ನವದೆಹಲಿ: ಆಪರೇಷನ್ ಸಿಂಧೂರ ವೇಳೆ ಮೇ 9 ರಂದು ಪಾಕಿಸ್ತಾನದ ಕರಾಚಿ ಬಂದರು ಸೇರಿದಂತೆ ಅವರ ನೌಕಾ ಮತ್ತು ಭೂ ಸೇನಾ ಶಿಬಿರಗಳ ಮೇಲೆ ಭಾರತೀಯ ನೌಕಾ ಪಡೆ ದಾಳಿ ಮಾಡಿ, ಧ್ವಂಸಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು ಎಂದು ಭಾರತೀಯ ನೌಕಾ ಕಾರ್ಯಾಚರಣೆಯ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ ಎನ್ ಪ್ರಮೋದ್ ಭಾನುವಾರ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಮೂರು ಪಡೆಗಳ ಕಮಾಂಡರ್ಸ್ಗಳ ಜಂಟಿ ಮಾಧ್ಯಮಗೋಷ್ಠಿಯಲ್ಲಿ ವೈಸ್ ಅಡ್ಮಿರಲ್ ಪ್ರಮೋದ್ ಮಾತನಾಡಿದರು. ಪಾಕ್ನಲ್ಲಿ ನಿಖರ ದಾಳಿ ಮಾಡುವ ಎಲ್ಲ ಸಾಮರ್ಥ್ಯವನ್ನು ನೌಕಾ ಪಡೆ ಹೊಂದಿತ್ತು. ಆದರೆ ಭಾರತ ಸರ್ಕಾರದ ಸೂಚನೆಗಾಗಿ ಕಾಯುತ್ತಿದ್ದೇವು ಎಂದು ಹೇಳಿದ್ದಾರೆ.
ಏಪ್ರಿಲ್ 22 ರಂದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ಹೇಡಿತನದ ದಾಳಿ ನಡೆಸಿದ ನಂತರ, ಭಾರತೀಯ ನೌಕಾಪಡೆಯು ತಕ್ಷಣವೇ ತನ್ನ ಸೈನಿಕರು, ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಯುದ್ಧ ವಿಮಾನಗಳನ್ನು ಪೂರ್ಣ ಯುದ್ಧ ಸನ್ನದ್ಧತೆಯಲ್ಲಿ ನಿಯೋಜಿಸಿತ್ತು ಎಂದರು.
ಭಯೋತ್ಪಾದಕ ದಾಳಿಯ 96 ಗಂಟೆಗಳ ಒಳಗೆ ನಾವು ಅರೇಬ್ಬಿ ಸಮುದ್ರದಲ್ಲಿ ನಮ್ಮ ಶಸ್ತ್ರಾಸ್ತ್ರಗಳು ಮತ್ತು ಯುದ್ಧನೌಕೆಗಳ ಸನ್ನದ್ಧತೆಯನ್ನು ಪರೀಕ್ಷಿಸಿದ್ದೆವು. ನಮ್ಮ ಪಡೆಗಳು ಉತ್ತರ ಅರೇಬ್ಬಿ ಸಮುದ್ರದಲ್ಲಿ ಶತ್ರುಗಳ ವಿರುದ್ಧ ನಿರ್ಣಾಯಕ ಕ್ರಮಕ್ಕಾಗಿ ಸಂಪೂರ್ಣ ಸಾಮರ್ಥ್ಯ ಮತ್ತು ಸಿದ್ಧತೆಯೊಂದಿಗೆ ನಿಯೋಜಿಸಲ್ಪಟ್ಟಿವೆ, ಇದರಿಂದಾಗಿ ಕರಾಚಿ ಸೇರಿದಂತೆ ಸಮುದ್ರ ಮತ್ತು ಭೂಭಾಗದ ಆಯ್ದ ಕಡೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಅವರು ವಿವರಿಸಿದರು.
ನಮ್ಮ ಪ್ರತಿಕ್ರಿಯೆಯನ್ನು ಮೊದಲ ದಿನದಿಂದಲೇ ಅಳೆಯಲಾಗಿದೆ. ಪಾಕಿಸ್ತಾನದ ಯಾವುದೇ ಪ್ರತಿಕೂಲ ಕ್ರಮಕ್ಕೆ ನಿರ್ಣಾಯಕವಾಗಿ ಪ್ರತಿಕ್ರಿಯಿಸಲು ಭಾರತೀಯ ನೌಕಾಪಡೆಯನ್ನು ಸಮುದ್ರದಲ್ಲಿ ನಿಯೋಜಿಸಿದ್ದೆವು ಎಂದು ವೈಸ್ ಅಡ್ಮಿರಲ್ ಪ್ರಮೋದ್ ಹೇಳಿದರು.
ಪರಿಸ್ಥಿತಿ ಉಲ್ಬಣಗೊಳಿಸಲು ಧೈರ್ಯ ಮಾಡಿದರೆ, ಏನಾಗಲಿದೆ ಎಂದು ಪಾಕ್ಗೆ ತಿಳಿದಿದೆ ಎಂದು ಪ್ರಮೋದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಮೇ 7ರಂದು ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಮೇ 7ರಿಂದ 10ರ ನಡುವೆ ಭಾರತದ ದಾಳಿಗೆ, ಪಾಕಿಸ್ತಾನ ಸೇನೆಯ 35ರಿಂದ 40 ಯೋಧರು ಮೃತಪಟ್ಟಿದ್ದಾರೆ ಎಂದು ಮಿಲಿಟರಿ ಕಾರ್ಯಾಚರಣೆಗಳ ಡೈರೆಕ್ಟರ್ ಜನರಲ್ (ಡಿಜಿಎಂಒ) ರಾಜೀವ್ ಘಾಯ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ: ಪಿಒಕೆ ಹಿಂಪಡೆಯುವುದು, ಉಗ್ರರ ಹಸ್ತಾಂತರ ಬಗ್ಗೆಯಷ್ಟೇ ಪಾಕ್ ಜೊತೆ ಮಾತುಕತೆ: ಭಾರತ ಸ್ಪಷ್ಟ ಸಂದೇಶ
ಇದನ್ನೂ ಓದಿ: 9 ಭಯೋತ್ಪಾದಕ ನೆಲೆಗಳ ಮೇಲಿನ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರ ಹತ್ಯೆ: DGMO ಲೆ.ಜ.ರಾಜೀವ್ ಘಾಯ್