ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ) : ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಬಾಗಿಲು ಹಾಕಿದ್ದ ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣಗಳು ಮತ್ತೆ ಪ್ರವಾಸಿಗರನ್ನು ಬರಮಾಡಿಕೊಳ್ಳಲು ಸಿದ್ಧವಾಗಿವೆ. ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಅವರು ಕಣಿವೆಯಲ್ಲಿನ 8 ಪ್ರವಾಸಿ ತಾಣಗಳನ್ನು ಪುನಃ ತೆರೆಯುವುದಾಗಿ ಘೋಷಿಸಿದ ಬೆನ್ನಲ್ಲೇ, ಎಲ್ಲ ಸ್ಥಳಗಳನ್ನು ಜನರಿಗೆ ಮುಕ್ತಗೊಳಿಸಲಾಗಿದೆ.
ಉಗ್ರ ದಾಳಿಯ ಬಳಿಕ ಬಣಗುಡುತ್ತಿದ್ದ ಪ್ರವಾಸೋದ್ಯಮಕ್ಕೆ ಮರುಜೀವ ನೀಡಲು ಅಲ್ಲಿನ ಸರ್ಕಾರ ಮತ್ತು ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಅವರು ಯೋಜಿಸಿದ್ದಾರೆ. ಜೊತೆಗೆ ಜಮ್ಮು- ಕಾಶ್ಮೀರವೂ ಸಹಜಸ್ಥಿತಿಗೆ ಹೊರಳಿದ್ದು, ಪ್ರವಾಸಿಗರ ಆಗಮನಕ್ಕೆ ಕಾದಿದೆ.
ಯಾವೆಲ್ಲಾ ಸ್ಥಳಗಳು ಪುನಾರಂಭ: ಇಂದಿನಿಂದ ಪುನಾರಂಭಗೊಂಡ ಸ್ಥಳಗಳಲ್ಲಿ ಸುಂದರವಾದ ಬೇತಾಬ್ ಕಣಿವೆ, ಪ್ರಶಾಂತವಾದ ವೆರಿನಾಗ್, ಕೊಕೆರ್ನಾಗ್, ಅಚಬಲ್ ಮೊಘಲ್ ಉದ್ಯಾನಗಳು ಮತ್ತು ಇತ್ತೀಚೆಗೆ ಉಗ್ರ ದಾಳಿಗೆ ತುತ್ತಾಗಿ ರಕ್ತಸಿಕ್ತ ಅಧ್ಯಾಯ ಕಂಡಿದ್ದ ಪಹಲ್ಗಾಮ್‌ನ ಬಹು ಉದ್ಯಾನವನಗಳೂ ಸೇರಿವೆ.
ಈ ನಿರ್ಧಾರವನ್ನು ಸ್ಥಳೀಯರು, ರಾಜಕಾರಣಿಗಳು ಮತ್ತು ಪ್ರವಾಸಿಗರು ಸ್ವಾಗತಿಸಿದ್ದಾರೆ. ಪ್ರವಾಸಿ ತಾಣಗಳ ಮರು ಆರಂಭದ ಬಳಿಕ, ಪ್ರವಾಸಿಗರು ಆಗಮಿಸುತ್ತಿರುವುದೂ ಕಂಡುಬಂದಿತು.
ಪಹಲ್ಗಾಮ್‌ಗೆ ಭೇಟಿ ನೀಡಿದ ಮಹಿಳಾ ಪ್ರವಾಸಿಗರೊಬ್ಬರು ಮಾತನಾಡಿ, "ಸರ್ಕಾರದ ಈ ನಿರ್ಧಾರ ಉತ್ತಮವಾಗಿದೆ. ಇದು ಸ್ಥಳೀಯರಿಗೂ ಅನುಕೂಲ ಮಾಡಿಕೊಡಲಿದೆ. ಪ್ರವಾಸಿ ಸ್ಥಳಗಳು ಸಾಕಷ್ಟು ಭದ್ರತೆಯೊಂದಿಗೆ ಮತ್ತೆ ತೆರೆಯುತ್ತಿವೆ. ಎಲ್ಲರೂ ಭೇಟಿ ನೀಡಿ ಇಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳಬಹುದು ಎಂದಿದ್ದಾರೆ.
