ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ದೇಶದ ಸಿಜೆಐ ಆಗಿ ಸುಮಾರು 6 ತಿಂಗಳ ಅಧಿಕಾರಾವಧಿಯ ನಂತರ ಖನ್ನಾ ಮೇ 13ರಂದು ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.
ನ್ಯಾಯಮೂರ್ತಿ ಗವಾಯಿ ಅವರು 53ನೇ ಸಿಜೆಐ ಆಗಿ 6 ತಿಂಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ ಮತ್ತು ನವೆಂಬರ್ 23, 2025ರಂದು ನಿವೃತ್ತರಾಗಲಿದ್ದಾರೆ.
ಸಿಜೆಐ ಖನ್ನಾ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ನ್ಯಾಯಮೂರ್ತಿ ಗವಾಯಿ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಹಾಲಿ ಸಿಜೆಐ ಹಿರಿಯ ನ್ಯಾಯಾಧೀಶರನ್ನು ತಮ್ಮ ಉತ್ತರಾಧಿಕಾರಿಯಾಗಿ ಹೆಸರಿಸುವ ಸಂಪ್ರದಾಯದ ಪ್ರಕಾರ ಖನ್ನಾ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಮೆಮೊರಾಂಡಮ್ ಆಫ್ ಪ್ರೊಸೀಜರ್ ಪ್ರಕಾರ, ನಿವೃತ್ತಿಯ ಒಂದು ತಿಂಗಳ ಮೊದಲು ತಮ್ಮ ಉತ್ತರಾಧಿಕಾರಿಯನ್ನು ಹೆಸರಿಸುವಂತೆ ಕೇಂದ್ರ ಸರ್ಕಾರವು ನಿವೃತ್ತರಾಗಲಿರುವ ಸಿಜೆಐ ಅವರಿಗೆ ಮನವಿ ಮಾಡುತ್ತದೆ.
ನ್ಯಾಯಮೂರ್ತಿ ಗವಾಯಿ ಅವರು ಮೇ 29, 2019ರಂದು ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅವರು ನವೆಂಬರ್ 2003ರಲ್ಲಿ ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು ಮತ್ತು ನವೆಂಬರ್ 2005ರಲ್ಲಿ ಖಾಯಂ ನ್ಯಾಯಾಧೀಶರಾದರು.
ನ್ಯಾಯಾಧೀಶರಾಗುವ ಮುನ್ನ ಅವರು ಸಾಂವಿಧಾನಿಕ ಕಾನೂನು ಮತ್ತು ಆಡಳಿತ ಕಾನೂನುಗಳಲ್ಲಿ ವಕೀಲಿಕೆ ಮಾಡಿದರು. ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್, ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಮರಾವತಿ ವಿಶ್ವವಿದ್ಯಾಲಯದ ಸ್ಥಾಯಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಆಗಸ್ಟ್ 1992ರಲ್ಲಿ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠದಲ್ಲಿ ಸಹಾಯಕ ಸರ್ಕಾರಿ ವಕೀಲರಾಗಿ ಮತ್ತು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರು. ಜುಲೈ 1993 ರವರೆಗೆ ಈ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಜನವರಿ 17, 2000ರಂದು ನಾಗ್ಪುರ ಪೀಠದ ಸರ್ಕಾರಿ ವಕೀಲರಾಗಿ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಅವರು ನೇಮಕಗೊಂಡರು.
ಇದನ್ನೂ ಓದಿ: ತಮಿಳುನಾಡಿನ ಗ್ರಾಮದ 300 ಕುಟುಂಬಗಳಿಗೆ ವಕ್ಫ್ ನೋಟಿಸ್: ಆಸ್ತಿ ಬಳಸಿದ್ದಕ್ಕೆ ಕಂದಾಯ ಕಟ್ಟಲು ಸೂಚನೆ - WAQF BOARD