ವೆಲ್ಲೂರು(ತಮಿಳುನಾಡು): ಕೇಂದ್ರ ಸರ್ಕಾರ ವಕ್ಫ್ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಹೋರಾಟಗಳೂ ನಡೆಯುತ್ತಿವೆ. ಈ ಮಧ್ಯೆ, ತಮಿಳುನಾಡಿನಲ್ಲಿ ವಕ್ಫ್ ಆಸ್ತಿ ಕುರಿತು ಹೊಸ ವಿವಾದ ತಲೆದೋರಿದೆ.
ವೆಲ್ಲೂರು ಜಿಲ್ಲೆಯ ವಿರಿನಿಚಿಪುರಂ ಬಳಿಯ ಕಾಟುಕೊಳ್ಳೈ ಗ್ರಾಮದ 300 ನಿವಾಸಿಗಳಿಗೆ ವಿರಿನಿಚಿಪುರಂ ಹಜರತ್ ಸಯ್ಯದ್ ಅಲಿ ಸುಲ್ತಾನ್ ಷಾ ದರ್ಗಾ ಪರವಾಗಿ ನೋಟಿಸ್ ನೀಡಲಾಗಿದ್ದು, ಇದು ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಎಂದು ತಿಳಿಸಿದೆ. ಫೆಬ್ರವರಿ 14ರಂದು ಈ ನೋಟಿಸ್ ನೀಡಲಾಗಿದೆ. ಇಲ್ಲಿನ ಜನರು ಸುಮಾರು 5 ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವಕ್ಫ್ ಆಸ್ತಿಗಳನ್ನು ಬಳಸುತ್ತಿರುವ ಜನರು ಬಾಡಿಗೆ/ಶುಲ್ಕ(ಕಂದಾಯ) ಪಾವತಿಸಬೇಕು. ಇಲ್ಲವಾದಲ್ಲಿ ಜಾಗವನ್ನು ಖಾಲಿ ಮಾಡಬೇಕು. ತಮ್ಮ ಈ ಮನವಿಯನ್ನು ಪರಿಶೀಲಿಸಿ ನ್ಯಾಯ ಒದಗಿಸುವಂತೆ ವೆಲ್ಲೂರು ಜಿಲ್ಲಾಧಿಕಾರಿ ವಿ.ಆರ್.ಸುಬ್ಬುಲಕ್ಷ್ಮಿ ಅವರಿಗೆ ಮನವಿಯನ್ನೂ ಸಲ್ಲಿಸಲಾಗಿದೆ.
ಜನರು ಹೇಳೋದೇನು?: ವಕ್ಫ್ ನೋಟಿಸ್ಗೆ ಗ್ರಾಮಸ್ಥರು ಆಘಾತ ಮತ್ತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾವು ಇಲ್ಲಿ ಸುಮಾರು 3-4 ತಲೆಮಾರುಗಳಿಂದ ವಾಸಿಸುತ್ತಿದ್ದೇವೆ. ಇದ್ದಕ್ಕಿದ್ದಂತೆ, ವಕ್ಫ್ ಆಸ್ತಿ ಎಂದು ಘೋಷಿಸಲು ನೋಟಿಸ್ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಅಂದಾಜು 150 ಕುಟುಂಬಗಳು ವಾಸಿಸುತ್ತಿವೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹಿಂದಿನ ಪ್ರಕರಣ: 2022ರಲ್ಲಿ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ತಿರುಚನಾಪಳ್ಳಿಯ ತಿರುಚೆಂದೂರೈ ಗ್ರಾಮವನ್ನು ವಕ್ಫ್ ಬೋರ್ಡ್ ತನ್ನದು ಎಂದು ಘೋಷಿಸಿಕೊಂಡಿತ್ತು. ಗ್ರಾಮದ ವ್ಯಕ್ತಿಯೊಬ್ಬರು ಮಗಳ ಮದುವೆ ಮಾಡಿಸಲು ತಮ್ಮ ಭೂಮಿಯನ್ನು ಮಾರಾಟ ಮಾಡಲು ಮುಂದಾದಾಗ, ವಕ್ಫ್ ಅಧಿಕಾರಿಗಳು ಖ್ಯಾತೆ ತೆಗೆದಿದ್ದರು. ಇಡೀ ಗ್ರಾಮವೇ ವಕ್ಫ್ ಆಸ್ತಿಯಾಗಿದೆ. ಭೂಮಿಯನ್ನು ಬಿಕರಿ ಮಾಡಲು ಬರುವುದಿಲ್ಲ ಎಂದಿದ್ದರು. ಹಾಗೊಂದು ವೇಳೆ, ಮಾರಾಟ ಮಾಡಲೇಬೇಕೆಂದಲ್ಲಿ ವಕ್ಫ್ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಬೇಕು ಎಂದು ಸೂಚಿಸಿತ್ತು.
ಇದರ ಜೊತೆಗೆ, ಗ್ರಾಮದಲ್ಲಿನ 1,500 ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ದೇವಸ್ಥಾನವೂ ವಕ್ಫ್ ಮಂಡಳಿಗೆ ಸೇರಿದೆ ಎಂದು ಅಧಿಕಾರಿಗಳು ವಾದಿಸಿದ್ದರು. 369 ಎಕರೆ ವಿಸ್ತೀಣದಲ್ಲಿರುವ ಇರುವ ಸುಂದರೇಶ್ವರ ದೇವಾಲಯವು ವಕ್ಫ್ ಗೆ ಹೇಗೆ ಸೇರುತ್ತದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದ್ದರು.
ಇದನ್ನೂ ಓದಿ: ವಕ್ಫ್ ಮಸೂದೆ ವಿರೋಧಿಸಿ ಪ್ರಚೋದನಕಾರಿ ಹೇಳಿಕೆ: ಪ್ರಮುಖ ಆರೋಪಿ ಕಬೀರ್ ಖಾನ್ ಬಂಧನ
ಮುರ್ಷಿದಾಬಾದ್ನಿಂದ ನೂರಾರು ಜನ ಪಲಾಯನ; ಜೀವ ಉಳಿಸಿಕೊಳ್ಳಲು ನದಿ ದಾಟಿ ಓಡಿ ಹೋದ ಜನ!