ಆಂಧ್ರ ಪ್ರದೇಶ: ಅಮೆರಿಕದಲ್ಲಿದ್ದ ವಾರ್ಷಿಕ ಒಂದು ಕೋಟಿ ಸಂಬಳದ ಕೆಲಸ ತ್ಯಜಿಸಿ ದೇಶಕ್ಕೆ ಮರಳಿ ನಾಗರಿಕ ಸೇವಾ ಪರೀಕ್ಷೆ ಬರೆದ ಯುವತಿ, ಮಂಗಳವಾರ ಬಿಡುಗಡೆಯಾದ ಫಲಿತಾಂಶದಲ್ಲಿ 467ನೇ ರ‍್ಯಾಂಕ್ ಪಡೆದಿದ್ದಾರೆ. ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯ ಉದಯಗಿರಿಯ ವಿನೀಶಾ ಯುಪಿಎಸ್ಸಿಯಲ್ಲಿ ರ‍್ಯಾಂಕ್ ಪಡೆದ ಯುವತಿ.
ವಿನೀಶಾ ಅವರ ತಾಯಿ ವಿಜಯ ಭಾರತಿ ಗುಂಟೂರು ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಶ್ರೀನಿವಾಸ ರಾಜು ವಿಜಯವಾಡದಲ್ಲಿ ವಿಜಿಲೆನ್ಸ್ ಮತ್ತು ಎನ್ಫೋರ್ಸ್ಮೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದನೇ ತರಗತಿಯಿಂದ ಎಂಟನೇ ತರಗತಿಯ ವರೆಗಿನ ಶಿಕ್ಷಣವನ್ನು ವಿನೀಶಾ ನೆಲ್ಲೂರಿನಲ್ಲಿ ಮುಗಿಸಿದರು. ಒಂಬತ್ತನೇ ತರಗತಿಯಿಂದ ಇಂಟರ್ (ಪಿಯುಸಿ) ವರೆಗಿನ ವಿದ್ಯಾಭ್ಯಾಸವನ್ನು ಹೈದರಾಬಾದ್‌ನಲ್ಲಿ ಮಾಡಿದರು.
ವಿದೇಶದಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲದೇ ಭಾರತಕ್ಕೆ : ಐಐಟಿ ಮದ್ರಾಸ್‌ನಿಂದ ಬಿ.ಟೆಕ್ ಪದವಿ, ಅಮೆರಿಕದಲ್ಲಿರುವ ಯೂನಿರ್ವಸಿಟಿ ಆಫ್ ಪೆನ್ಸಲ್ವೇನಿಯಾದಿಂದ ಸ್ನಾತಕೋತ್ತರ ಪದವಿ ಪಡೆದರು. ನಂತರ ಅಮೆರಿಕ ಸರ್ಕಾರದಲ್ಲಿ ಸೋಶಿಯಲ್ ರಿಸರ್ಚ್ ಆಂಡ್ ಡಾಟಾ ಸೈಂಟಿಸ್ಟ್ ಆಗಿ ಎರಡು ವರ್ಷ ಕೆಲಸ ಮಾಡಿದರು. ಸ್ವದೇಶದಲ್ಲಿ ಓದಿ, ವಿದೇಶದಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲದೇ ವಿನೀಶಾ ಭಾರತಕ್ಕೆ ಮರಳಿದರು.
