ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಲವು ದೇಶೀಯ ಮಾರ್ಗಗಳಲ್ಲಿ ಸರಾಸರಿ ವಿಮಾನಯಾನ ದರಗಳು ಶೇ 20 ರಿಂದ 25ರಷ್ಟು ಕಡಿಮೆಯಾಗಿವೆ ಎಂದು ವಿಶ್ಲೇಷಣೆಯೊಂದು ತಿಳಿಸಿದೆ. ಆಸನ ಸಂಖ್ಯೆಗಳಲ್ಲಿ ಹೆಚ್ಚಳ ಮತ್ತು ಇತ್ತೀಚೆಗೆ ತೈಲ ಬೆಲೆ ಕುಸಿತವಾಗಿರುವುದರಿಂದ ವಿಮಾನ ಟಿಕೆಟ್ ಬೆಲೆಗಳು ಕಡಿಮೆಯಾಗಿವೆ ಎಂದು ಟ್ರಾವೆಲ್ ಪೋರ್ಟಲ್ ಇಕ್ಸಿಗೊದ ವಿಶ್ಲೇಷಣಾ ವರದಿ ಹೇಳಿದೆ.
30 ದಿನಗಳ ಎಪಿಡಿ (ಸುಧಾರಿತ ಖರೀದಿ ದಿನಾಂಕ) ಆಧಾರದ ಮೇಲೆ ಒನ್-ವೇ ಸರಾಸರಿ ಶುಲ್ಕಗಳನ್ನು ಲೆಕ್ಕ ಹಾಕಲಾಗಿದೆ. 2023 ರ ದೀಪಾವಳಿಯ ಸಮಯ ನವೆಂಬರ್ 10 ರಿಂದ 16 ಮತ್ತು ಈ ವರ್ಷದ ಅಕ್ಟೋಬರ್ 28 ರಿಂದ ನವೆಂಬರ್ 3 ರವರೆಗಿನ ಅವಧಿಯಲ್ಲಿನ ಟಿಕೆಟ್ ಬೆಲೆಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಬೆಂಗಳೂರು-ಕೋಲ್ಕತಾ ಮಾರ್ಗದಲ್ಲಿ ಸರಾಸರಿ ವಿಮಾನಯಾನ ದರ ಗರಿಷ್ಠ ಕುಸಿತವಾಗಿದ್ದು, ಕಳೆದ ವರ್ಷ ಇದ್ದ 10,195 ರೂ.ಗಳಿಂದ ಈ ವರ್ಷ 6,319 ರೂ.ಗೆ ಇಳಿದಿದೆ ಎಂದು ವಿಶ್ಲೇಷಣೆ ತಿಳಿಸಿದೆ. ಚೆನ್ನೈ-ಕೋಲ್ಕತಾ ಮಾರ್ಗದ ಟಿಕೆಟ್ ದರ ಶೇ 36ರಷ್ಟು ಇಳಿಕೆಯಾಗಿದ್ದು, 8,725 ರೂ.ಗಳಿಂದ 5,604 ರೂ.ಗೆ ತಲುಪಿದೆ.
ಮುಂಬೈ-ದೆಹಲಿ ವಿಮಾನಯಾನದ ಸರಾಸರಿ ದರ ಶೇಕಡಾ 34 ರಷ್ಟು ಇಳಿದು 8,788 ರೂ.ಗಳಿಂದ 5,762 ರೂ.ಗೆ ತಲುಪಿದೆ. ಅಂತೆಯೇ, ದೆಹಲಿ-ಉದಯಪುರ ಮಾರ್ಗದ ಟಿಕೆಟ್ ದರದಲ್ಲಿ ಶೇಕಡಾ 34 ರಷ್ಟು ಇಳಿಕೆಯಾಗಿದ್ದು, 11,296 ರೂ.ಗಳಿಂದ 7,469 ರೂ.ಗೆ ಇಳಿದಿದೆ. ದೆಹಲಿ-ಕೋಲ್ಕತಾ, ಹೈದರಾಬಾದ್-ದೆಹಲಿ ಮತ್ತು ದೆಹಲಿ-ಶ್ರೀನಗರ ಮಾರ್ಗಗಳಲ್ಲಿ ದರ ಶೇಕಡಾ 32 ರಷ್ಟು ಕುಸಿತವಾಗಿದೆ.
"ಕಳೆದ ವರ್ಷ ದೀಪಾವಳಿಯ ಸುತ್ತಮುತ್ತ ಸೀಮಿತ ಆಸನಗಳ ಲಭ್ಯತೆಯಿಂದಾಗಿ ವಿಮಾನಯಾನ ದರಗಳು ಏರಿಕೆಯಾಗಿದ್ದವು. ಗೋ ಫಸ್ಟ್ ಕಂಪನಿಯು ವಿಮಾನ ಸಂಚಾರ ಸ್ಥಗಿತಗೊಳಿಸಿದ್ದು ಕೂಡ ಇದಕ್ಕೆ ಮುಖ್ಯ ಕಾರಣವಾಗಿತ್ತು. ಆದರೆ ಈ ವರ್ಷ ಸೀಟುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ದರಗಳಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದೆ. ಸದ್ಯ ಅಕ್ಟೋಬರ್ ಕೊನೆಯ ವಾರದಲ್ಲಿ ಪ್ರಮುಖ ಮಾರ್ಗಗಳಲ್ಲಿ ಸರಾಸರಿ ವಿಮಾನಯಾನ ದರಗಳು ಶೇಕಡಾ 20 ರಿಂದ 25 ರಷ್ಟು ಕಡಿಮೆಯಾಗಿವೆ" ಎಂದು ಇಕ್ಸಿಗೊ ಗ್ರೂಪ್ ಸಿಇಒ ಅಲೋಕ್ ಬಾಜಪೇಯಿ ಪಿಟಿಐಗೆ ತಿಳಿಸಿದ್ದಾರೆ.
"ಈ ವರ್ಷ ತೈಲ ಬೆಲೆಗಳು ಶೇಕಡಾ 15 ರಷ್ಟು ಕುಸಿದಿರುವುದು ಕೂಡ ಟಿಕೆಟ್ ದರ ಕಡಿತಕ್ಕೆ ಕಾರಣವಾಗಿರಬಹುದು. ಇದರಿಂದ ಹಬ್ಬದ ಋತುವಿನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಿದೆ. ಆದರೆ ಈಗ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗುತ್ತಿರುವುದರಿಂದ ತೈಲ ಬೆಲೆಗಳು ಮತ್ತೆ ಹೆಚ್ಚಾಗುತ್ತಿವೆ. ಹೀಗಾಗಿ ಕೆಲ ಮಾರ್ಗಗಳಲ್ಲಿ ವಿಮಾನ ದರಗಳು ಶೇಕಡಾ 34 ರಷ್ಟು ಹೆಚ್ಚಳವಾಗಿವೆ" ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ : ಟಾಟಾ ಟ್ರಸ್ಟ್ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ: ನೂತನ ಉತ್ತರಾಧಿಕಾರಿ ಬಗ್ಗೆ ನಿಮಗೆಷ್ಟು ಗೊತ್ತು?