆಚ್ಚುವರಿ ನಿಧಿ ಎಂದು ಪರಿಗಣಿಸಲಾಗುತ್ತದೆ. ಈ ಹೆಚ್ಚುವರಿ ಹಣವನ್ನು ಆರ್ ಬಿಐ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುತ್ತದೆ.
ಕೇಂದ್ರದ ಅಂದಾಜಿಗಿಂತಲೂ ಈ ಬಾರಿ ಹೆಚ್ಚು ಡಿವಿಡೆಂಡ್: ಆರ್‌ಬಿಐ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಲಾಭಾಂಶದ ರೂಪದಲ್ಲಿ ಬೊಕ್ಕಸಕ್ಕೆ 2.56 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಂದಾಜಿಸಿತ್ತು. ಆದರೆ, ಈ ಬಾರಿ ಆರ್‌ಬಿಐ, ಕೇಂದ್ರದ ಅಂದಾಜಿಗಿಂತಲೂ ಹೆಚ್ಚಿನ ಲಾಭಾಂಶ ಪಾವತಿಸುತ್ತಿದೆ.