ಧೌಲಪುರ(ರಾಜಸ್ಥಾನ): ಪತಿ ಮಾರ್ಕೆಟ್ನಿಂದ ತರಕಾರಿ ತರಲಿಲ್ಲವೆಂದು ನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಜಿಲ್ಲೆಯ ಸೈಪವು ಪ್ರದೇಶದ ಕೈತರಿ ಎಂಬ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ: ಈ ಬಗ್ಗೆ ಪತಿ ರಘುವೀರ್ ಸಿಂಗ್ ಸ್ವತಃ ಮಾಹಿತಿ ನೀಡಿದ್ದಾರೆ. ರಘುವೀರ್ ಸಿಂಗ್ ಧೌಲಪುರ್ನಲ್ಲಿ ಆಟೊ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಸೋಮವಾರ ರಾತ್ರಿ ಡ್ಯೂಟಿ ಮುಗಿಸಿ ಗ್ರಾಮಕ್ಕೆ ಮರಳಿದ್ದರು. ಬರುವಾಗ ಮಾರ್ಕೆಟ್ನಿಂದ ತರಕಾರಿ ತರುವಂತೆ ಪತ್ನಿ ಅವರಿಗೆ ಫೋನ್ ಮಾಡಿದ್ದರು. ಆದರೆ ಕೆಲಸದ ಮಧ್ಯೆ ಈ ವಿಷಯ ಮರೆತ ಅವರು ತರಕಾರಿ ಇಲ್ಲದೇ ಮನೆಗೆ ಬಂದಿದ್ದರು. ಆಗ ಪತ್ನಿ ಈ ಬಗ್ಗೆ ಪ್ರಶ್ನಿಸಿದಾಗ ಒಂದಿಷ್ಟು ವಾದ-ವಿವಾದ ನಡೆದಿತ್ತು. ಈ ಮಧ್ಯೆ ಪತ್ನಿ ಕೋಣೆಯೊಳಗೆ ಹೋಗಿ ಆತ್ಮಹತ್ಯೆಗೆ ಪ್ರಯತ್ನಿಸಿದಳು ಎಂದು ರಘುವೀರ್ ಸಿಂಗ್ ಹೇಳಿದರು.
ಈ ಘಟನೆಯ ನಂತರ ಆತಂಕಗೊಂಡ ಕುಟುಂಬಸ್ಥರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 22 ವರ್ಷದ ಲಕ್ಷ್ಮಿ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಾಯುವ ಮುನ್ನ ಆಸ್ಪತ್ರೆಯಲ್ಲಿ ಮಹಿಳೆಯ ಹೇಳಿಕೆ ಪಡೆಯಲಾಗಿದೆ ಎಂದು ಹವಾಲ್ದಾರ್ ಪ್ರೇಮ್ ಸಿಂಗ್ ಹೇಳಿದರು. ಪತಿ-ಪತ್ನಿಯ ಮಧ್ಯದ ಜಗಳದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮಹಿಳೆಯ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಕುಟುಂಬಸ್ಥರು ಯಾವುದೇ ದೂರು ದಾಖಲಿಸಿಲ್ಲ. ವರದಿ ಬಂದ ನಂತರ ಪ್ರಕರಣ ದಾಖಲಾಗಲಿದೆ. ಪ್ರಕರಣದ ಬಗ್ಗೆ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 52 ಸಾವಿರ ಹಜ್ ಯಾತ್ರೆ ಸ್ಲಾಟ್ಸ್ ರದ್ದು; ಸೌದಿ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಕೇಂದ್ರಕ್ಕೆ ಒತ್ತಾಯ - HAJJ SLOTS