ನವದೆಹಲಿ: ದೆಹಲಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಭಾಗವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಮುಖ ಯೋಜನೆಯೊಂದಕ್ಕೆ ಅನುಮೋದನೆ ನೀಡಿದೆ.
ದಕ್ಷಿಣ ದೆಹಲಿಯ ಮಹಿಪಾಲ್‌ಪುರದ ಶಿವಮೂರ್ತಿ ಚೌಕ್ ಮತ್ತು ವಸಂತ್ ಕುಂಜ್‌ನ ನೆಲ್ಸನ್ ಮಂಡೇಲಾ ಮಾರ್ಗದ ನಡುವೆ ಸುಮಾರು ಐದು ಕಿ.ಮೀ ಉದ್ದದ ಸುರಂಗದಲ್ಲಿ ಮೇಲೆ ಮತ್ತು ಕೆಳಗೆ ಸಂಚಾರಕ್ಕಾಗಿ ಅನುವಾಗುವಂತೆ ಎರಡು ಭೂಗತ ಟ್ಯೂಬ್ ರಸ್ತೆಗಳು ನಿರ್ಮಾಣವಾಗಲಿವೆ. ಪ್ರತಿ ರಸ್ತೆ ಮೂರು ಪಥಗಳನ್ನು ಹೊಂದಿರುತ್ತದೆ, ಅಂದರೆ, ಒಟ್ಟು ಆರು ಪಥಗಳು ಸಂಚಾರಕ್ಕೆ ಲಭ್ಯವಿರಲಿವೆ. ಈ ಸುರಂಗವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಮಿಸುತ್ತಿದ್ದು, ಇದಕ್ಕೆ 3500 ಕೋಟಿ ರೂ. ವೆಚ್ಚವಾಗಲಿದೆ.
ಈ ಯೋಜನೆ ಕುರಿತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮಾತನಾಡಿ, ದೆಹಲಿಯ ಜನರು ಡಬಲ್ ಇಂಜಿನ್ ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಇದರ ಅಡಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆರು ಹೊಸ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದೆ. ಆ ಯೋಜನೆಗಳಲ್ಲಿ ಐದು ಕಿ.ಮೀ ಉದ್ದದ ಸುರಂಗ ಮಾರ್ಗವೂ ಸೇರಿದೆ. ಇದು ದಕ್ಷಿಣ ದೆಹಲಿ ಮತ್ತು ಎನ್ಸಿಆರ್ನ ಸಂಚಾರವನ್ನು ಸುಗಮಗೊಳಿಸಲಿದೆ. ಜೊತೆಗೆ ವಾಯು ಮಾಲಿನ್ಯ ನಿಯಂತ್ರಿಸುತ್ತದೆ ಎಂದರು.
ಈ ಸುರಂಗದಲ್ಲಿ ಮೇಲೆ ಮತ್ತು ಕೆಳಗೆ ಸಂಚಾರಕ್ಕಾಗಿ ಎರಡು ಭೂಗತ ಟ್ಯೂಬ್ ರಸ್ತೆಗಳನ್ನು ನಿರ್ಮಿಸಲಾಗುವುದು. ಇವುಗಳಲ್ಲಿ ಪ್ರತಿಯೊಂದೂ ಮೂರು ಪಥಗಳನ್ನು ಹೊಂದಿರುತ್ತದೆ, ಅಂದರೆ, ಒಟ್ಟು ಆರು ಪಥಗಳು ಸಂಚಾರಕ್ಕೆ ಲಭ್ಯವಿರುತ್ತವೆ. ಈ ರಸ್ತೆಯು ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯವಸ್ಥೆ, ಅಗ್ನಿಶಾಮಕ ವ್ಯವಸ್ಥೆ, ಸಿಸಿಟಿವಿ, ಕಂಟ್ರೋಲ್ ರೂಂ, ತುರ್ತು ನಿರ್ಗಮನ ಮತ್ತು ಅಡ್ಡ ಮಾರ್ಗ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ತಿಳಿಸಿದರು.
ಶಿವಮೂರ್ತಿ ಮಹಿಪಾಲಪುರ (ದ್ವಾರಕಾ ಎಕ್ಸ್‌ಪ್ರೆಸ್‌ವೇ) ದಿಂದ ನೆಲ್ಸನ್ ಮಂಡೇಲಾ ಮಾರ್ಗದ (ವಸಂತ್ ಕುಂಜ್) ವರೆಗಿನ ಈ ಸುರಂಗ ಮಾರ್ಗವು ಅನೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದಲ್ಲದೆ, ಸಿಗ್ನಲ್ ಮುಕ್ತಗೊಳಿಸುತ್ತದೆ.
ಇತ್ತೀಚೆಗೆ, ಸಿಎಂ ರೇಖಾ ಗುಪ್ತಾ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರು. ನಂತರ ನಿತಿನ್ ಗಡ್ಕರಿ ಅವರು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರವನ್ನು ಸುಗಮಗೊಳಿಸಲು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು 24,000 ಕೋಟಿ ರೂ.ಗಳ ಹಲವು ಯೋಜನೆಗಳಿಗೆ ಅನುಮೋದನೆ ನೀಡಿದರು. ಇದರಲ್ಲಿ ಐದು ಕಿ.ಮೀ ಉದ್ದದ ಸುರಂಗ ರಸ್ತೆಯೂ ಸೇರಿದೆ.
ಇದನ್ನೂ ಓದಿ: ಜಗತ್ತಿನ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆಗಾಗಿ 17 ವರ್ಷ ಶ್ರಮಿಸಿದ ಬೆಂಗಳೂರಿನ IIScಯ ಪ್ರೊ.ಜಿ.ಮಾಧವಿ ಲತಾ
ಇದನ್ನೂ ಓದಿ: ಚೆನಾಬ್ ರೈಲ್ವೆ ಸೇತುವೆ ಉದ್ಘಾಟನೆಗೆ ಕ್ಷಣಗಣನೆ: 'ಜಮ್ಮು ಕಾಶ್ಮೀರಕ್ಕೆ ವಿಶೇಷ ದಿನ'ವೆಂದ ಪ್ರಧಾನಿ