ನಂತರ ಮನೆಯಲ್ಲಿದ್ದುಕೊಂಡೇ ಯುಪಿಎಸ್ಸಿಗೆ ಸಿದ್ಧತೆ ನಡೆಸಿದರು. 2021 ಮತ್ತು 2022 ರಲ್ಲಿ ಕೇಂದ್ರ ನಾಗರಿಕ ಸೇವಾ ಪರೀಕ್ಷೆ ಬರೆದು ವಿಫಲರಾದರು. ಛಲ ಬಿಡದೆ ಮತ್ತೆ 2023ರಲ್ಲಿ ಪರೀಕ್ಷೆ ಬರೆದು 821ನೇ ರ‍್ಯಾಂಕ್ ಸಾಧಿಸಿದರು. ನಂತರ 2023 ರಲ್ಲಿ ಆಂಧ್ರ ಪ್ರದೇಶದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗ್ರೂಪ್ 1 ಹುದ್ದೆಗೆ ಆಯ್ಕೆಯಾದ ವಿನೀಶಾ, ಪ್ರಸ್ತುತ ಸಿಆರ್ಡಿಎನಲ್ಲಿ ಜಂಟಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸ ಮಾಡುತ್ತಲೇ ಯುಪಿಎಸ್ಸಿಗೆ ತಯಾರಿ ನಡೆಸುತ್ತಾ, ಇದೀಗ 467ನೇ ರ‍್ಯಾಂಕ್ ಗಳಿಸಿದ್ದಾರೆ.
ಮನೆಯಲ್ಲಿದ್ದುಕೊಂಡೇ ಸಿದ್ಧತೆ ನಡೆಸಿದೆ: ಈ ಕುರಿತು ವಿನೀಶಾ ಮಾತನಾಡಿ, "ಅಮೆರಿಕದಲ್ಲಿದ್ದ ವಾರ್ಷಿಕ ಒಂದು ಕೋಟಿ ರೂ ಸಂಬಳದ ಕೆಲಸ ನನಗೆ ತೃಪ್ತಿ ನೀಡಲಿಲ್ಲ. ಸ್ವದೇಶದಲ್ಲಿ ಓದಿ ವಿದೇಶದಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲದೇ ಭಾರತಕ್ಕೆ ಮರಳಿದೆ. ಎರಡುವರೆ ವರ್ಷ ಮನೆಯಲ್ಲಿದ್ದುಕೊಂಡೇ ಸಿದ್ಧತೆ ನಡೆಸಿದೆ. ಕೋಚಿಂಗ್ಗೆ ಹೋಗಲಿಲ್ಲ. ಸ್ವತಃ ನಾನೇ ಸಿದ್ದತೆ ನಡೆಸುತ್ತಾ ಪ್ರತಿ ದಿನ ನ್ಯೂಸ್ ಪೇಪರ್ ಓದಿ ನೋಟ್ಸ್ ತಯಾರು ಮಾಡಿಕೊಳ್ಳುತ್ತಿದ್ದೆ" ಎಂದರು.
ಹೊಸ ವಿಷಯ ತಿಳಿದುಕೊಳ್ಳುವುದು, ಪುಸ್ತಕ ಓದುವುದು ಇಷ್ಟ: "ಎರಡು ಬಾರಿ ವಿಫಲವಾದೇ ಎಂದು ಕುಗ್ಗಲಿಲ್ಲ. ನಿರಂತರವಾಗಿ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಾ, ಹಠದಿಂದ ಪರೀಕ್ಷೆ ತಯಾರಿ ನಡೆಸಿದೆ. ಸಣ್ಣ ವಯಸ್ಸಿನಿಂದಲೂ ಜನಸೇವೆ ಮಾಡುವುದು ಇಷ್ಟ. ಈಗ ನನ್ನ ಕೈಯಲ್ಲಾದ್ಟು ಜನಸೇವೆ ಮಾಡುತ್ತೇನೆ. ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು, ಪುಸ್ತಕಗಳನ್ನು ಓದುವುದು ಎಂದರೆ ನನಗೆ ತುಂಬಾ ಇಷ್ಟ" ಎಂದು ಹೇಳಿದರು.
ಇದನ್ನೂ ಓದಿ: UPSC ಅಂತಿಮ ಫಲಿತಾಂಶ ಪ್ರಕಟ: ಶಕ್ತಿ ದುಬೆ ಟಾಪರ್; ಹರ್ಷಿತಾ ಗೋಯಲ್ ದ್ವಿತೀಯ, ದೋಂಗ್ರೆ ಅರ್ಚಿತ್ ಪರಾಗ್‌ಗೆ 3ನೇ ಸ್ಥಾನ