ಅಜ್ಮೀರ್(ರಾಜಸ್ಥಾನ): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ (ತಿದ್ದುಪಡಿ) ಕಾನೂನಿನ ವಿರುದ್ಧ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಹಿಂಸಾಚಾರ ನಡೆಯುತ್ತಿದೆ. ಈಗಾಗಲೇ ಮೂವರನ್ನು ಹತ್ಯೆ ಮಾಡಲಾಗಿದೆ. 150ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ, ಕಾನೂನಿನ ವಿರುದ್ಧ ಪ್ರಚೋದನಕಾರಿ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿರುವ ಆರೋಪದಡಿ ಕರ್ನಾಟಕದ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೌನ್ಸಿಲರ್ನನ್ನು ರಾಜಸ್ಥಾನದ ಅಜ್ಮೀರ್ನಲ್ಲಿ ಮಂಗಳವಾರ ಬಂಧಿಸಲಾಗಿದೆ. ಆರೋಪಿಯನ್ನು ಅಲ್ಲಿನ ಪೊಲೀಸರು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಕಬೀರ್ ಖಾನ್ ಬಂಧಿತ ಕಾಂಗ್ರೆಸ್ ಮುಖಂಡ. ಇವರು ದಾವಣಗೆರೆ ಜಿಲ್ಲೆಯ ಮಾಜಿ ಪುರಸಭೆ ಸದಸ್ಯ. ಸಾಮಾಜಿಕ ಮಾಧ್ಯಮದಲ್ಲಿ ವಕ್ಫ್ ಕಾಯ್ದೆಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲು ಕರೆ ನೀಡಿದ್ದ ಆರೋಪ ಇವರ ಮೇಲಿದೆ. ಇವರು ಬಿಡುಗಡೆ ಮಾಡಿರುವ ವಿಡಿಯೋ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಬಂಧನ ಭೀತಿ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ಪೊಲೀಸರು, ತಂಡ ರಚಿಸಿಕೊಂಡು ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿನ ಪೊಲೀಸರ ಸಹಾಯ ಪಡೆದು ಶೋಧ ಕಾರ್ಯಾಚರಣೆ ನಡೆಸಿದ್ದರು.
ವಿಡಿಯೋದಲ್ಲಿ ಹೇಳಿದ್ದೇನು?: "ಮುಸ್ಲಿಂ ಸಮುದಾಯವು ಈ ಕಾನೂನಿನ ವಿರುದ್ಧ ಬೀದಿಗಿಳಿದು ಹೋರಾಡಬೇಕು. ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಬೇಕು. ಪೋಸ್ಟರ್ಗಳು, ಅರ್ಜಿಗಳು ಸಲ್ಲಿಸುವುದರಿಂದ ಏನೂ ಪ್ರಯೋಜನವಿಲ್ಲ. ಅದಕ್ಕೂ ಮೀರಿ, ಬೇರೊಬ್ಬರ ಪ್ರಾಣ ಬಲಿಕೊಡಲೂ ಸಿದ್ಧವಾಗಿರಬೇಕು" ಎಂದು ಹಿಂಸೆ ಸೃಷ್ಟಿಸುವ ಹೇಳಿಕೆಯನ್ನು ಕಬೀರ್ ಖಾನ್ ವಿಡಿಯೋದಲ್ಲಿ ಹೇಳಿರುವ ಆರೋಪವಿದೆ.
"ವಿನಾಶದಿಂದಲೇ ಕಾನೂನಿನ ವಿರುದ್ಧ ಹೋರಾಟ ನಡೆಸಿದಲ್ಲಿ ಗೆಲುವು ಸಾಧ್ಯ. ಇನ್ನೊಬ್ಬರ ಪ್ರಾಣ ಹರಣಕ್ಕೂ ಸಜ್ಜಾಗಿ" ಎಂದು ಮುಸ್ಲಿಂ ಸಮುದಾಯವನ್ನು ಪ್ರಚೋದಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಎಂದು ಆರೋಪಿಸಲಾಗಿದೆ.
"ಕಾಂಗ್ರೆಸ್ ಮುಖಂಡ ಕಬೀರ್ ಖಾನ್ ಅಜ್ಮೀರ್ನಲ್ಲಿ ಇರುವುದನ್ನು ಕರ್ನಾಟಕ ಪೊಲೀಸರು ಪತ್ತೆ ಮಾಡಿದ್ದರು. ಸ್ಥಳೀಯ ಪೊಲೀಸರು ಕರ್ನಾಟಕ ಪೊಲೀಸರಿಗೆ ನೆರವು ನೀಡಿ, ವಕ್ಫ್ ಕಾನೂನಿನ ವಿರುದ್ಧ ಪ್ರಚೋದನೆ ನೀಡಿದ ಆರೋಪಿಯನ್ನು ಬಂಧಿಸಿದ್ದಾರೆ. ಕಬೀರ್ ಖಾನ್ನನ್ನು ಬಂಧಿಸಿ ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಪೊಲೀಸರು ಕರೆದೊಯ್ದಿದ್ದಾರೆ" ಎಂದು ಅಜ್ಮೀರ್ ನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಜಂಗಿದ್ ಹೇಳಿದ್ದಾರೆ.
ಇದನ್ನೂ ಓದಿ: ಮುರ್ಷಿದಾಬಾದ್ನಿಂದ ನೂರಾರು ಜನ ಪಲಾಯನ; ಜೀವ ಉಳಿಸಿಕೊಳ್ಳಲು ನದಿ ದಾಟಿ ಓಡಿ ಹೋದ ಜನ!