ಹೈದರಾಬಾದ್: ತೆಲಂಗಾಣದ ಮಹಾತ್ವಕಾಂಕ್ಷೆಯ ಹುಲಿ ಯೋಜನೆ ಪ್ರಾರಂಭವಾಗಿ 9 ವರ್ಷಗಳು ಕಳೆದಿದೆ. ಇದೀಗ ಈ ಆವಾಸಸ್ಥಾನದಲ್ಲಿರುವ ಬುಡಕಟ್ಟು ಜನರನ್ನು ಸರ್ಕಾರ ಯಶಸ್ವಿಯಾಗಿ ಸ್ಥಳಾಂತರ ಮಾಡುವ ಮೂಲಕ ಸಂರಕ್ಷಣೆಯಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ.
ನಿರ್ಮಲ್ ಜಿಲ್ಲೆಯ ಕವ್ವಾಲ್ ಹುಲಿ ಅಭಯಾರಣ್ಯದ ಕೇಂದ್ರ ಪ್ರದೇಶದಿಂದ ಬುಡಕಟ್ಟು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿದ್ದು, ತೆಲುಗು ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹುಲಿಗಳ ಸುರಕ್ಷಿತ ತಾಣಕ್ಕಾಗಿ ಬುಡಕಟ್ಟು ನಿವಾಸಿಗಳು ತಮ್ಮ ಆವಾಸಸ್ಥಾನ ತೊರೆದಿದ್ದಾರೆ.
ಸಂರಕ್ಷಿತ ಅರಣ್ಯದ ಪ್ರಮುಖ ವಲಯದಲ್ಲಿದ್ದ ಕಡಂ ಮಂಡಲದ ಮೈಸಂಪೇಟಾ ಮತ್ತು ರಾಂಪುರದ ಬುಡಕಟ್ಟು ಜನರು ಸ್ಥಳಾಂತರಗೊಂಡಿದ್ದಾರೆ. ಇಲ್ಲಿ ಮಾನವ ಚಟುವಟಿಕೆ ಇದ್ದ ಕಾರಣಕ್ಕಾಗಿ ಹುಲಿ ಆವಾಸಸ್ಥಾನಕ್ಕೆ ಅಡ್ಡಿಯಾಗುತ್ತಿತ್ತು. ಹುಲಿ ಯೋಜನೆ ಗುರಿಯೊಂದಿಗೆ ಅರಣ್ಯ ಪ್ರದೇಶದ ಹೊರಗೆ ಹೊಸದಾಗಿ ಅಭಿವೃದ್ಧಿ ಮಾಡಲಾಗಿರುವ ಪುನರ್ವಸತಿ ಕಾಲೋನಿಯಲ್ಲಿ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಿ, ಸಂಪೂರ್ಣ ಸ್ಥಳಾಂತರ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಸ್ವಯಂ ಸ್ಥಳಾಂತರ ಮಾದರಿ ಯಶಸ್ವಿ: ನಿರ್ಮಲ್ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿ 2017ರಲ್ಲಿ ಈ ಸ್ಥಳಾಂತರ ಕಾರ್ಯವನ್ನು ಆರಂಭಿಸಿತು. ಮೈಸಂಪೇಟಾದ 105 ಹಾಗೂ ರಾಂಪುರದ 37 ಸೇರಿ ಒಟ್ಟು 142 ಕುಟುಂಬಗಳನ್ನು ಗುರುತಿಸಲಾಗಿತ್ತು. ಈ ಸ್ಥಳಾಂತರ ಪ್ರಕ್ರಿಯೆಯು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮಾರ್ಗಸೂಚಿ ಅಡಿ ನಡೆಸಲಾಗಿದ್ದು, ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ಆರ್ಥಿಕ ಪರಿಹಾರ ಅಥವಾ ಭೂಮಿ ಮತ್ತು ಮನೆ ಹೊಂದಿರುವ ಹೊಸ ಕಾಲೋನಿಯ ಆಯ್ಕೆ ನೀಡಲಾಗಿತ್ತು.
ಇದರ ಅನುಸಾರವಾಗಿ 48 ಕುಟುಂಬಗಳು ತಲಾ 15 ಲಕ್ಷದಂತೆ ಆರ್ಥಿಕ ಪರಿಹಾರ ಆಯ್ಕೆ ಮಾಡಿಕೊಂಡರೆ, 94 ಕುಟುಂಬಗಳಿಗೆ ಕೃಷಿ ಭೂಮಿ, ಮನೆ ಮತ್ತು ಅಗತ್ಯ ವಸ್ತುಗಳನ್ನು ಹೊಂದಿರುವಂತೆ 276.03 ಎಕರೆಯಲ್ಲಿ ಕಾಲೋನಿ ನಿರ್ಮಾಣ ಮಾಡಲಾಗಿದೆ. ಹೊಸದಾಗಿ ನಿರ್ಮಾಣ ಮಾಡಿರುವ ಕಾಲೋನಿ ಅವರ ಮೂಲ ಮನೆಗಳಿಂದ 15 ಕಿ.ಮೀ ದೂರದಲ್ಲಿವೆ.
