ಬದೌನ್: ಉತ್ತರ ಪ್ರದೇಶದ ನ್ಯಾಯಾಲಯ ಸಂಕೀರ್ಣದಲ್ಲಿದ್ದ ಜನ ಅಪರೂಪದ ಗಳಿಗೆಯೊಂದಕ್ಕೆ ಸಾಕ್ಷಿಯಾದರು. ಹಲವು ವರ್ಷಗಳಿಂದ ಪರಸ್ಪರ ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರು ಯುವತಿಯರು ಮಂಗಳವಾರ ನ್ಯಾಯಾಲಯದ ಆವರಣದೊಳಗಿನ ಶಿವ ದೇವಸ್ಥಾನದಲ್ಲಿ ಹಾರಗಳನ್ನು ಬದಲಾಯಿಸಿಕೊಂಡ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು.
ಈ ಇಬ್ಬರ ಯುವತಿಯರು ಇಂತಹ ಹೆಜ್ಜೆ ಇಡಲು ಪ್ರಮುಖ ಕಾರಣ ಎಂದರೆ, ಇವರು "ಪುರುಷರನ್ನು ಬಯಸುವುದಿಲ್ಲ" ವಂತೆ. ಇದೇ ಕಾರಣಕ್ಕೆ ಇವರಿಬ್ಬರು ಪರಸ್ಪರ ಹಾರ ಬದಲಿಸಿಕೊಂಡು ಸಹ ಜೀವನ ನಡೆಸಲು ಸಜ್ಜಾಗಿದ್ದಾರೆ.
"ನಮ್ಮ (ಸಲಿಂಗ) ವಿವಾಹವನ್ನು ಕಾನೂನುಬದ್ಧವಾಗಿ ಗುರುತಿಸಲಾಗುವುದಿಲ್ಲ ಎಂದು ನಮಗೆ ಹೇಳಲಾಯಿತು. ಆದ್ದರಿಂದ ನಾವು ಪರಸ್ಪರ ಭರವಸೆ ನೀಡಿದ್ದೇವೆ - ನಾವು ಕಾನೂನುಬದ್ಧವಾಗಿ ಮದುವೆಯಾಗಲು ಸಾಧ್ಯವಾಗದಿದ್ದರೆ, ನಾವು ನಮ್ಮ ಉಳಿದ ಜೀವನವನ್ನು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ಕಳೆಯುತ್ತೇವೆ ಎಂದು ಈ ಇಬ್ಬರು ಹೇಳಿದ್ದಾರೆ.
"ನಾವಿಬ್ಬರೂ ಪುರುಷರೊಂದಿಗೆ ಇರಲು ಬಯಸುವುದಿಲ್ಲವಾದ್ದರಿಂದ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಮುಂದೆ ಸಂತೋಷದ ಜೀವನಕ್ಕಾಗಿ ನಾವಿಬ್ಬರೂ ಪರಸ್ಪರ ಒಪ್ಪಿಕೊಂಡಿದ್ದೇವೆ" ಎಂದು ಈ ಇಬ್ಬರು ಯುವತಿಯರು ಹೇಳಿಕೊಂಡಿದ್ದಾರೆ.
ವಕೀಲರನ್ನು ಭೇಟಿ ಮಾಡಿದ್ದ ಈ ಯುವತಿಯರು: ಇಂದು ಬೆಳಗ್ಗೆ ಇಬ್ಬರೂ ಮಹಿಳೆಯರು ಬದೌನ್ ಕಲೆಕ್ಟರೇಟ್ ಆವರಣದಲ್ಲಿರುವ ವಕೀಲ ದಿವಾಕರ್ ವರ್ಮಾ ಅವರ ಕೊಠಡಿಯನ್ನು ತಲುಪಿ, ಪರಸ್ಪರ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದರು. ತಾವಿಬ್ಬರೂ ಆತ್ಮೀಯ ಸ್ನೇಹಿತರು ಮತ್ತು ಕಳೆದ ಮೂರು ತಿಂಗಳಿನಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ಅವರು ಅವರಿಗೆ ತಿಳಿಸಿದರು. ಕಾನೂನುಬದ್ಧ ವಿವಾಹದ ನಂತರ ಪತಿ - ಪತ್ನಿಯಾಗಿ ಒಟ್ಟಿಗೆ ವಾಸಿಸಲು ಬಯಸುತ್ತೇವೆ ಎಂದು ಅವರು ಹೇಳಿದಾಗ, ವರ್ಮಾ ತಮ್ಮ ಮದುವೆಯನ್ನು ಕಾನೂನುಬದ್ಧವಾಗಿ ಗುರುತಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಸ್ಪರ ಹೂಮಾಲೆ ಬದಲಿಸಿಕೊಂಡ ಸಲಿಂಗ ಜೋಡಿ: ನಂತರ ಇಬ್ಬರೂ ಕಲೆಕ್ಟರೇಟ್‌ನಲ್ಲಿರುವ ಶಿವ ದೇವಾಲಯದಲ್ಲಿ ಹೂಮಾಲೆಗಳನ್ನು ಬದಲಾಯಿಸಿಕೊಂಡರು ಮತ್ತು ತಮ್ಮ ಜೀವನದುದ್ದಕ್ಕೂ ಪರಸ್ಪರ ಒಟ್ಟಿಗೆ ಇರುವ ಪ್ರತಿಜ್ಞೆ ಮಾಡಿದರು. ನಮಗೆ ಪುರುಷರು ಬೇಡ, ಅದಕ್ಕಾಗಿಯೇ ನಾವು ಒಟ್ಟಿಗೆ ಇರಲು ನಿರ್ಧರಿಸಿದ್ದೇವೆ. ನಮ್ಮ ಕುಟುಂಬ ಸದಸ್ಯರು ನಮ್ಮನ್ನು ಒಪ್ಪಿಕೊಂಡರೆ ಒಳ್ಳೆಯದು.. ಇಲ್ಲದಿದ್ದರೂ ನಮಗೆ ಯಾವುದೇ ಬೇಸರವಿಲ್ಲ. ನಾವು ಅವರಿಂದ ದೂರವಿರುತ್ತೇವೆ ಮತ್ತು ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸುತ್ತೇವೆ ಎಂದು ಸಲಿಂಗ ದಂಪತಿ ಹೇಳಿದರು.
ವಕೀಲರು ಹೇಳಿದ್ದಿಷ್ಟು: ವಕೀಲ ದಿವಾಕರ್ ವರ್ಮಾ ಅವರು ಈ ಬಗ್ಗೆ ಮಾತನಾಡಿ, ಇಬ್ಬರೂ ಹುಡುಗಿಯರು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿ ನಮ್ಮ ಬಳಿಗೆ ಬಂದ್ದಿದ್ದರು ಎಂದು ಹೇಳಿದರು. ಹಿಂದೆ ಹಲವಾರು ಪುರುಷರು ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವುದರಿಂದ ಅವರು ಸಮಾಜದಲ್ಲಿ ಪುರುಷರನ್ನು ಇಷ್ಟಪಡುವುದಿಲ್ಲ ಎಂದು ಸಹ ಅವರು ನಮ್ಮ ಬಳಿ ಹೇಳಿಕೊಂಡರು ಎಂದು ವಕೀಲರು ತಿಳಿಸಿದರು.
ಇದನ್ನು ಓದಿ:ಕೆಳಗಿಳಿಯುತ್ತಿದೆ ಚಿನ್ನದ ದರ; ಮೇ 13 ರಂದು ಎಷ್ಟಿದೆ ಬಂಗಾರದ ಬೆಲೆ?