ಮಾಹಿತಿ ಹಂಚಿಕೊಂಡ ಲೆಫ್ಟಿನೆಂಟ್ ಜನರಲ್: ಈ ಬಗ್ಗೆ ಎಕ್ಸ್ ಖಾತೆಯಲ್ಲೂ ಮಾಹಿತಿ ಹಂಚಿಕೊಂಡಿದ್ದ ಎಲ್ಜಿ ಸಿನ್ಹಾ ಅವರು, ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ ಕಾಶ್ಮೀರ ಮತ್ತು ಜಮ್ಮು ವಿಭಾಗಗಳಲ್ಲಿನ ಕೆಲವು ಪ್ರವಾಸಿ ತಾಣಗಳನ್ನು ಮತ್ತೆ ತೆರೆಯಲು ಆದೇಶಿಸಲಾಗಿದೆ. ಪಹಲ್ಗಾಮ್ ಮಾರುಕಟ್ಟೆ, ವೆರಿನಾಗ್ ಗಾರ್ಡನ್, ಕೊಕರ್ನಾಗ್ ಗಾರ್ಡನ್ ಮತ್ತು ಅಚಬಲ್ ಗಾರ್ಡನ್‌ನಲ್ಲಿರುವ ಬೇತಾಬ್ ವ್ಯಾಲಿ ಮತ್ತು ಉದ್ಯಾನವನಗಳನ್ನು ಜೂನ್ 17 ರಿಂದ ಮತ್ತೆ ತೆರೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಂದಿನ ಹಂತದಲ್ಲಿ ಬಾದಾಮ್ವಾರಿ ಪಾರ್ಕ್, ಡಕ್ ಪಾರ್ಕ್, ಶ್ರೀನಗರದ ತಕ್ದೀರ್ ಪಾರ್ಕ್, ಸರ್ತಾಲ್, ಕಥುವಾದಲ್ಲಿನ ಧಗ್ಗರ್, ದೇವಿ ಪಿಂಡಿ, ಸಿಯಾದ್ ಬಾಬಾ, ರಿಯಾಸಿಯ ಸುಲಾ ಪಾರ್ಕ್, ದೋಡಾದಲ್ಲಿ ಗುಲ್ದಂಡಾ ಮತ್ತು ಜೈ ಕಣಿವೆ ಮತ್ತು ಉಧಮ್‌ಪುರದ ಪಂಚೇರಿ ಪುನರಾರಂಭಗೊಳ್ಳಲಿದೆ" ಎಂದು ತಿಳಿಸಿದ್ದಾರೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉಗ್ರ ದಾಳಿ: ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಪಾಕಿಸ್ತಾನಿ ಉಗ್ರರು ದಾಳಿ ನಡೆಸಿ, 26 ಮಂದಿಯನ್ನು ಹತ್ಯೆ ಮಾಡಿದ್ದರು. ಇದರಲ್ಲಿ ಓರ್ವ ನೇಪಾಳಿ ಪ್ರವಾಸಿಗರೂ ಇದ್ದರು. ಇದು ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಸಂಘರ್ಷಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ: ಉಗ್ರರ ದಾಳಿ ಖಂಡಿಸಿ 35 ವರ್ಷಗಳ ಬಳಿಕ ಜಮ್ಮು- ಕಾಶ್ಮೀರ ಬಂದ್: ಮೃತರಿಗೆ ಪರಿಹಾರ ಘೋಷಣೆ
ನವದಂಪತಿಯ ಕನಸುಗಳನ್ನೇ ಕೊಂದ ಉಗ್ರರು; ಪತಿಯ ಶವಪೆಟ್ಟಿಗೆಯ ಮುಂದೆ ಕಣ್ಣೀರು ಸುರಿಸುತ್ತಾ ಜೈ ಹಿಂದ್ ಎಂದ ಪತ್ನಿ