ಜಗ್ತಿಯಾಲ್, ತೆಲಂಗಾಣ: ತನ್ನಲ್ಲಿ ಆಳವಾಗಿ ಬೇರೂರಿರುವ ಆಧ್ಯಾತ್ಮಿಕ ಸಂಸ್ಕೃತಿಗೆ ಹೆಸರುವಾಸಿ ಈ ಊರು. ಜಗ್ತಿಯಾಲ್ ಜಿಲ್ಲೆಯ ಮೆಟ್ಪಲ್ಲಿ ಮಂಡಲದಲ್ಲಿರುವ ಪ್ರಶಾಂತವಾದ ಗ್ರಾಮ ವೆಲ್ಲುಲ್ಲ. ಪ್ರಹಲ್ಲಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಹಾಗೂ ಯಲ್ಲಮ್ಮ ದೇವಸ್ಥಾನಗಳಿಗೆ ಪ್ರಸಿದ್ಧಿ ಪಡೆದಿರುವ ವೆಲ್ಲುಲ್ಲ ಗ್ರಾಮದಲ್ಲಿ ಆಂಜನೇಯ ಸ್ವಾಮಿಗೆ ಸಮರ್ಪಿತವಾದ 40ಕ್ಕೂ ಹೆಚ್ಚು ದೇವಾಲಯಗಳಿವೆ.
ಗ್ರಾಮದ ಪ್ರತಿಯೊಂದು ಬೀದಿಗಳಲ್ಲೂ ಹನುಮನ ದೇವಾಲಯಗಳಿದ್ದು, ಇಡೀ ಊರೇ ವಿಶೇಷ ಪೂಜಾ ಸ್ಥಳವಾಗಿ ಗೋಚರಿಸುತ್ತದೆ. ಹನುಮ ಜಯಂತಿಯಂದು ಮಾತ್ರ ಇಲ್ಲಿನ ದೇವಾಲಯಗಳು ಹನುಮ ಭಕ್ತರಿಂದ ತುಂಬಿ ತುಳುಕುತ್ತದೆ. ಭಕ್ತರು ಸೇರುವುದರಿಂದ ಇಡೀ ಗ್ರಾಮವೇ ಜೀವಂತಿಕೆಯಿಂದ ಕೂಡಿರುತ್ತದೆ. ಸ್ಥಳೀಯರಿಂದ ಪ್ರೀತಿಯಿಂದ ಹೆಸರಿಸಲ್ಪಟ್ಟ ಪ್ರತಿಯೊಂದು ದೇವಾಲಯವು ಜನರ ಭಕ್ತಿಗೆ ಸಾಕ್ಷಿಯಾಗಿದೆ.
16ನೇ ಶತಮಾನಕ್ಕೂ ಹಿಂದಿನ ಇತಿಹಾಸ: ಈ ಗ್ರಾಮದ ಐತಿಹಾಸಿಕ ಹಿನ್ನೆಲೆಯನ್ನು ನೋಡುವುದಾದರೆ, ಈ ಗ್ರಾಮ 16ನೇ ಶತಮಾನದಷ್ಟು ಹಿಂದಿನದು. ಜೈನ ಆಳ್ವಿಕೆಯ ಸಮಯದಲ್ಲಿ 200ಕ್ಕೂ ಹೆಚ್ಚು ಬ್ರಾಹ್ಮಣ ಕುಟುಂಬಗಳು ಇಲ್ಲಿ ನೆಲೆಸಿದ್ದವು ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ನೆಲೆಸಿದ್ದ ಕುಟುಂಬಗಳಲ್ಲಿ ಯಾರಾದರೂ ಅನಾರೋಗ್ಯಕ್ಕೊಳಗಾದಲ್ಲಿ, ಅವರು ಗುಣಮುಖರಾಗುವಂತೆ ಹರಕೆ ಕಟ್ಟಿಕೊಳ್ಳಲಾಗುತ್ತಿತ್ತು. ಅವರು ಗುಣಮುಖರಾದ ನಂತರ ಆಂಜನೇಯ ಸ್ವಾಮಿಯ ವಿಗ್ರಹವನ್ನು ಸ್ಥಾಪಿಸುತ್ತಿದ್ದರು. ಇದು ಒಂದು ಪದ್ಧತಿಯಂತೆಯೇ ಮುಂದುವರಿದು ಕಾಲಾನಂತರದಲ್ಲಿ ಹಲವಾರು ಆಂಜನೇಯ ಸ್ವಾಮಿಯ ದೇವಾಲಯಗಳ ಸ್ಥಾಪನೆಗೆ ಕಾರಣವಾಯಿತು ಎನ್ನುತಾರೆ ಈ ಊರಿನ ಹಿರಿಯರು.
ಕೇಸರಿಮಯವಾಗುವ ವೆಲ್ಲುಲ್ಲ: ಹನುಮ ಜಯಂತಿಯಂದು ಇಡೀ ವೆಲ್ಲುಲ್ಲ ಗ್ರಾಮವೇ ಕೇಸರಿಮಯವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹನುಮಾನ್ ದೀಕ್ಷೆಯನ್ನು ತೆಗೆದುಕೊಂಡು, 41 ದಿನಗಳ ಕಾಲ ನಡೆಯುವ ಆಚರಣೆಗಳನ್ನು ಮಾಡಲು ಇಲ್ಲಿ ಸೇರುತ್ತಾರೆ. ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ತಮ್ಮ ಕುಟುಂಬಗಳಿಗೆ ಸಂತೋಷ, ಆರೊಗ್ಯ, ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ಇಲ್ಲಿನ ಜನರಲ್ಲಿ ದೃಢವಾದ ನಂಬಿಕೆ ಇದೆ.
ಇದನ್ನೂ ಓದಿ: ಹನುಮ ಜಯಂತಿ; ಮನೆಯಲ್ಲೇ ಹನುಮಂತನನ್ನು ಪೂಜಿಸುವ ಸರಳ ವಿಧಾನ ಇಲ್ಲಿದೆ