ಇಂಫಾಲ್(ಮಣಿಪುರ): ಮಣಿಪುರ ಪೊಲೀಸರು ಕಳೆದ 24 ಗಂಟೆಗಳಲ್ಲಿ ವಿವಿಧ ಸಂಘಟನೆಗಳ 14 ಉಗ್ರರನ್ನು ಬಂಧಿಸಿದ್ದು, ಅವರಿಂದ ಶಸ್ತ್ರಾಸ್ತ್ರ, ಮದ್ದುಗುಂಡು, ನಗದು, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ 14 ಉಗ್ರರನ್ನು ತೌಬಾಲ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೆಂಗ್ನೌಪಾಲ್, ಬಿಷ್ಣುಪುರ್ ಮತ್ತು ಜಿರಿಬಾಮ್ ಜಿಲ್ಲೆಗಳಿಂದ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
14 ಉಗ್ರರ ಪೈಕಿ ಇಂಫಾಲ್ ಪೂರ್ವ ಮತ್ತು ತೌಬಲ್ ಜಿಲ್ಲೆಗಳಿಂದ ತಲಾ ನಾಲ್ವರನ್ನು, ತೆಂಗ್ನೌಪಾಲ್ ಜಿಲ್ಲೆಯಿಂದ ಮೂವರನ್ನು, ಇಂಫಾಲ್ ಪಶ್ಚಿಮ, ಬಿಷ್ಣುಪುರ ಮತ್ತು ಜಿರಿಬಾಮ್ ಜಿಲ್ಲೆಗಳಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತ ಉಗ್ರರು ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ (ಕೆಸಿಪಿ), ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್ಎಲ್ಎಫ್), ಪ್ರೆಪಾಕ್ ಮತ್ತು ಸೋಷಿಯಲಿಸ್ಟ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (ಎಸ್ಒಆರ್ಇಪಿಎ) ಸಂಘಟನೆಗಳಿಗೆ ಸೇರಿದವರಾಗಿದ್ದಾರೆ.
ವಿವಿಧ ಜಿಲ್ಲೆಗಳ ಸರ್ಕಾರಿ ನೌಕರರು, ಗುತ್ತಿಗೆದಾರರು, ವ್ಯಾಪಾರಿಗಳು ಮತ್ತು ಸಾಮಾನ್ಯ ಜನರಿಂದ ಹಣ ಸುಲಿಗೆ ಸೇರಿದಂತೆ ವಿವಿಧ ಅಪರಾಧಗಳಲ್ಲಿ ಬಂಧಿತ ಉಗ್ರರು ಭಾಗಿಯಾಗಿದ್ದರು. ಬಂಧಿತರಿಂದ ಪಿಸ್ತೂಲ್ಗಳು, ಹೈ ಪವರ್ ಗ್ರೆನೇಡ್ಗಳು, ಮೊಬೈಲ್ ಹ್ಯಾಂಡ್ ಸೆಟ್ಗಳು, ಕಾರು, ಹಲವಾರು ದ್ವಿಚಕ್ರ ವಾಹನಗಳು ಮತ್ತು ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯಲ್ಲಿ ಬಂಧಿಸಲ್ಪಟ್ಟ ಯುಎನ್ಎಲ್ಎಫ್ ಭಯೋತ್ಪಾದಕರ ಪೈಕಿ ಒಬ್ಬನಿಂದ 21.50 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಡ್ಡಗಾಡು ಮತ್ತು ಕಣಿವೆ ಜಿಲ್ಲೆಗಳ ಅಂಚಿನ ಹಾಗೂ ದುರ್ಗಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿವೆ ಎಂದು ಅಧಿಕಾರಿ ಹೇಳಿದರು. ಕಾರ್ಯಾಚರಣೆಯ ಸಮಯದಲ್ಲಿ, ಚುರಾಚಂದ್ ಪುರ ಜಿಲ್ಲೆಯ ಗೆಲ್ಮೋಲ್ ಗ್ರಾಮದಲ್ಲಿ ಗ್ರಾಮ ಸ್ವಯಂಸೇವಕರ ತರಬೇತಿ ಶಿಬಿರದ ತಾತ್ಕಾಲಿಕ ಟೆಂಟ್ಗಳನ್ನು ನಾಶ ಮಾಡಲಾಯಿತು.
ಕಳೆದ ಒಂದು ವಾರದ ಅವಧಿಯಲ್ಲಿ ನಡೆಸಲಾದ ಸರಣಿ ಜಂಟಿ ಕಾರ್ಯಾಚರಣೆಗಳಲ್ಲಿ ಸೇನೆ, ಅಸ್ಸಾಂ ರೈಫಲ್ಸ್, ಸಿಆರ್ಪಿಎಫ್, ಬಿಎಸ್ಎಫ್, ಐಟಿಬಿಪಿ ಮತ್ತು ಮಣಿಪುರ ಪೊಲೀಸರು ಚುರಾಚಂದ್ಪುರ, ಬಿಷ್ಣುಪುರ, ಇಂಫಾಲ್ ಪೂರ್ವ, ಕಕ್ಚಿಂಗ್, ಜಿರಿಬಾಮ್, ಕಾಂಗ್ಪೋಕ್ಪಿ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಿಂದ 77 ಶಸ್ತ್ರಾಸ್ತ್ರಗಳು, ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ), ಗ್ರೆನೇಡ್ಗಳು, ವಿವಿಧ ಮದ್ದುಗುಂಡುಗಳು ಮತ್ತು ಯುದ್ಧ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಈ ಮಾನ್ಸೂನ್ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ, ಎಲ್ ನಿನೊ ಪ್ರಭಾವ ಇಲ್ಲ: ಹವಾಮಾನ ಇಲಾಖೆ - IMD WEATHER FORECAST