ಮಗನಂತೆ ಸಾಕಿ ಸಲುಹಿದ್ದ ಮರಕ್ಕೆ ಕೊಡಲಿ ಪೆಟ್ಟು: ಕಣ್ಣೀರಿಟ್ಟ 90ರ ವೃಕ್ಷಮಾತೆ, ಮನಕಲಕುವಂತಿದೆ ಗೋಳಾಟ
20 ವರ್ಷದ ಬೃಹತ್ ಅಶ್ವತ್ಥ ಮರವನ್ನು ಆರೋಪಿಗಳು ಸಂಪೂರ್ಣವಾಗಿ ಕಡಿದು ಉರುಳಿಸಿದ್ದು ಅವರನ್ನು ಬಂಧಿಸಲಾಗಿದೆ. ಇತ್ತ ನೆಲಕ್ಕುರುಳಿದ ಮರದ ಜಾಗದಲ್ಲಿ ಮತ್ತೊಂದು ಸಸಿಯನ್ನು ಆ ತಾಯಿ ನೆಟ್ಟಿದ್ದು, ಕೇಂದ್ರ ಸಚಿವರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

Published : October 12, 2025 at 4:49 PM IST
ಛತ್ತೀಸ್‌ಗಢ: 20 ವರ್ಷಗಳ ಹಿಂದೆ ತಾಯಿಯೋರ್ವರು ನೆಟ್ಟಿದ್ದ ಅಶ್ವತ್ಥ ಸಸಿ ಹೆಮ್ಮರವಾಗಿ ಬೆಳೆದು ತನ್ನ ಸುತ್ತಲೂ ಸ್ವಚ್ಛಂದ ಗಾಳಿ ಜತೆ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ಕೊಡುತ್ತಾ, ಎಲ್ಲರಿಗೂ ನೆರಳಾಗಿತ್ತು. ಆದರೆ ಅದು ಹೇಗೇ ದುಷ್ಟರ ಕಣ್ಣಿಗೆ ಬಿತ್ತೋ ಗೊತ್ತಿಲ್ಲ. ರಾತ್ರೋರಾತ್ರಿ ಆ ಕಿಡಿಗೇಡಿಗಳು ಬೃಹತ್ ಅಶ್ವತ್ಥ ಮರವನ್ನು ಕಡಿದು ಉರುಳಿಸಿದ್ದಾರೆ. ಎದೆ ಎತ್ತರಕ್ಕೆ ಬೆಳೆದ ಮಗನಂತಿದ್ದ ಮರ ತನ್ನೆದುರೇ ಧರಾಶಾಹಿ ಆಗಿರುವುದನ್ನು ಸಹಿಸಲಾರದೇ 90 ವರ್ಷದ ವೃದ್ಧ ತಾಯಿ ಕಣ್ಣೀರುಡುತ್ತಿದ್ದಾರೆ.
"ಯಾರೋ ನನ್ನ ಮಗನನ್ನೇ ನನ್ನಿಂದ ಕಸಿದುಕೊಂಡಿದ್ದಾರೆ! ಎನ್ನುತ್ತಾ ಕಡಿದು ಹಾಕಿದ ಮರವನ್ನು ಅಪ್ಪಿಕೊಂಡು ಗಂಟೆಗಟ್ಟಲೆ ಅಳುತ್ತಲೇ ಇದ್ದ ವೃದ್ಧೆಯ ನೋವು ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ.
ಹೌದು.., ಛತ್ತೀಸ್‌ಗಢ ರಾಜ್ಯದ ಸರ್ರಾಗೊಂಡಿ ಎಂಬ ಗ್ರಾಮದಲ್ಲಿ ಅಕ್ರಮವಾಗಿ ಕಡಿದ ಅಶ್ವತ್ಥ ಮರಕ್ಕೆ ಬದಲಾಗಿ ವೃದ್ಧೆಯೊಬ್ಬರು ಸಸಿ ನೆಡುತ್ತಿರುವ ಹೃದಯವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ತಾಯಿ ಹೆಸರು ದೇವಲಾ ಬಾಯಿ (90 ವರ್ಷ). ಅವರು 20 ವರ್ಷಗಳ ಹಿಂದೆ ತಮ್ಮ ಮನೆಯ ಸಮೀಪದ ಸರ್ಕಾರಿ ಜಮೀನಿನಲ್ಲಿ ಒಂದು ಅಶ್ವತ್ಥ ಮರದ ಸಸಿಯನ್ನು ನೆಟ್ಟು ಅದನ್ನು ಪೋಷಣೆ ಮಾಡಿದ್ದರು. ಆದರೆ ಇದೇ ಅಕ್ಟೋಬರ್ 5ರ ರಾತ್ರಿ ಯಾರೋ ಆ ಮರವನ್ನು ಅಕ್ರಮವಾಗಿ ಕಡಿದುರುಳಿಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ಆ ತಾಯಿ ಓಡೋಡಿ ಬಂದು, ಬಿಕ್ಕಿಬಿಕ್ಕಿ ಅಳುತ್ತಾನೇ ಆ ಮರದ ಬುಡದಲ್ಲೇ ಮತ್ತೊಂದು ಅಶ್ವತ್ಥ ಸಸಿಯನ್ನು ನೆಟ್ಟಿದ್ದಾರೆ.
This is such heart-wrenching scene!
