ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆದ ಆಪರೇಷನ್ ಸಿಂಧೂರ ಮತ್ತು ಪಾಕಿಸ್ತಾನದ ಭಯೋತ್ಪಾದನೆಯ ಮುಖವನ್ನು ವಿಶ್ವದ ಮುಂದೆ ಬಯಲು ಮಾಡಲು ಭಾರತ ಸರ್ಕಾರ 7 ತಂಡಗಳ ನಿಯೋಗವನ್ನು ರಚಿಸಿದೆ. ಈ ತಂಡಗಳು ವಿಶ್ವದ ಹಲವು ರಾಷ್ಟ್ರಗಳಿಗೆ ನಾಳೆಯಿಂದ ಪ್ರಯಾಣ ಆರಂಭಿಸಲಿದೆ.
ಸರ್ವಪಕ್ಷಗಳ ಸದಸ್ಯರನ್ನು ಹೊಂದಿರುವ ಏಳು ನಿಯೋಗಗಳಿಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಆಪರೇಷನ್ ಸಿಂಧೂರ ಮತ್ತು ಪಾಕಿಸ್ತಾನದ ನಿಜವಾದ ಬಣ್ಣ ಏನೆಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಈ ಏಳು ನಿಯೋಗಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸೇರಿದಂತೆ ಒಟ್ಟು 33 ದೇಶಗಳಿಗೆ ಪ್ರಯಾಣ ಬೆಳೆಸಲಿದೆ. ಅಲ್ಲಿನ ಮುಖ್ಯಸ್ಥರು ಮತ್ತು ಗಣ್ಯರನ್ನು ಭೇಟಿ ಮಾಡಿ ಪಾಕಿಸ್ತಾನದ ಅನುಸರಿಸುತ್ತಿರುವ ಉಗ್ರ ನೀತಿಯ ಬಗ್ಗೆ ಮನವರಿಕೆ ಮಾಡಿಕೊಡಲಿದೆ.
ಈ ದೇಶಗಳನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಬ್ರೀಫಿಂಗ್ ಸಮಯದಲ್ಲಿ ಯಾದ ಆಧಾರದ ಮೇಲೆ 33 ದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ವಿವರಿಸಿದ್ದಾರೆ. ಆ ಕುರಿತು ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸುಮಾರು 15 ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಪಡೆದಿವೆ. ಅದರಲ್ಲಿ 5 ಕಾಯಂ ಸದಸ್ಯತ್ವ ಮತ್ತು ಉಳಿದ 10 ಕಾಯಂ ಅಲ್ಲದೆ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಿರುತ್ತವೆ. ಈ ದೇಶಗಳಿಗೆ ನಮ್ಮ ನಿಯೋಗಗಳು ತೆರಳಲಿವೆ ಎಂದು ತಿಳಿಸಿದರು.
ಇದಲ್ಲದೆ, ಮುಂದಿನ ದಿನಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಾಗುವ ಇತರ ಐದು ರಾಷ್ಟ್ರಗಳನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆ. ಜಾಗತಿಕ ವೇದಿಕೆಯಲ್ಲಿ ಧ್ವನಿಯಾಗುವಂತಹ ಇನ್ನು ಐದು ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿಶ್ವದ ಈ ಎಲ್ಲ ರಾಷ್ಟ್ರಗಳಿಗೆ ನಮ್ಮ ನಿಯೋಗ ಭೇಟಿ ನೀಡುವ ಮೂಲಕ ಉಗ್ರ ಪೋಷಕ ರಾಷ್ಟ್ರ ಎಂದೇ ಕುಖ್ಯಾತ ಪಡೆದಿರುವ ಪಾಕಿಸ್ತಾನದ ನೀತಿಯನ್ನು ಬಯಲು ಮಾಡಲಾಗುವುದು ಎಂದು ಹೇಳಿದ್ದಾರೆ.
ಜಪಾನ್ಗೆ ಮೊದಲ ಭೇಟಿ: ಜೆಡಿಯುನ ಸಂಜಯ್ ಝಾ ಅವರ ನೇತೃತ್ವದ ನಿಯೋಗದಲ್ಲಿ ಸಾರಂಗಿ ಅವರು ಇದ್ದಾರೆ. ಈ ನಿಯೋಗವು, ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಸಿಂಗಾಪುರಕ್ಕೆ ಪ್ರಯಾಣಿಸಲಿದೆ. ರಾಜತಾಂತ್ರಿಕ ಭೇಟಿಯ ಮೊದಲ ನಿಯೋಗವಾಗಿ ಪ್ರಯಾಣ ಬೆಳೆಸಲಿದೆ. ಮೊದಲಗೆ ಜಪಾನ್ಗೆ ತೆರಳಲಿದೆ.
ಭಾರತ ಸರ್ಕಾರ ಏಳು ನಿಯೋಗಗಳನ್ನು ರಚಿಸಿದ್ದು, ವಿಪಕ್ಷಗಳ ಪ್ರಮುಖ ನಾಯಕರಿಗೂ ಅವಕಾಶ ನೀಡಲಾಗಿದೆ. ಕಾಂಗ್ರೆಸ್ನ ಶಶಿ ತರೂರ್, ಬಿಜೆಪಿಯ ರವಿಶಂಕರ್ ಪ್ರಸಾದ್ ಮತ್ತು ಬೈಜಯಂತ್ ಪಾಂಡಾ, ಜೆಡಿಯುನ ಸಂಜಯ್ ಕುಮಾರ್ ಝಾ, ಎನ್ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆ ಶ್ರೀಕಾತ್ ಶಿಂಧೆ ಮತ್ತು ಡಿಎಕೆಯ ಕನಿಮೋಳಿ ನೇತೃತ್ವ ವಹಿಸಲಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ 'ಉಗ್ರ ಮುಖ' ವಿಶ್ವದ ಮುಂದೆ ಬಹಿರಂಗಕ್ಕೆ ಸರ್ವಪಕ್ಷಗಳ ನಿಯೋಗ ರಚಿಸಿದ ಕೇಂದ್ರ
ಭಾರತದ ತಂತ್ರ 'ನಕಲು' ಮಾಡಿದ ಪಾಕಿಸ್ತಾನ: ನಮ್ಮಂತೆ 'ರಾಜತಾಂತ್ರಿಕ ನಿಯೋಗ' ರಚಿಸಲು ನಿರ್ಧಾರ