ಇದನ್ನೂ ಓದಿ: ಹಾವೇರಿ: ಮೂರು ಸಾವಿರ ಎಕರೆ ಅರಣ್ಯ ಪ್ರದೇಶದ ರಕ್ಷಣೆಗೆ ಕಟಿಬದ್ಧರಾದ ಗ್ರಾಮಸ್ಥರು
ಹೊಸ ಕಾಲೋನಿಯಲ್ಲಿ ಏನೇನೆಲ್ಲ ಇವೆ ಗೊತ್ತಾ?: ಕಳೆದ ಏಪ್ರಿಲ್ 15ರಂದು ಈ ಕುಟುಂಬಗಳು ಹೊಸದಾಗಿ ನಿರ್ಮಾಣ ಮಾಡಿರುವ ಮನೆಗೆ ಗೃಹ ಪ್ರವೇಶ ಮಾಡಿದರು. ಅರಣ್ಯದ 112 ಹೆಕ್ಟೇರ್ ಡಿನೋಟಿಫೈಡ್ ಜಾಗದಲ್ಲಿ ಈ ಕಾಲೋನಿ ನಿರ್ಮಿಸಲಾಗಿದೆ. ಇದರಲ್ಲಿ ಅಂಗನವಾಡಿ ಕೇಂದ್ರ, ಸಮುದಾಯ ಭವನ, ನೀರಿನ ಸೌಕರ್ಯ, ಒಳ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.
ಹುಲಿಗಳನ್ನು ಆಕರ್ಷಿಸಲಿರವ ಹೊಸ ಹಸಿರು ಭೂಮಿ: ಇಲ್ಲಿನ ನಿವಾಸಿಗಳಿಗೆ ವ್ಯವಸ್ಥೆ ಕಲ್ಪಿಸಿದ ಬಳಿಕ ಅರಣ್ಯ ಇಲಾಖೆ ಇಲ್ಲಿ ಆವಾಸ ಸ್ಥಾನ ಅಭಿವೃದ್ಧಿಗೆ ಗಮನಹರಿಸಿದೆ. ಮೈಸಂಪೇಟಾದಲ್ಲಿ 50 ಹೆಕ್ಟೇರ್ ಮತ್ತು ರಾಂಪುರದಲ್ಲಿ 20 ಹೆಕ್ಟೇರ್ ಹಸಿರು ಭೂಮಿಯನ್ನು ಬೆಳೆಸುವ ಮೂಲಕ ಹುಲಿಗಳ ಚಲನೆಗೆ ಬೆಂಬಲ ನೀಡುವಂತೆ ಹಾಗೂ ಆಕರ್ಷಿಸುವಂತೆ ರೂಪಿಸಲಾಗಿದೆ.
ಈ ಪ್ರಕ್ರಿಯೆಗೆ ಮೈಸಂಪೇಟಾ ಮತ್ತು ರಾಂಪುರದ ಜನರು ಸ್ವಯಂ ಕಾರ್ಯಕರ್ತರಾಗಿ ದುಡಿಯಲು ಮುಂದೆ ಬಂದು ಸಹಕಾರ ನೀಡಿದ್ದಾರೆ. ಅದೇ ಮಂಡಲದಿಂದ 15 ಕಿ.ಮೀ ದೂರದಲ್ಲಿ ಸಂಪೂರ್ಣ ಸುಸುಜ್ಜಿತ ಕಾಲೋನಿ ನಿರ್ಮಾಣ ಮಾಡಲಾಗಿದೆ. ಅವರೆಲ್ಲ ಖುಷಿಯಿಂದ ಅಲ್ಲಿಗೆ ಹೋಗಿದ್ದಾರೆ. ಇದೀಗ ಹುಲಿಗಳ ಹಾದಿ ಸುಗಮವಾಗಿದೆ ಎಂದು ಅರಣ್ಯ ಸಂರಕ್ಷಣೆಯ ಪ್ರಧಾನ ಮುಖ್ಯಸ್ಥ ಎಲು ಸಂಗ್ ಮೆರು ತಿಳಿಸಿದ್ದಾರೆ.
ಅಮ್ರಾಬಾದ್ ಹುಲಿ ಅಭಯಾರಣ್ಯದತ್ತ ಗಮನ: ಈ ಯೋಜನೆಯ ಯಶಸ್ಸಿನ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆ ಇದೇ ಮಾದರಿಯನ್ನು ಕವ್ವಾಲ್ ಮತ್ತು ಅಮ್ರಾಬಾದ್ ಅರಣ್ಯ ಸಂರಕ್ಷಣೆಯಲ್ಲಿ ನಡೆಸಲು ಮುಂದಾಗಿದೆ. ಈ ಮೂಲಕ ಯಾವುದೇ ಅಡೆತಡೆ ಇಲ್ಲದೇ ಸುರಕ್ಷಿತ ಹುಲಿ ಕಾರಿಡರ್ ರೂಪಿಸುವ ಗುರಿ ಹೊಂದಲಾಗಿದೆ
ಈ ಉಪಕ್ರಮವು ಸಂರಕ್ಷಣೆ ಮತ್ತು ಮಾನವ ಅಭಿವೃದ್ಧಿಯು ಜೊತೆ ಜೊತೆಯಾಗಿ ವನ್ಯಜೀವಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಹಾಗೇ ಸಂರಕ್ಷಿತ ಅರಣ್ಯಕ್ಕಾಗಿ ತಮ್ಮ ಭೂಮಿಯನ್ನು ಬಿಟ್ಟುಕೊಡುವವರಿಗೆ ಘನತೆ ಮತ್ತು ಸುಸ್ಥಿರತೆಯ ಖಾತ್ರಿ ನೀಡಿದೆ.
ಇದನ್ನೂ ಓದಿ: ಚಾಮರಾಜನಗರ : ಹಂದಿಯನ್ನು ಬೇಟೆಯಾಡಿ ತಿಂದ ಹುಲಿ, ವ್ಯಾಘ್ರನ ಚಲನವಲನದ ದೃಶ್ಯ ಸೆರೆ