— Kiren Rijiju (@KirenRijiju) October 11, 2025
𝐀𝐧 𝐞𝐥𝐝𝐞𝐫𝐥𝐲 𝐰𝐨𝐦𝐚𝐧 𝐰𝐞𝐞𝐩𝐬 𝐛𝐢𝐭𝐭𝐞𝐫𝐥𝐲- 𝐚𝐟𝐭𝐞𝐫 𝐏𝐞𝐞𝐩𝐚𝐥 𝐭𝐫𝐞𝐞 𝐬𝐡𝐞 𝐩𝐥𝐚𝐧𝐭𝐞𝐝 𝟐𝟎 𝐲𝐞𝐚𝐫𝐬 𝐚𝐠𝐨 𝐢𝐬 𝐜𝐮𝐭 𝐝𝐨𝐰𝐧😢
I'm told this occurred in the State of Chhattisgarh. #EkPedMaaKeNaam pic.twitter.com/7UeuSSmKAr
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಇಲ್ಲಿನ ಖೈರಾಗಢ ಪೊಲೀಸರು ಇಬ್ಬರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಈ ವೈರಲ್ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, "ಇದು ನಿಜಕ್ಕೂ ಮನಕಲಕುವ ದೃಶ್ಯ! 20 ವರ್ಷಗಳ ಹಿಂದೆ ನೆಟ್ಟಿದ್ದ ಅಶ್ವತ್ಥ ಮರವನ್ನು ಕಡಿದು ಹಾಕಿದ್ದಕ್ಕೆ ಈ ವೃದ್ಧ ಮಹಿಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಈ ಘಟನೆ ಛತ್ತೀಸ್‌ಗಢ ರಾಜ್ಯದಲ್ಲಿ ನಡೆದಿದೆ ಎಂದು ನನಗೆ ತಿಳಿದುಬಂದಿದೆ" ಎಂದು ಪ್ರಕರಣದ ಬಗ್ಗೆ ಹಂಚಿಕೊಂಡಿದ್ದಾರೆ.
ದೇವಲಾ ಬಾಯಿ ಅವರು ಅಶ್ವತ್ಥ ಮರವನ್ನು ಕೇವಲ ಮರವೆಂದು ಭಾವಿಸದೆ, ತನ್ನ ಮಗನಂತೆ ಕಂಡಿದ್ದರು. ಜನರು ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೋ ಹಾಗೇ 20 ವರ್ಷಗಳಿಗೂ ಹೆಚ್ಚು ಕಾಲ ಮರವನ್ನು ಪೋಷಿಸಿದ್ದರು. ಕಾಲಕ್ರಮೇಣ ಆ ಮರವನ್ನು ಗ್ರಾಮಸ್ಥರು ಪೂಜಿಸುತ್ತಾ, ಅದು ಇಡೀ ಗ್ರಾಮದ ಶ್ರದ್ಧಾ ಕೇಂದ್ರವಾಗಿ ಮಾರ್ಪಟ್ಟಿತ್ತು. ಹಬ್ಬಗಳ ಸಮಯದಲ್ಲಿ ಇಲ್ಲಿ ಪೂಜೆಗಳೂ ನಡೆಯುತ್ತಿದ್ದವು. ಹಬ್ಬದ ದಿನಗಳಲ್ಲಿ ದೇವಲಾ ಬಾಯಿ ಅವರು ಆ ಅಶ್ವತ್ಥ ಮರಕ್ಕೆ ಪವಿತ್ರ ದಾರವನ್ನು ಕಟ್ಟಿ ಮತ್ತು ತಿಲಕವನ್ನು ಹಚ್ಚುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ಬಗ್ಗೆ ಗ್ರಾಮಸ್ಥರೋರ್ವರು ಮಾತನಾಡಿ. "ವೃದ್ಧ ತಾಯಿ ದೇವಲಾ ಬಾಯಿ ನೆಟ್ಟಿದ್ದ ಅಶ್ವತ್ಥ ಮರವು ನಮ್ಮೆಲ್ಲರ ಹೃದಯದಲ್ಲಿ ಆಳವಾದ ಸಂಬಂಧವನ್ನು ಹೊಂದಿತ್ತು. ಕೆಲವರ ಕಣ್ಣು ಈ ಮರದ ಮೇಲೆ ಬಿದ್ದಿತ್ತು. ಈ ಹಿಂದೆ ಅದನ್ನು ಕಡಿಯಲು ಪ್ರಯತ್ನಿಸಿದ್ದರು. ಆಗ ಗ್ರಾಮಸ್ಥರ ಪ್ರತಿಭಟನೆ ನೋಡಿ ಆರೋಪಿಗಳು ಹಿಂದಕ್ಕೆ ಸರಿದಿದ್ದರು. ಆದರೆ, ರಾತ್ರೋರಾತ್ರಿ ಅವರು ಮರವನ್ನು ಕಡಿದು ಹಾಕಿದ್ದಾರೆ. ಈ ಹೇಯ ಕೃತ್ಯದ ಹಿಂದೆ ಇರುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದರು.
ಸದ್ಯದ ಮಾಹಿತಿ ಪ್ರಕಾರ ಗ್ರಾಮಸ್ಥರ ದೂರಿನ ಆಧಾರದ ಮೇಲೆ, ಖೈರಾಗಢ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೊಳಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್: ಮೊಬೈಲ್ ಲೊಕೇಶನ್ ಆಧರಸಿ ಆರೋಪಿಗಳ ಬಂಧನ

